

ದಾವಣಗೆರೆ: ಸಮಾಜದಲ್ಲಿ ವ್ಯಕ್ತಿಗಳು ತಾತ್ಕಾಲಿಕ, ಆದರೆ ಸಂಸ್ಥೆಗಳು ಶಾಶ್ವತ ಎಂದು ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟಂಟ್ಸ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷ ಟಿ.ಎನ್. ಮನೋಹರನ್ ಹೇಳಿದರು.
ದಿ ದಾವಣಗೆರೆ ಚಾರ್ಟರ್ಡ್ ಅಕೌಂಟಂಟ್ಸ್ ಅಸೋಸಿಯೇಷನ್ ವತಿಯಿಂದ ಹರಿಹರ ರಸ್ತೆಯಲ್ಲಿ ನಿರ್ಮಾಣವಾಗಿರುವ ಚಾರ್ಟರ್ಡ್ ಅಕೌಂಟಂಟ್ಸ್ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.
ಸಂಕಷ್ಟದಲ್ಲಿದ್ದ ಸತ್ಯಂ ಕಂಪ್ಯೂಟರ್ ಸಂಸ್ಥೆಗೆ ಪುನಶ್ಚೇತನ ನೀಡಲು ತಾವು ಮಾಡಿದ ಪ್ರಯತ್ನದ ಬಗ್ಗೆ ತಿಳಿಸಿದ ಅವರು, ಜಗತ್ತಿನಲ್ಲಿ ನಾವು ಯಾರೂ ಶಾಶ್ವತವಲ್ಲ, ಸಂಸ್ಥೆಗಳು ಮಾತ್ರ ಕೊನೆಯವರೆಗೂ ಉಳಿಯುತ್ತವೆ ಎಂದು ತಿಳಿಸಿದರು.
‘ಸಿಎ’ ಎಂದರೆ ‘ಕಮ್ ಅಗೇನ್’ ಎಂದು ತಮಾಷೆಯಾಗಿ ಹೇಳಲಾಗುತ್ತಿತ್ತು. ಆದರೆ ಅದು ಹಾಗಲ್ಲ, ಸಿಎ ಎಂದರೆ ‘ಕಾಂಕರ್ ಅಗೇನ್’ (ಮತ್ತೆ ಗೆಲ್ಲು) ಎಂದು ವಿಶ್ಲೇಷಿಸಿದರು.
ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ದೇಶದ ಬೆಳವಣಿಗೆಯಲ್ಲಿ ಲೆಕ್ಕ ಪರಿಶೋಧಕರು ಪಾಲುದಾರರಾಗಿದ್ದಾರೆ. ಸಾಲ ಪಡೆಯುವುದರಿಂದ ಹಿಡಿದು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ವರೆಗೆ ಚಾರ್ಟರ್ಡ್ ಅಕೌಂಟಂಟ್‌ಗಳ ಸಹಿ ಬೇಕೇ ಬೇಕು. ಅವರಿಲ್ಲದೆ ಯಾವ ಕೆಲಸವೂ ಆಗುವುದಿಲ್ಲ ಎಂದು ತಿಳಿಸಿದರು.
ಒಂದು ಕಾಲದಲ್ಲಿ ದಾವಣಗೆರೆಯಲ್ಲಿ ಕೇವಲ ನಾಲ್ಕೈದು ಜನ ಲೆಕ್ಕ ಪರಿಶೋಧಕರಿದ್ದರು, ಈಗ ಅವರ ಸಂಖ್ಯೆ 70ಕ್ಕೆ ಏರಿರುವುದು ಸ್ವಾಗತಾರ್ಹ ಎಂದು ಹೇಳಿದರು.
ಚಾರ್ಟರ್ಡ್ ಅಕೌಂಟಂಟ್ಸ್ ಭವನ ನಿರ್ಮಾಣಕ್ಕೆ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ 10 ಲಕ್ಷ ರೂ. ನೀಡಿದ್ದು, ವೈಯಕ್ತಿಕವಾಗಿಯೂ 10 ಲಕ್ಷ ರೂ. ಕೊಡುವುದಾಗಿ ವಾಗ್ದಾನ ಮಾಡಿದರು.
ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಲೆಕ್ಕ ಪರಿಶೋಧಕರ ಅಗತ್ಯ ಹೆಚ್ಚಾಗಿದೆ. ವ್ಯಾಪಾರಸ್ಥರು, ಉದ್ಯಮಿಗಳ ಲೆಕ್ಕಪತ್ರಗಳನ್ನು ನಿಭಾಯಿಸುತ್ತಾರೆ. ಅವರಿಗಾಗಿಯೇ ಒಂದು ಭವನದ ಅವಶ್ಯಕತೆಯಿತ್ತು ಎಂದು ಹೇಳಿದರು.
ಹತ್ತು, ಹದಿನೈದು ವರ್ಷಗಳ ಹಿಂದೆ ಸಿಎ ಪರೀಕ್ಷೆಯಲ್ಲಿ ಹೆಚ್ಚು ಜನ ಪಾಸ್ ಆಗುತ್ತಿರಲಿಲ್ಲ, ಈಗಿನವರು ಜಾಣರಿದ್ದು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಅವರ ಸೇವೆ ವ್ಯಾಪಾರಸ್ಥರು, ಉದ್ಯಮಿಗಳಿಗೆ ಸಿಗಲಿ. ಅಧಿಕ ಶುಲ್ಕ ಕೇಳಬೇಡಿ ಎಂದು ಕಿವಿಮಾತು ಹೇಳಿದರು.
ದಾವಣಗೆರೆ ಚಾರ್ಟರ್ಡ್ ಅಕೌಂಟಂಟ್ಸ್ ಸಂಘದ ಗೌರವಾಧ್ಯಕ್ಷ ಡಾ.ಅಥಣಿ ವೀರಣ್ಣ ಪ್ರಾಸ್ತಾವಿಕ ಮಾತನಾಡಿ, ಒಂದು ಕಾಲದಲ್ಲಿ ಚಾರ್ಟರ್ಡ್ ಅಕೌಂಟಂಟ್‌ಗಳು ಮುನ್ನೆಲೆಗೆ ಬಂದಿರಲಿಲ್ಲ, ಈಗ ಎಲ್ಲ ರಂಗಗಳಲ್ಲೂ ಅವರ ಅಗತ್ಯವಿದೆ. ಕಾರ್ಪೊರೇಟ್ ಕಂಪನಿಗಳು ನಮ್ಮತ್ತ ನೋಡುತ್ತವೆ. ಒಟ್ಟಿನಲ್ಲಿ ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವುದಾಗಿ ತಿಳಿಸಿದರು.
ಐಸಿಎಐ ದಕ್ಷಿಣ ಭಾರತ ಶಾಖೆಯ ಅಧ್ಯಕ್ಷ ಎಸ್. ಪನ್ನಾರಾಜ್, ಸಂಸ್ಥೆಯ ಕೇಂದ್ರ ಕೌನ್ಸಿಲ್ ಸದಸ್ಯ ಕೋಥಾ ಶ್ರೀನಿವಾಸ್, ಕರ್ನಾಟಕ ರಾಜ್ಯ ಚಾರ್ಟರ್ಡ್ ಅಕೌಂಟಂಟ್ಸ್ ಸಂಘದ ಅಧ್ಯಕ್ಷ ಪ್ರಮೋದ್ ಶ್ರೀಹರಿ, ದಾವಣಗೆರೆ ಸಂಘದ ಅಧ್ಯಕ್ಷ ಕಿರಣ್ ಎಲ್. ಪಾಟೀಲ್, ಕಾರ್ಯದರ್ಶಿ ಉಮೇಶ್ ಶೆಟ್ಟಿ, ಎ. ಕಿರಣ್ ಕುಮಾರ್, ಎನ್.ಜಿ. ಗಿರೀಶ್ ನಾಡಿಗ್ ಇದ್ದರು.