ಬಜೆಟ್ ನಿರೀಕ್ಷೆ ದೊಡ್ಡದು, ನೀಡಿದ್ದು ಸಾಲದು

dvg-B.-Vamadevappa-loud-speaker.jpg
Published on

ದಾವಣಗೆರೆ  : ನಾಲ್ಕು ಲಕ್ಷ ಕೋಟಿ ದಾಟಿದ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಹಲವು ಜಿಲ್ಲೆಗಳಿಗೆ ದೊಡ್ಡ ದೊಡ್ಡ ಯೋಜನೆಗಳು ಸಿಕ್ಕಿವೆ. ಆದರೆ ಪ್ರಮುಖ ಜಿಲ್ಲೆಗಳಲ್ಲಿ ಒಂದಾದ ಮಧ್ಯ ಕರ್ನಾಟಕದ ದಾವಣಗೆರೆಗೆ ಮಾತ್ರ ಹೇಳಿಕೊಳ್ಳುವಂಥ ಕೊಡುಗೆ ದೊರಕಿಲ್ಲ.  ಹಳೆಯ ಹಲವು ನಿರೀಕ್ಷೆಗಳ ಪ್ರಸ್ತಾಪವೇ ಆಗಿಲ್ಲ. ನೀರಾವರಿ, ಸಮಾಜಕಲ್ಯಾಣ, ಆರೋಗ್ಯ, ಪೊಲೀಸ್ ಇಲಾಖೆ ಹಾಗೂ ರಂಗಭೂಮಿ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಒಂದಿಷ್ಟು ಯೋಜನೆಗಳು ಘೋಷಣೆ ಆಗಿವೆಯಾದರೂ, ಜನರ ಒತ್ತಾಸೆಗೆ ಬಜೆಟ್‌ನಲ್ಲಿ ಸ್ಪಂದನೆ ಸಿಕ್ಕಿಲ್ಲ.  ನ್ಯಾಮತಿ ತಾಲೂಕು ಸೂರಗೊಂಡನ ಕೊಪ್ಪದಲ್ಲಿ ಲಂಬಾಣಿ ಸಮಾಜದ ಮಕ್ಕಳಿಗಾಗಿ ವಸತಿಶಾಲೆಯನ್ನು ಆರಂಭಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಿರುವುದು ಆ ಸಮುದಾಯಕ್ಕೆ ನೀಡಿದ ಕೊಡುಗೆಯಾಗಿದೆ.  ಹರಿಹರ ತಾಲೂಕು ಕೊಂಡಜ್ಜಿ ಬೆಟ್ಟದ ಪರಿಸರದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಮೂಲಸೌಕರ್ಯ, ವೃತ್ತಿ ರಂಗಾಯಣ ಸಮುಚ್ಚಯ ಹಾಗೂ ಥಿಯೇಟರ್ ಮ್ಯೂಸಿಯಂ ನಿರ್ಮಾಣ ಮಾಡಲಿರುವುದು ರಂಗಾಸಕ್ತರಿಗೆ ಖುಷಿಯ ವಿಚಾರವಾಗಿದೆ.  ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ಸ್ಥಾಪನೆ, ವಾಹನ ಸಂಚಾರವನ್ನು ಮೇಲ್ವಿಚಾರಣೆ ಮಾಡಲು ಮತ್ತು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಹಚ್ಚಿ ನಿಯಂತ್ರಿಸಲು ಎಐ ಆಧಾರಿತ ವಿದ್ಯುನ್ಮಾನ ಕ್ಯಾಮರಾಗಳನ್ನು ದಾವಣಗೆರೆಯಲ್ಲೂ ಅಳವಡಿಸಲು ಉದ್ದೇಶಿಸಿರುವುದು ಸಂಚಾರ ವ್ಯವಸ್ಥೆಯ ಸುಧಾರಣೆಗೆ ಇಂಬು ಕೊಡಲಿದೆ.  ಭದ್ರಾ ಮೇಲ್ದಂಡೆ ಯೊಜನೆಯಡಿ ಜಗಳೂರಿನ ಕೆರೆಗಳನ್ನು ತುಂಬಿಸುವುದು, ಹೊನ್ನಾಳಿಯ ಬೆನಕನಹಳ್ಳಿ, ಗೋವಿನಕೋವಿ ಮತ್ತು ಹನುಮಸಾಗರ ಕೆರೆ ತುಂಬಿಸುವ ಯೋಜನೆ ಬಗ್ಗೆಯೂ ಬಜೆಟ್‌ನಲ್ಲಿ ಕಾಣಿಸಲಾಗಿದೆ. ಆದರೆ ಭದ್ರಾ ನಾಲೆಗಳ ಆಧುನೀಕರಣದ ಬಗ್ಗೆ ಪ್ರಸ್ತಾಪವೇ ಆಗಿಲ್ಲ.  ಚಿಗಟೇರಿ ಜಿಲ್ಲಾಸ್ಪತ್ರೆ ಕಟ್ಟಡ ಹಾಗೂ ಜಗಳೂರು ತಾಲೂಕು ಆಸ್ಪತ್ರೆಯ ನವೀಕರಣ ಮಾಡಲಿರುವುದು ಸಮಾಧಾನಕರ ವಿಷಯ. ಇನ್ನು ತುಮಕೂರು-ದಾವಣಗೆರೆ ನೇರ ರೈಲು ಮಾರ್ಗ ಯೋಜನೆ ಪ್ರಗತಿಯಲ್ಲಿದೆ ಎಂದಷ್ಟೇ ಹೇಳಲಾಗಿದೆ.  ...  * ಹುಸಿಯಾದ ನಿರೀಕ್ಷೆಗಳು  ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸುವ ಬಗ್ಗೆ ಬಜೆಟ್‌ನಲ್ಲಿ ನಿಲುವು ಸ್ಪಷ್ಟಪಡಿಸಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿತ್ತು. ಆ ನಿರೀಕ್ಷೆ ಹುಸಿಯಾಗಿದೆ.  ಶೈಕ್ಷಣಿಕ ನಗರಿ ದಾವಣಗೆರೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಬೇಕೆಂಬುದು ಹಳೆಯ ಬೇಡಿಕೆ. ಆ ಕುರಿತು ಏನನ್ನೂ ಹೇಳಿಲ್ಲ. ದಾವಣಗೆರೆಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆ ವಿಚಾರ ನನೆಗುದಿಗೆ ಬಿದ್ದಿದೆ. ಈ ಯೋಜನೆ ಟೇಕಾಫ್ ಆಗಿಲ್ಲ.  ಹಾಲು ಒಕ್ಕೂಟದ ಅಭಿವೃದ್ಧಿ, ಹರಿಹರದ ಭೈರನಪಾದ ಏತ ನೀರಾವರಿ ಯೋಜನೆ, ಕೃಷಿ ಕಾಲೇಜು, ಜವಳಿ ಪಾರ್ಕ್, ಐಟಿ, ಬಿಟಿ ಕಂಪನಿಗಳ ಸ್ಥಾಪನೆ, ಮಾಯಕೊಂಡ ತಾಲೂಕು ರಚನೆ. ಹೀಗೆ ಜಿಲ್ಲೆಯ ಜನರ ಹಲವು ನಿರೀಕ್ಷೆಗಳಿಗೆ ಸ್ಪಂದನೆ ದೊರೆತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net