

ದಾವಣಗೆರೆ : ಸಾರಿಗೆ ನೌಕರರ ಮುಷ್ಕರದಿಂದಾಗಿ ಜಿಲ್ಲಾದ್ಯಂತ ಮಂಗಳವಾರ ಕೆಎಸ್‌ಆರ್‌ಟಿಸಿ ಬಸ್ ಸಂಚಾರವಿಲ್ಲದೇ ಪ್ರಯಾಣಿಕರು ಪರದಾಡಿದರು. ಪರ್ಯಾಯವಾಗಿ ಅಧಿಕಾರಿಗಳು ಖಾಸಗಿ ಬಸ್‌ಗಳನ್ನು ಸಂಸ್ಥೆಯ ಮಾರ್ಗಗಳಲ್ಲಿ ಕಳಿಸುವ ಮೂಲಕ ವ್ಯತ್ಯಯವನ್ನು ಸರಿದೂಗಿಸಲು ಪ್ರಯಾಸಪಡಬೇಕಾಯಿತು. ಜಿಲ್ಲೆಯಲ್ಲಿ ಪ್ರತಿ ದಿನ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ 2.10 ಲಕ್ಷ ಜನರು ಪ್ರಯಾಣಿಸುತ್ತಾರೆ. 411 ಬಸ್‌ಗಳು ವಿವಿಧ ಮಾರ್ಗಗಳಲ್ಲಿ ಸೇವೆಯನ್ನು ಒದಗಿಸುತ್ತವೆ. ಮುಷ್ಕರದ ಪರಿಣಾಮವಾಗಿ ಚಾಲಕರು, ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಸಂಸ್ಥೆಯ ಬಸ್‌ಗಳು ರಸ್ತೆಗಿಳಿಯಲಿಲ್ಲ. ಸಾರ್ವಜನಿಕರಿಗೆ ಅದರ ಬಿಸಿ ತಟ್ಟಿತು. ಬೆಳಗ್ಗೆಯಿಂದ ಸಂಸ್ಥೆಯ ಬಸ್‌ಗಳು ಡಿಪೋದಿಂದ ಹೊರಡಲೇ ಇಲ್ಲ. ಇನ್ನೂ ಕೆಲ ಬಸ್‌ಗಳನ್ನು ನಿಲ್ದಾಣದ ಒಂದು ಬದಿಯಲ್ಲಿ ನಿಲ್ಲಿಸಲಾಗಿತ್ತು. ದೂರದ ಊರುಗಳಿಂದ ರಾತ್ರಿ ಹೊರಟ ಬಸ್‌ಗಳು ಮಾತ್ರ ಬೆಳಗ್ಗೆ ದಾವಣಗೆರೆ ನಿಲ್ದಾಣಕ್ಕೆ ಬಂದವು. ಈ ನಡುವೆ ಸಂಸ್ಥೆಯ ವಿಭಾಗೀಯ ನಿಯಂತ್ರಕ ಕಿರಣ್ ಕುಮಾರ್ ಬಸಾಪುರ, ಡಿಟಿಒ ಫಕೃದ್ದೀನ್ ಸೇರಿ ವಿವಿಧ ಅಧಿಕಾರಿಗಳು ಡಿಪೋಗೆ ತೆರಳಿ, ಕಾರ್ಯಾಚರಣೆ ನಡೆಸುವಂತೆ ಸಿಬ್ಬಂದಿಯ ಮನವೊಲಿಸಲು ಪ್ರಯತ್ನಿಸಿದರು. ಆ ಪ್ರಯತ್ನ ಅಷ್ಟಾಗಿ ಫಲ ನೀಡಲಿಲ್ಲ. ಬೆರಳೆಣಿಕೆಯಷ್ಟು ಬಸ್‌ಗಳು ಮಾತ್ರ ಸಂಚರಿಸಿದವು. ದಾವಣಗೆರೆ ವಿಭಾಗದಿಂದ ಮಧ್ಯಾಹ್ನ 12 ಗಂಟೆಯ ಹೊತ್ತಿಗೆ 244 ಬಸ್‌ಗಳು ನಿರ್ಗಮಿಸಬೇಕಿತ್ತು. ದಾವಣಗೆರೆ ಮತ್ತು ಹರಿಹರ ಡಿಪೋಗಳಿಂದ 93 ಬಸ್‌ಗಳು (ಶೇ. 38 ರಷ್ಟು) ಸಂಚಾರ ನಡೆಸಿದವು ಸಂಜೆಯ ವರೆಗೆ ಶೇ. 40 ರಷ್ಟು ಬಸ್‌ಗಳು ಕಾರ್ಯಾಚರಣೆ ನಡೆಸಿದವು ಎಂದು ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದರು. ಮುಷ್ಕರವನ್ನು ಎರಡು ದಿನಗಳಮಟ್ಟಿಗೆ ಮುಂದೂಡಿದ ಹಿನ್ನೆಲೆಯಲ್ಲಿ ಸಂಜೆ ಹೊತ್ತಿಗೆ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾದರು.