ಸಿಇಟಿ ಪರೀಕ್ಷೆ ಸುಸೂತ್ರ ಆರಂಭ

dvg-cet-exam-1.jpg
Published on

ದಾವಣಗೆರೆ :  ಜಿಲ್ಲೆಯ 28 ಕೇಂದ್ರಗಳಲ್ಲಿ ಬುಧವಾರ ಸಿಇಟಿ ಪರೀಕ್ಷೆಗಳು ಸುಸೂತ್ರವಾಗಿ ಆರಂಭಗೊಂಡವು.  ಪರೀಕ್ಷೆಗೆ ಒಟ್ಟು 12,886 ವಿದ್ಯಾರ್ಥಿಗಳು ನೋಂದಾಯಿಸಿದ್ದು, ಭೌತಶಾಸ್ತ್ರ ವಿಷಯದ ಪರೀಕ್ಷೆಗೆ 339 ಮಂದಿ ಹಾಗೂ ರಸಾಯನಶಾಸ್ತ್ರ ವಿಷಯದ ಪರೀಕ್ಷೆಗೆ 343 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.  ನಗರದ ವಿವಿಧ ಕಾಲೇಜುಗಳಲ್ಲಿ ಪರೀಕ್ಷೆಗಳು ನಡೆದವು. ಪರೀಕ್ಷಾ ಕೇಂದ್ರಕ್ಕೆ ಬಂದ ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಕೊಠಡಿ ಸಂಖ್ಯೆಯನ್ನು ಸೂಚನಾ ಫಲಕದಲ್ಲಿ ಗಮನಿಸಿದರು.  ಸಾಲಾಗಿ ಬಂದ ವಿದ್ಯಾರ್ಥಿಗಳ ದಾಖಲಾತಿಗಳನ್ನು ಪರಿಶೀಲಿಸಿ ಒಳಗೆ ಬಿಡಲಾಯಿತು. ಕಾಲೇಜಿನ ಸಿಬ್ಬಂದಿ ಧ್ವನಿವರ್ಧಕದ ಮೂಲಕ ಸೂಚನೆಗಳನ್ನು ನೀಡಿದರು. ಕೆಲವು ವಿದ್ಯಾರ್ಥಿಗಳು ತಡವಾಗಿ ಬಂದು ಧಾವಂತದಲ್ಲಿ ಪರೀಕ್ಷಾ ಕೇಂದ್ರವನ್ನು ಪ್ರವೇಶಿಸಿದರು.  ಅಭ್ಯರ್ಥಿಗಳು ಮನೆಯಿಂದ ತಂದಿದ್ದ ಬ್ಯಾಗ್‌ಗಳನ್ನು ಹೊರಗೆ ಇಡುವ ವ್ಯವಸ್ಥೆ ಮಾಡಲಾಗಿತ್ತು. ಮಕ್ಕಳೊಂದಿಗೆ ಬಂದಿದ್ದ ಪಾಲಕರು ಪರೀಕ್ಷಾ ಕೇಂದ್ರದ ಹೊರಗೆ ಕಾಯುತ್ತಿದ್ದ ದೃಶ್ಯ ಕಂಡುಬಂದಿತು.  ನಗರದ ಮೋತಿ ವೀರಪ್ಪ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಜೀನ್ಸ್ ಪ್ಯಾಂಟ್ ಧರಿಸಿ ಬಂದಿದ್ದ ವಿದ್ಯಾರ್ಥಿಯನ್ನು ತಡೆದ ಸಿಬ್ಬಂದಿ ಪರೀಕ್ಷಾ ನಿಯಮಗಳ ಬಗ್ಗೆ ತಿಳಿಸಿದರು. ನಂತರ ವಿದ್ಯಾರ್ಥಿಯ ತಂದೆ ಬೇರೊಂದು ಪ್ಯಾಂಟ್ ತರಬೇಕಾಯಿತು ಎಂದು ತಿಳಿದು ಬಂದಿದೆ. ಗುರುವಾರ ಗಣಿತ ಹಾಗೂ ಜೀವಶಾಸ್ತ್ರ ವಿಷಯಗಳ ಪರೀಕ್ಷೆ ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net