

ಹೊನ್ನಾಳಿ : ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹೆಣ್ಣು ಮಕ್ಕಳು ಸಭಾ ಭವನಗಳನ್ನು ಕೇವಲ ಸಭೆ ಸಮಾರಂಭಗಳಿಗೆ ಸೀಮಿತ ಮಾಡಿಕೊಳ್ಳದೇ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಸಲಹೆ ನೀಡಿದರು. ತಾಲೂಕಿನ ಅರಕೆರೆ ಗ್ರಾಮದಲ್ಲಿ ಆರ್‌ಜಿಎಸ್‌ವೈ ಯೋಜನೆಯಡಿ ನಿರ್ಮಿಸಿದ ಸಭಾ ಭವನ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ಕರಕುಶಲ, ಗುಡಿ ಕೈಗಾರಿಕೆಗಳ ಬಗ್ಗೆ ಜಿಲ್ಲಾ ಪಂಚಾಯಿತಿ ಮಾರ್ಗದರ್ಶನದಲ್ಲಿ ಗ್ರಾ.ಪಂ. ಅಧ್ಯಕ್ಷರು, ಸದಸ್ಯರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೇರಿಕೊಂಡು ಒಬ್ಬರಿಗೊಬ್ಬರ ಸಹಕಾರದಿಂದ ಕಾರ್ಯ ನಿರ್ವಹಿಸಿದರೆ ಮಾತ್ರ ಗ್ರಾಮಗಳು ಸರ್ವತೋಮುಖ ಅಭಿವೃದ್ಧಿಯಾಗಲು ಸಾಧ್ಯ. ಜಿಲ್ಲಾ ಪಂಚಾಯಿತಿ ಸಿಇಒ ಅವರು ಕಾಲ ಕಾಲಕ್ಕೆ ಉದ್ಯೋಗ ಕೊಡುವ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿ ಹೆಣ್ಣುಮಕ್ಕಳನ್ನು ಸ್ವಾಭಿಮಾನಿಗಳನ್ನಾಗಿ ಮಾಡಬೇಕು ಎಂದು ಹೇಳಿದರು. ನರೇಗಾ ಯೋಜನೆಯಡಿ ನೂರು ದಿನಗಳು ಕೂಲಿ ಕೊಡಬೇಕು, ಆದರೆ ಬಹಳ ಕಡೆ ಮೋಸ ನಡೆಯುತ್ತಿದೆ. ಇದನ್ನು ಪತ್ತೆ ಹಚ್ಚಿ ಸರಿಪಡಿಸಬೇಕು ಎಂದ ಅವರು, ಹೊನ್ನಾಳಿ ಪಟ್ಟಣದಲ್ಲಿ ಅಮೃತ ಯೋಜನೆಯಡಿ 20 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿಯೇ ಶುದ್ಧ ಕುಡಿಯುವ ನೀರನ್ನು ಕೊಡಲಾಗುವುದು ಎಂದರು. ಸಮಾರಂಭ ಉದ್ಘಾಟಿಸಿದ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, 30 ವರ್ಷಗಳ ಹಿಂದೆ ಅನುದಾನ ಬಿಡುಗಡೆ ಸೇರಿದಂತೆ ಇತರ ಕೆಲಸಗಳಿಗೆ ವಿಧಾನಸೌಧಕ್ಕೆ ಹೋಗಬೇಕಾಗಿತ್ತು, ಆದರೆ ಈಗ ಗ್ರಾ.ಪಂ.ಗಳಲ್ಲಿ ತಮ್ಮ ಕೆಲಸಗಳನ್ನು ಮಾಡಿಕೊಳ್ಳಬಹುದಾಗಿದೆ. ಗ್ರಾ.ಪಂ ಪಿಡಿಒಗಳು ಉತ್ತಮವಾಗಿ ಕಾರ್ಯ ನಿರ್ವಹಿಸಬೇಕಾಗಿದೆ. ಗ್ರಾಮಸ್ಥರು ಸಹ ಪಿಡಿಒಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿಸಿಕೊಳ್ಳಬೇಕು ಎಂದು ಅವಳಿ ತಾಲೂಕಿನ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರಿಗೆ ಕಿವಿಮಾತು ಹೇಳಿದರು. ಜಿ.ಪಂ ಸಿಇಒ ಸುರೇಶ್ ಇಟ್ನಾಳ್ ಮಾತನಾಡಿ, ಗ್ರಾ.ಪಂ. ನೂತನ ಕಟ್ಟಡ ಹಾಗೂ ಸಭಾಭವನ ಉತ್ತಮವಾಗಿ ನಿರ್ಮಾಣಗೊಂಡಿದೆ. ಇದನ್ನು ರಚನಾತ್ಮಕ ಕಾರ್ಯಗಳಿಗೆ ಉಪಯೋಗ ಮಾಡಿಕೊಳ್ಳಬೇಕು ಎಂದರು. ಗ್ರಾಪಂ ಅಧ್ಯಕ್ಷೆ ಉಮಾದೇವಿ ಡಿ.ತಿಮ್ಮೇಶ್ ಅವರು ಮಾತನಾಡಿ, ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲ, ಗ್ರಾ.ಪಂ. ಕಟ್ಟಡಕ್ಕೆ ಆವರಣ ಸುತ್ತುಗೋಡೆ ಇಲ್ಲ, ಬಸ್ ನಿಲ್ದಾಣ ಇಲ್ಲ, ಇವುಗಳಿಗೆ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಜಿ.ಪಂ. ಮಾಜಿ ಅಧ್ಯಕ್ಷ ಆರ್. ನಾಗಪ್ಪ, ಅರಕೆರೆ ಗ್ರಾ ಪಂ. ಉಪಾಧ್ಯಕ್ಷ ಎಚ್. ವೆಂಕಟೇಶ್, ಸದಸ್ಯರಾದ ಎ.ಬಿ. ರಂಗಪ್ಪ, ಎನ್.ಆರ್. ಮಂಜುನಾಥ್, ಆಶಾ ರಮೇಶ್, ಪ್ರಮೀಳಾ, ಮಹೇಂದ್ರಪ್ಪ, ಸವಿತಾ ನಾಗರಾಜ್, ಪಿಡಿಒ ಹನುಮಂತಮ್ಮ, ಮಧುಗೌಡ, ಉಮೇಶ್ ಉಪಸ್ಥಿತರಿದ್ದರು.