ಅರ್ಹರಿಗೆ ರೇಷನ್ ಕಾರ್ಡ್ ಮರುವಿತರಣೆ

20myk1b_20241121013042022.jpg
Published on

ದಾವಣಗೆರೆ : ಬಿಪಿಎಲ್ ರೇಷನ್ ಕಾರ್ಡ್ ರದ್ದಾದ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ಹೊಸದನ್ನು ಮರುವಿತರಿಸಲು ಸಿಎಂ ಸೂಚಿಸಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.  ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.  ರಾಜ್ಯದಲ್ಲಿ ಶೇ.85 ರಷ್ಟು ಬಡತನ ಇದೆಯೆಂದು ಹೇಳಲಾಗದು. ಅನರ್ಹರ  ಕಾರ್ಡ್ ರದ್ದು ಮಾಡಬೇಕಾಗುತ್ತದೆ. ಟ್ಯಾಕ್ಸ್ ಕಟ್ಟುವವರು, ಸರ್ಕಾರಿ ನೌಕರರು ಹಾಗೂ ಉತ್ತಮ ಆದಾಯ ಇರುವವರೂ ಸಹ ಬಿಪಿಎಲ್ ಪಡಿತರ ಕಾರ್ಡ್ ಪಡೆದಿದ್ದಾರೆ. ಈಗಲೂ ಸಮೀಕ್ಷೆ ನಡೆಸಿ ಐಟಿ ಹಾಗೂ ಜಿಎಸ್‌ಟಿ ರಿಟರ್ನ್ಸ್ ನೋಡಿಕೊಂಡು ಆ ರೇಷನ್ ಕಾರ್ಡ್‌ಗಳನ್ನು ರದ್ದುಗೊಳಿಸಲಾಗುವುದು ಎಂದು ತಿಳಿಸಿದರು.  ಒಂದು ಸಾವಿರ ಕಾರ್ಡ್ ರದ್ದಾಗಿದ್ದರೆ ಇದರಲ್ಲಿ 10 ರಿಂದ 50 ಅರ್ಹರ ಕಾರ್ಡ್ ಸಹ ಇರಬಹುದು. ಪರಿಶೀಲಿಸಿ ಅವರಿಗೆ ಮತ್ತೆ ಕಾರ್ಡ್ ನೀಡಲಾಗುವುದು. ಈ ಹಿಂದೆ ನಾನು ಆಹಾರ ಸಚಿವನಾಗಿದ್ದಾಗ 20 ಲಕ್ಷ ರೇಷನ್ ಕಾರ್ಡ್ ರದ್ದುಗೊಳಿಸಿದ್ದು, ಸುಮಾರು 15 ಲಕ್ಷ ಹೊಸ ಕಾರ್ಡ್ ಸಹ ನೀಡಿದ್ದೆನು ಎಂದು ನೆನಪಿಸಿದರು.  ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ  ರಾಜ್ಯದಲ್ಲಿ ಕೋವಿಡ್ ಸಂದರ್ಭದಲ್ಲಿ ನಡೆದ ಅವ್ಯವಹಾರ ಕುರಿತ ತನಿಖೆಗೆ ರಚಿಸಿದ್ದ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಸಚಿವರು ಹೇಳಿದರು.  ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರ ನಡೆಸಿದೆ ಎಂದು ಆರೋಪಿಸಿದ್ದೆವು. ಜಸ್ಟಿಸ್ ಕುನ್ಹಾ ಅವರು ಸಮಗ್ರ ತನಿಖೆ ನಡೆಸಿ, ಭ್ರಷ್ಟಾಚಾರದ ಮಾಹಿತಿ ಕಲೆ ಹಾಕಿ ಪ್ರಥಮ ವರದಿ ನೀಡಿದ್ದಾರೆ. ಬಿಜೆಪಿಯವರ ಭ್ರಷ್ಟಾಚಾರ ಒಂದು ಹಂತದಲ್ಲಿ ಸಾಬೀತಾಗಿದೆ. ಎರಡನೇ ಹಂತದಲ್ಲಿ ಅವರಿಗೆ ಶಿಕ್ಷೆ ಆಗಬೇಕು. ಇದಕ್ಕಾಗಿ ಎಸ್‌ಐಟಿ ರಚನೆ ಮಾಡಿದ್ದೇವೆ ಎಂದರು.  ನಬಾರ್ಡ್‌ನಿಂದ ನಮಗೆ ಬಹಳ ಅನ್ಯಾಯವಾಗಿದೆ. ರೈತರಿಗೆ ಸಾಲ ನೀಡುವ ಟಾರ್ಗೆಟ್‌ನಲ್ಲಿ ಶೇ.58 ರಷ್ಟು ಕೇಂದ್ರ ಸರ್ಕಾರ ಇಳಿಸಿದೆ. ಇದಕ್ಕೆ ಬಿಜೆಪಿಯವರು ಏನು ಉತ್ತರ ನೀಡುತ್ತಾರೆ ಎಂದು ಪ್ರಶ್ನಿಸಿದರು.  ----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net