ಸಹಾಯಧನ ಬಿಡುಗಡೆಗೆ ಆಗ್ರಹ

bulding.jpg
Published on

ದಾವಣಗೆರೆ : ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸ, ಮದುವೆ, ನಿವೃತ್ತಿ ವೇತನ, ವೈದ್ಯಕೀಯ ಚಿಕಿತ್ಸೆ ಮತ್ತು ಅಂತಿಮ ಸಂಸ್ಕಾರ ಸೇರಿ ವಿವಿಧ ಉದ್ದೇಶಗಳಿಗೆ ನೆರವು ನೀಡುವಲ್ಲಿ ಕಾರ್ಮಿಕ ಇಲಾಖೆಯು ವಿಳಂಬ ನೀತಿ ಅನುಸರಿಸುತ್ತಿದ್ದು ಸೂಕ್ತ ಕ್ರಮಕ್ಕೆ ಆಗ್ರಹಿಸಿ ಕಟ್ಟಡ ಕಾರ್ಮಿಕರ ಮುಖಂಡರ ನಿಯೋಗವು ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮತ್ತು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರಿಗೆ ಮನವಿ ಸಲ್ಲಿಸಿತು.
 ಈ ಸಂದರ್ಭದಲ್ಲಿ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಅಧ್ಯಕ್ಷ ಆವರಗೆರೆ ಎಚ್.ಜಿ.ಉಮೇಶ್ ಮಾತನಾಡಿ, ಹಿಂದಿನ ಸರ್ಕಾರದ ಅವಧಿಯಲ್ಲಿ ಕಾರ್ಮಿಕರಿಗೆ ಹಲವು ರೀತಿಯ ಕಿಟ್‌ಗಳನ್ನು ನೀಡುವ ನೆಪದಲ್ಲಿ ಸಾವಿರಾರು ಕೋಟಿ ರೂ. ದುರುಪಯೋಗ ಮಾಡಲಾಗಿದೆ. ಆರೋಗ್ಯ ತಪಾಸಣೆಯ ನೆಪದಲ್ಲಿ ಒಂದು ಜಿಲ್ಲೆಗೆ 10 ಕೋಟಿ ರೂ.ಗಳಂತೆ ಬಿಡುಗಡೆ ಮಾಡಿ ಅದರಲ್ಲಿ ಶೇ. 40 ರಿಂದ 45ರಷ್ಟು ಕಮಿಷನ್ ಪಡೆದಿದ್ದಾರೆ ಎಂದು ಆರೋಪಿಸಿದರು.
 ಈಗಿನ ಕಾಂಗ್ರೆಸ್ ಸರ್ಕಾರದಲ್ಲಿಯೂ 31 ಜಿಲ್ಲೆಗಳಿಗೆ 310 ಕೋಟಿ ರೂ. ಬಿಡುಗಡೆ ಮಾಡಲು ಹೊರಟಿದ್ದಾರೆ. ಕಳೆದ ಮೂರು ವರ್ಷಗಳಿಂದ ನೈಜ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ನಿವೃತ್ತಿ ವೇತನ, ಮಕ್ಕಳ ಮದುವೆಗೆ ಸಹಾಯಧನ, ಆಸ್ಪತ್ರೆ ವೆಚ್ಚದಂತಹ ಯಾವುದೇ ಸಹಾಯಧನಗಳು ಬಿಡುಗಡೆಯಾಗುತ್ತಿಲ್ಲ ಎಂದು ದೂರಿದರು.
 ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿನ ಇಎಸ್‌ಐ ಆಸ್ಪತ್ರೆ, ಪಿಎಚ್‌ಸಿಗಳಲ್ಲಿ ನಗದುರಹಿತ ಚಿಕಿತ್ಸೆ ನೀಡಬೇಕು. ಕಾರ್ಮಿಕ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಯಲು ಉನ್ನತದ ಮಟ್ಟದ ತನಿಖೆ ನಡೆಸಬೇಕು ಎಂದು ಮನವಿ ಮಾಡಿದರು.
 ರಾಜ್ಯದಲ್ಲಿ 15 ರಿಂದ 20 ಲಕ್ಷ ಕಟ್ಟಡ ಕಾರ್ಮಿಕರಿದ್ದು ಇಲಾಖೆಯ ಈಗಿನ ಮಾಹಿತಿ ಪ್ರಕಾರ 48 ಲಕ್ಷ ಕಟ್ಟಡ ಕಾರ್ಮಿಕರು ನೋಂದಣಿ ಆಗಿದ್ದಾರೆ. ಬೋಗಸ್ ಕಾರ್ಡುದಾರರನ್ನು ತಡೆ ಹಿಡಿದು, ನಕಲಿ ಗುರುತಿನ ಚೀಟಿ ನೀಡಿದ ಸಂಸ್ಥೆಗಳು, ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
 ಕಟ್ಟಡ ಕಾರ್ಮಿಕರಿಗೆ ಅವಶ್ಯಕವಿಲ್ಲದ ಯೋಜನೆಗಳನ್ನು ಅನುಷ್ಠಾನಗೊಳಿಸಿ ಕಟ್ಟಡ ಮತ್ತು ಇತರೆ ನಿರ್ಮಾಣ ಮಂಡಳಿಯಲ್ಲಿ ಇರುವ ಹಣವನ್ನು ಖಾಲಿ ಮಾಡಿ ಶಾಶ್ವತವಾಗಿ ಮಂಡಳಿಯನ್ನು ಮುಚ್ಚಲು ಹುನ್ನಾರ ನಡೆಸಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಸಭೆ ಕರೆದು ಚರ್ಚಿಸಬೇಕು ಎಂದರು.
 ಸಂಘಟನೆಯ ಜಿಲ್ಲಾಧ್ಯಕ್ಷ ವಿ.ಲಕ್ಷ್ಮಣ್, ಎಂ.ಹನುಮಂತಪ್ಪ, ಮುರುಗೇಶ್, ತಿಪ್ಪೇಶ್, ನೇತ್ರಾವತಿ, ಸುರೇಶ್, ಮುದಹದಡಿ ಸುರೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net