

ದಾವಣಗೆರೆ : ಜಾತಿ ಗಣತಿಯ ಎರಡನೇ ದಿನವಾದ ಮಂಗಳವಾರವೂ ತಾಂತ್ರಿಕ ತೊಂದರೆ ಹಾಗೂ ಗೊಂದಲ ಮುಂದುವರಿದಿದೆ. ತರಬೇತಿ ಪಡೆದು ಸಮೀಕ್ಷೆ ನಡೆಸುತ್ತಿರುವ ಸಿಬ್ಬಂದಿಗೆ ಏನು ಮಾಡಬೇಕು ಎಂಬುದೇ ತೋಚುತ್ತಿಲ್ಲ. ಎಲ್ಲವೂ ಗೋಜಲು ಗೋಜಲಾಗಿದೆ. ಪರಿಣಾಮವಾಗಿ ಪ್ರಕ್ರಿಯೆ ಇನ್ನೂ ಹಳಿ ಮೇಲೆಯೇ ಬಂದಿಲ್ಲ!. ಮೊಬೈಲ್ ಹಿಡಿದು ಹೊರಡುವ ಗಣತಿದಾರರು ಆ್ಯಪ್‌ನ ಗೊಂದಲಗಳಿಂದ ದಿಕ್ಕೆಟ್ಟು ಹೋಗಿದ್ದಾರೆ. ‘ಎರರ್’, ‘ಸಬ್‌ಮಿಷನ್ ಫೇಲ್ಡ್’ ಎಂದು ಬರುತ್ತಿದ್ದು ತಾಂತ್ರಿಕ ಸಮಸ್ಯೆಯಿಂದಾಗಿ ಸಮೀಕ್ಷೆಯಲ್ಲಿ ಪ್ರಗತಿ ತೋರಿಸಲು ಆಗುತ್ತಿಲ್ಲ. ಯುಎಚ್‌ಐಡಿ ಸಂಖ್ಯೆ ಮತ್ತು ಜಿಯೋಟ್ಯಾಗ್‌ನಲ್ಲಿ ಇರುವ ಸಂಖ್ಯೆಗೆ ತಾಳೆಯಾಗುತ್ತಿಲ್ಲ. ಇದ್ದಕ್ಕಿದ್ದಂತೆ ಲಾಗೌಟ್ ಆಗುತ್ತದೆ. ಆ್ಯಪ್ ಕ್ರಾೃಶ್ ಆಗುತ್ತಿದೆ. ಕೆಲವರಿಗೆ ಒಟಿಪಿ ಬರುತ್ತಿಲ್ಲ ಎನ್ನುತ್ತಾರೆ ಗಣತಿದಾರರು. ಗಣತಿ ಮಾಡಬೇಕಾದ ಮನೆಗಳು ಎಲ್ಲಿವೆ ಎಂದು ಲೊಕೇಶನ್ ಗೊತ್ತಾಗುತ್ತಿಲ್ಲ. ಆ್ಯಪ್‌ನಲ್ಲಿ ತೋರಿಸಿದ ಜಾಗಕ್ಕೆ ಹೋದರೆ ಅಲ್ಲಿ ಮನೆಯೇ ಇರುವುದಿಲ್ಲವಂತೆ! ಜಿಯೋಟ್ಯಾಗ್ ಸ್ಟಿಕ್ಕರ್ ಬಗ್ಗೆಯೂ ದೂರುಗಳಿವೆ. ಕೆಲವು ಕಡೆ ಅದರಲ್ಲಿನ ಯುಎಚ್‌ಐಡಿ ಸಂಖ್ಯೆ ಅಳಿಸಿ ಹೋಗಿದೆಯಂತೆ, ಕೆಲವು ಕಡೆ ನಂಬರ್ ಬರೆದೇ ಇಲ್ಲ ಎಂಬ ಮಾತು ಕೇಳಿಬಂದಿದೆ. ಜಾತಿಗಣತಿ ಮಾಡಬೇಕಿರುವುದು ಮನೆಗಳಲ್ಲಿ. ಆದರೆ ಕೆಲವು ಕಡೆ ದನದ ಮನೆ, ಶೆಡ್, ದಿನಸಿ ಅಂಗಡಿ, ಫ್ಯಾಕ್ಟರಿ ಅಂಥ ಕಡೆಗಳಲ್ಲೂ ಜಿಯೋಟ್ಯಾಗ್ ಹಾಕಿದ್ದಾರೆ. ಗಣತಿದಾರರು ಅಲ್ಲಿಗೆ ಹೋದಾಗ ತಬ್ಬಿಬ್ಬಾಗುತ್ತಿದ್ದಾರೆ. ಇಷ್ಟೆಲ್ಲ ತೊಂದರೆಗಳಿವೆ. ಇದನ್ನೆಲ್ಲ ಯಾರ ಮುಂದೆ ಹೇಳಿಕೊಳ್ಳಬೇಕು? ನಮಗೆ ಮೇಲ್ವಿಚಾರಕರು, ನೋಡಲ್ ಅಧಿಕಾರಿಗಳು ಯಾರೆಂಬುದನ್ನೇ ಹೇಳಿಲ್ಲ. ಸಮಸ್ಯೆ ಯಾರ ಮುಂದೆ ಹೇಳಿಕೊಳ್ಳೋಣ ಎಂದು ಪ್ರಶ್ನಿಸುತ್ತಿದ್ದಾರೆ. ಈ ಗೊಂದಲದ ಕುರಿತು ಅಧಿಕಾರಿಗಳನ್ನು ಕೇಳಿದರೆ, ಗಣತಿದಾರರಿಗೆ ಆ್ಯಪ್ ಯಾವ ರೀತಿ ಬಳಸಬೇಕು ಎಂಬುದು ಗೊತ್ತಾಗುತ್ತಿಲ್ಲ. ಒಬ್ಬೊಬ್ಬರ ಬಳಿ ಒಂದೊಂದು ಮಾಡೆಲ್‌ನ ಫೋನ್ ಇರುತ್ತವೆ. ಕಾಲ ಕಾಲಕ್ಕೆ ಅಪ್‌ಡೇಟ್ ಮಾಡಿಕೊಳ್ಳಬೇಕು. ಕ್ರಮೇಣ ಎಲ್ಲದೂ ಸರಿಹೋಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ. ...