ಬೋಧನೆಯ ಜತೆಗೆ ಗಣತಿ ಕಾರ್ಯ

Centre-Confirms-Caste-Census-to.jpg
Published on

ರಮೇಶ ಜಹಗೀರದಾರ್ ದಾವಣಗೆರೆ : ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆಗೆ ನಿಗದಿಪಡಿಸಿದ್ದ ಅವಧಿಯನ್ನು ಜೂ. 8ರ ವರೆಗೆ ವಿಸ್ತರಿಸಿ ನ್ಯಾ. ಡಾ. ಎಚ್.ಎನ್. ನಾಗಮೋಹನ್ ದಾಸ್ ಏಕ ಸದಸ್ಯ ಆಯೋಗ ಆದೇಶ ಹೊರಡಿಸಿದೆ.
 ಈ ನಡುವೆ ಶೈಕ್ಷಣಿಕ ವರ್ಷ ಆರಂಭವಾಗಿರುವುದರಿಂದ ಶಿಕ್ಷಕರು ಶಾಲೆಗೆ ಹೋಗಬೇಕಿದೆ. ಅವರೇ ಗಣತಿದಾರರೂ ಆಗಿರುವದರಿಂದ ತಮಗೆ ವಹಿಸಲಾದ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಬೇಕಿದೆ. ತಮಗೆ ನಿಗದಿಗೊಳಿಸಿದ ಗುರಿಯನ್ನು ಶೇ. 100 ರಷ್ಟು ಸಾಧಿಸಬೇಕಾಗಿದೆ.
 ರಾಜ್ಯದಲ್ಲಿ ಸಮೀಕ್ಷಾ ಕಾರ್ಯವನ್ನು ಮೇ 5 ರಿಂದ ನಡೆಸಲಾಗುತ್ತಿದೆ. ಈ ಮೊದಲು ಮೇ 17 ರೊಳಗೆ ಸಮೀಕ್ಷೆ ಮುಗಿಸಬೇಕು ಎಂದು ಸೂಚನೆ ನೀಡಲಾಗಿತ್ತು. ಆದರೆ ತಾಂತ್ರಿಕ ತೊಂದರೆಗಳು ಎದುರಾಗಿ ಪ್ರಕ್ರಿಯೆ ವಿಳಂಬವಾಗಿತ್ತು. ನಂತರ ಮನೆ ಮನೆ ಸಮೀಕ್ಷೆಯನ್ನು ಮೇ 29ರ ವರೆಗೆ ಹಾಗೂ ವಿಶೇಷ ಶಿಬಿರವನ್ನು ಮೇ 30 ರಿಂದ ಜೂ. 1ರ ವರೆಗೆ ವಿಸ್ತರಿಸಲಾಗಿತ್ತು.
 ಬಿಬಿಎಂಪಿ ವ್ಯಾಪ್ತಿಯ ವಲಯಗಳಲ್ಲಿ ಮಳೆ/ಹವಾಮಾನ ವೈಪರೀತ್ಯ ಕಾರಣಗಳಿಂದ ಸಮೀಕ್ಷೆಯು ನಿರೀಕ್ಷಿತ ಮಟ್ಟದಲ್ಲಿ ಪೂರ್ಣಗೊಂಡಿಲ್ಲ. ಸಮೀಕ್ಷಾ ಅವಧಿಯನ್ನು ವಿಸ್ತರಿಸುವಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು ವಿನಂತಿಸಿದ್ದರು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯೂ ಅವಧಿ ವಿಸ್ತರಿಸುವಂತೆ ಕೋರಲಾಗಿತ್ತು.
 ಈ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿಯ ಜನರೆಲ್ಲರೂ ಸಮೀಕ್ಷಾ ಕಾರ್ಯದಲ್ಲಿ ಭಾಗವಹಿಸಲು ಅನುವಾಗುವಂತೆ ಅವಧಿ ವಿಸ್ತರಿಸಲಾಗಿದೆ ಎಂದು ಆಯೋಗದ ಕಾರ್ಯದರ್ಶಿ ಬಿಬಿಎಂಪಿ ಮುಖ್ಯ ಆಯುಕ್ತರಿಗೆ, ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಹಾಗೂ ಬಿಬಿಎಂಪಿಯ ಎಲ್ಲ ವಲಯ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
 ಶಿಕ್ಷಕರು ಮನೆ ಮನೆಗೆ ಹೋಗಿ ಸಮೀಕ್ಷೆ ಮಾಡುವುದು ಮುಗಿದಿದೆ. ಈಗ ಸಮೀಕ್ಷಾ ಬ್ಲಾಕ್ ವ್ಯಾಪ್ತಿಯಲ್ಲಿ ವಿಶೇಷ ಶಿಬಿರದಲ್ಲಿ ಇದ್ದು, ಬಾಕಿ ಇರುವವರ ಸಮೀಕ್ಷಾ ಕಾರ್ಯವನ್ನು ಪೂರ್ಣಗೊಳಿಸಬೇಕಿದೆ. ಆನ್‌ಲೈನ್ ಮೂಲಕ ಸ್ವಯಂ ಘೋಷಣೆ ಮಾಡುವುದೂ ಜೂ. 8ರ ವರೆಗೆ ಮುಂದುವರಿಯಲಿದೆ.
 ...

 (ಬಾಕ್ಸ್)
 ಗೊಂದಲಕ್ಕೆ ತೆರೆ
 ಸಮೀಕ್ಷೆಯ ಅವಧಿಯನ್ನು ಜೂ. 8ರ ವರೆಗೆ ವಿಸ್ತರಣೆ ಮಾಡಲಾಗಿದೆ ಎಂದು, ಏಕ ಸದಸ್ಯ ಆಯೋಗದ ಕಾರ್ಯದರ್ಶಿ ಜಿಲ್ಲಾಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖವಾಗಿದೆ.
 ಆದರೆ ಜಿಲ್ಲಾಧಿಕಾರಿಯಿಂದ, ಡಿಡಿಪಿಐ ಅಥವಾ ಬಿಇಒ ಕಡೆಯಿಂದ ಈ ಕುರಿತು ಮರು ಆದೇಶ ಆಗಿರಲಿಲ್ಲ. ಇದು ಬೆಳಗ್ಗೆಯಿಂದ ಗೊಂದಲಕ್ಕೆ ಕಾರಣವಾಗಿತ್ತು.
 ಪರಿಣಾಮವಾಗಿ ಸೋಮವಾರ ಕೆಲವು ಶಿಕ್ಷಕರು ಶಾಲೆಗೆ ಹೋಗಿದ್ದರೆ ಮತ್ತೆ ಕೆಲವರು ಗಣತಿ ಕಾರ್ಯ ನಡೆಯುವ ಶಿಬಿರಕ್ಕೆ ತೆರಳಿದ್ದರು. ಶಾಲೆಗೆ ಹೋಗದಿದ್ದರೆ ಗೈರುಹಾಜರು ಎಂದು ನಮೂದಿಸಲಾಗುತ್ತದೆ. ಗಣತಿ ಕಾರ್ಯಕ್ಕೆ ಗೈರಾದರೆ ಸಂಬಂಧಿಸಿದ ಅಧಿಕಾರಿಗಳು ಪ್ರಶ್ನೆ ಮಾಡುತ್ತಾರೆ. ಹಾಗಾದರೆ ನಾವೇನು ಮಾಡಬೇಕು ಎನ್ನುವ ದ್ವಂದ್ವ ಬೆಳಗ್ಗೆ ಶಿಕ್ಷಕರಲ್ಲಿತ್ತು.
 ಆದರೆ ಸಂಜೆ ವೇಳೆಗೆ ಈ ಗೊಂದಲಕ್ಕೆ ತೆರೆ ಬಿದ್ದಿತು. ಆಯೋಗದಿಂದ ಬಂದಿದ್ದ ಪತ್ರವನ್ನು ಆಧರಿಸಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರು ಮರು ಆದೇಶ ಮಾಡಿದರು.
 ಜಿಲ್ಲೆಯಲ್ಲಿ ಗ್ರಾಮಾಂತರ ಹಾಗೂ ನಗರ ಪ್ರದೇಶಗಳಲ್ಲಿ ಈಗಾಗಲೇ ಶೇ. 100 ರಷ್ಟು ಸಮೀಕ್ಷೆ ಮುಗಿಸಿರುವ ಗಣತಿದಾರರಿಂದ ಎ, ಬಿ ಮತ್ತು ಸಿ ನಮೂನೆಯಲ್ಲಿ ಸಮೀಕ್ಷಾ ವರದಿಯನ್ನು ಪಡೆದು, ಅವರನ್ನು ಜಾತಿ ಗಣತಿ ಸಮೀಕ್ಷಾ ಕಾರ್ಯದಿಂದ ಬಿಡುಗಡೆ ಗೊಳಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದ್ದಾರೆ.
 ಶೇ. 100 ರಷ್ಟು ಗಣತಿ ಆಗದೇ ಇರುವ ಸಮೀಕ್ಷಾ ಬ್ಲಾಕ್ ವ್ಯಾಪ್ತಿಯ ಶಿಕ್ಷಕರಿಂದ ವಿಶೇಷ ಶಿಬಿರಗಳ ಮುಖಾಂತರ ಸಮೀಕ್ಷೆ ಮಾಡಿಸಿ, ನಿಗದಿಪಡಿಸಿದ ದಿನಾಂಕದ ಒಳಗಾಗಿ ಸಮೀಕ್ಷಾ ಕಾರ್ಯ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ನಿರ್ದೇಶನ ನೀಡಿದ್ದಾರೆ.
 ಪ್ರಸ್ತುತ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಮುಗಿಸಿ ಶಿಕ್ಷಕರು ತರಗತಿಗಳನ್ನು ಆರಂಭಿಸಬೇಕಿದೆ. ಸೇತುಬಂಧ ಕಾರ್ಯಕ್ರಮ ಮಾಡಬೇಕಿದೆ.
 ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net