

ದಾವಣಗೆರೆ : ಚನ್ನಗಿರಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕೆ.ಎಸ್.ಆರ್.ಟಿ.ಸಿ. ಬಸ್ ಡಿಪೋ ಶೀಘ್ರವೇ ಆರಂಭಿಸಬೇಕು ಎಂದು ದೊಡ್ಡಘಟ್ಟ ಗ್ರಾಮದ ಸಮಾಜಸೇವಕ ಎಸ್. ರಂಗಸ್ವಾಮಿ ಮತ್ತು ಇತರ ಗ್ರಾಮಗಳ ಯುವಕರು ಆಗ್ರಹಿಸಿದ್ದಾರೆ. ಈ ಕುರಿತು ಅವರು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು. ಚನ್ನಗಿರಿ ಹೊರತುಪಡಿಸಿ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಬಸ್ ನಿಲ್ದಾಣ ಹಾಗೂ ಡಿಪೋ ಇವೆ. ಚನ್ನಗಿರಿ ತಾಲೂಕು ಶಿವಮೊಗ್ಗ, ಚಿತ್ರದುರ್ಗ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಕೇಂದ್ರ ಸ್ಥಳವಾಗಿದೆ ಎಂದು ತಿಳಿಸಿದ್ದಾರೆ. ಈ ತಾಲೂಕು 62 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 272 ಹಳ್ಳಿಗಳಿದ್ದು ಅತಿಹೆಚ್ಚು ಜನಸಂಖ್ಯೆ ಹೊಂದಿದೆ. ನೂರಕ್ಕೂ ಹೆಚ್ಚು ಸರ್ಕಾರಿ ಬಸ್‌ಗಳು ಚನ್ನಗಿರಿ ಮೂಲಕ ಅನ್ಯ ಜಿಲ್ಲೆಗಳಿಗೆ ತೆರಳುತ್ತವೆ. ಈ ಹಿನ್ನೆಲೆಯಲ್ಲಿ 2014 ರಿಂದ 2024 ರ ವರೆಗೆ ಸಿಎಂ, ಸಚಿವರು, ಶಾಸಕರಿಗೆ ಮನವಿ ಸಲ್ಲಿಸುತ್ತ ಬರಲಾಯಾತು. ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನೂ ಸಲ್ಲಿಸಲಾಗಿತ್ತು ಎಂದು ನೆನಪಿಸಿದ್ದಾರೆ. ಈಗ ಬಸ್ ಡಿಪೋ ನಿರ್ಮಾಣವಾಗಿದೆ. ಅದಕ್ಕೆ ಶೀಘ್ರವೇ ಚಾಲನೆ ನೀಡಬೇಕು. ಬಸ್ ನಿಲ್ದಾಣಕ್ಕೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಮನವಿ ಸಲ್ಲಿಸುವ ವೇಳೆ ಹರೀಶ ನವಿಲೇಹಾಳ್, ಮಂಜಪ್ಪ ನಲ್ಲೂರು, ವೀರೇಶ ತ್ಯಾವಣಿಗೆ, ಹೈದರ್ ಅಲಿ ಖಾನ್ ಹೊಸೂರು ಇದ್ದರು.