

ದಾವಣಗೆರೆ : ಒಳ ಮೀಸಲಾತಿ ಜಾರಿ ಸಂಬಂಧ ಮೇ 5 ರಿಂದ ರಾಜ್ಯಾದ್ಯಂತ ಜಾತಿ ಗಣತಿ ಕಾರ್ಯ ಆರಂಭವಾಗಿದ್ದು, ಇದೇ 17 ಕ್ಕೆ ಒಂದನೇ ಹಂತದ ಜಾತಿ ಗಣತಿ ಮುಕ್ತಾಯಗೊಳ್ಳಲಿದೆ. ಭೋವಿ ಸಮಾಜದ ಪ್ರತಿಯೊಬ್ಬರೂ ತಮ್ಮ ಕುಟುಂಬದ ಮಾಹಿತಿಯನ್ನು ನೀಡುವ ಜತೆಗೆ ಜಾತಿ ಕಾಲಂನಲ್ಲಿ ‘ಭೋವಿ’ ಎಂದು ಬರೆಸುವಂತೆ ಸಮಾಜದ ಮುಖಂಡ, ಕರ್ನಾಟಕ ರೇಷ್ಮೆ ನಿಗಮದ ಮಾಜಿ ಅಧ್ಯಕ್ಷ ಡಿ. ಬಸವರಾಜ್ ಮನವಿ ಮಾಡಿದ್ದಾರೆ. ನಗರದಲ್ಲಿ ಸೋಮವಾರ, ತಮ್ಮ ಮನೆಗೆ ಬಂದಿದ್ದ ಗಣತಿದಾರರಿಗೆ ಕುಟುಂಬದ ಮಾಹಿತಿ ನೀಡಿದ ಸಂದರ್ಭದಲ್ಲಿ ಈ ವಿಷಯ ತಿಳಿಸಿದ್ದಾರೆ. ಮೇ 19 ರಿಂದ 21 ರ ವರೆಗೆ ಮತಗಟ್ಟೆಗಳಲ್ಲಿ ಸೂಕ್ತ ದಾಖಲೆಗಳೊಂದಿಗೆ ಜಾತಿ ಗಣತಿ ಸಮೀಕ್ಷೆಯಲ್ಲಿ ಭಾಗವಹಿಸಿ ಮಾಹಿತಿ ನೀಡಬೇಕು. ಅಂತಿಮವಾಗಿ ಇದೇ 22 ರಿಂದ 27 ರ ವರೆಗೆ ಆನ್‌ಲೈನ್ ನೋಂದಣಿ ಕಾರ್ಯ ನಡೆಯಲಿದೆ. ಯಾರೂ ಸಹ ಜಾತಿ ಗಣತಿಯಿಂದ ವಂಚಿತರಾಗದೇ ‘ಭೋವಿ’ ಎಂದು ಬರೆಸುವಂತೆ ಕೋರಿದ್ದಾರೆ.