

ದಾವಣಗೆರೆ : ದಾವಣಗೆರೆ ಮಹಾನಗರ ಪಾಲಿಕೆಯ ಪ್ರಸ್ತುತ ಅವಧಿಯಲ್ಲಿ ಕೊನೆಯದಾದ 2025-26ನೇ ಸಾಲಿನ, 5.16 ಕೋಟಿ ರೂ.ಗಳ ಉಳಿತಾಯ ಬಜೆಟ್‌ನ್ನು ಮೇಯರ್ ಕೆ. ಚಮನ್ ಸಾಬ್ ಗುರುವಾರ ಮಂಡಿಸಿದರು. ಆಯವ್ಯಯ 404.82 ಕೋಟಿ ರೂ. ಗಾತ್ರವನ್ನು ಹೊಂದಿದೆ. ಹೆಚ್ಚೇನೂ ಹೊಸತನವಿಲ್ಲ, ಹಳೆಯ ಘೋಷಿತ ಯೋಜನೆಗಳು ಪುನರಾವರ್ತನೆಗೊಂಡಿವೆ. ಮೂಲಸೌಲಭ್ಯಕ್ಕೆ ಒತ್ತು ನೀಡುವ ಜತೆಗೆ ಘನತ್ಯಾಜ್ಯ ವಿಲೇವಾರಿ, ಕುಡಿಯುವ ನೀರಿಗೆ ಆದ್ಯತೆ ಕೊಡಲಾಗಿದೆ. ವಿವಿಧ ಮೂಲಗಳಿಂದ ಒಟ್ಟು 569.15 ಕೋಟಿ ರೂ. ಸ್ವೀಕೃತಿಯನ್ನು ನಿರೀಕ್ಷಿಸಲಾಗಿದ್ದು 598.31 ಕೋಟಿ ರೂ. ಪಾವತಿಗೆ ಯೋಜಿಸಲಾಗಿದೆ. ಆರಂಭಿಕ ಶಿಲ್ಕು 34.33 ಕೋಟಿ ರೂ. ಇರಲಿದೆ. ಆಸ್ತಿಗಳ ಮೇಲೆ ವಿಧಿಸಲಾಗುವ ತೆರಿಗೆಯು ಪಾಲಿಕೆಯ ಅತಿ ಮುಖ್ಯ ಹಾಗೂ ದೊಡ್ಡ ಆದಾಯದ ಮೂಲವಾಗಿದೆ. ಈ ವರ್ಷದಲ್ಲಿ ಸರ್ಕಾರವು ಅನಧಿಕೃತ ಆಸ್ತಿಗಳಿಗೆ ಸಂಬಂಧಿಸಿದಂತೆ ಬಿ ಖಾತೆ ನೀಡುವ ಯೋಜನೆ ಜಾರಿಗೆ ತರಲಿದ್ದು ಈ ಮೂಲಕ ಅಂದಾಜು 14 ಸಾವಿರ ಆಸ್ತಿಗಳನ್ನು ತೆರಿಗೆ ಜಾಲಕ್ಕೆ ಒಳಪಡಿಸಲಾಗವುದು. ಒಟ್ಟಾರೆ ಅಂದಾಜು 60 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಣೆಯ ಗುರಿ ಹೊಂದಲಾಗಿದೆ. ಹೊಸ ಆದಾಯ ಮೂಲಗಳನ್ನು ಗುರುತಿಸಲಾಗಿದೆ. ಜಾಹೀರಾತು ಶುಲ್ಕದಿಂದ 4 ಕೋಟಿ ರೂ, ವಾಹನ ಪಾರ್ಕಿಂಗ್ ಶುಲ್ಕವಾಗಿ 25 ಲಕ್ಷ ರೂ. ಸಂಗ್ರಹಿಸುವ ಗುರಿಯಿದೆ. ಹೈದರಾಬಾದ್, ವಿಶಾಖಪಟ್ಟಣ ಮಾದರಿಯಲ್ಲಿ ಉದ್ಯಾನವನಗಳನ್ನು ಅಭಿವೃದ್ಧಿಗೊಳಿಸಿ ಪ್ರವೇಶ ಶುಲ್ಕ ವಿಧಿಸುವ ಮೂಲಕ 5 ಲಕ್ಷ ರೂ. ಆದಾಯ ಸಂಗ್ರಹಿಸುವ ಚಿಂತನೆಯಿದೆ. ... * ಶಾಪಿಂಗ್ ಮಾಲ್ ನಿರ್ಮಾಣ ನಗರದಲ್ಲಿ ಪಾಲಿಕೆ ಒಡೆತನದ ಹಲವು ದೊಡ್ಡ ಜಾಗಗಳಿದ್ದು ಯಾವುದಾದರೂ ಒಂದು ಖಾಸಗಿ ಸಹಭಾಗಿತ್ವದಲ್ಲಿ ‘ನಿರ್ಮಿಸು, ನಿರ್ವಹಿಸು, ವರ್ಗಾಯಿಸು’ ಮಾದರಿಯಲ್ಲಿ ಸುಸಜ್ಜಿತ ಶಾಪಿಂಗ್ ಮಾಲ್ ನಿರ್ಮಿಸಿ, ಅದರಲ್ಲಿ ಮಕ್ಕಳ 3ಡಿ ಗೇಮಿಂಗ್ ಝೋನ್, 5ಡಿ ಎಕ್ಸಿಪೀರಿಯೆನ್ಸ್ ಥಿಯೇಟರ್‌ನಂತಹ ವಿನೂತನ ಪರಿಕಲ್ಪನೆ ಅಳವಡಿಸಲಾಗುವುದು. ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ (ಪಿ.ಪಿ.ಪಿ ಮಾದರಿ) ಜಾರಿಗೊಳಿಸಲಾಗುವುದು. ಎಂ.ಸಿ.ಸಿ ಬಿ ಬ್ಲಾಕ್‌ನಲ್ಲಿ ಪಾಲಿಕೆಯ ಜಾಗವಿದ್ದು ಅಲ್ಲಿ ಈ ಯೋಜನೆ ಕೈಗೆತ್ತಿಕೊಂಡು ಹೆಚ್ಚುವರಿ ಆದಾಯ ಸಂಗ್ರಹಿಸುವ ಉದ್ದೇಶವಿದೆ. * ಬೀದಿ ನಾಯಿಗಳ ಹಾವಳಿ ನಿಯಂತ್ರಣ ನಗರದಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕಾಗಿ ಬಿಡಾಡಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಮುಂದಿನ ವರ್ಷವೂ 1 ಕೋಟಿ ರೂ. ವೆಚ್ಚದಲ್ಲಿ ಇದನ್ನು ಟೆಂಡರ್ ಮೂಲಕ ಜಾರಿಗೊಳಿಸಲಾಗುವುದು. * ಬೀದಿ ದೀಪಗಳ ವ್ಯವಸ್ಥೆ ನಗರದಲ್ಲಿ ಹಲವಾರು ಹೊಸ ಬಡಾವಣೆಗಳು ನಿರ್ಮಾಣವಾಗಿದ್ದು, ಅವುಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕಿದೆ. ಹಾಗೂ ಹಾಲಿ ಇರುವ ಬೀದಿ ದೀಪ ವ್ಯವಸ್ಥೆಗೆ ಪೂರಕವಾಗಿ ಅಗತ್ಯವಿರುವ ಎಲ್.ಟಿ ಲೈನ್, ಟ್ರಾನ್ಸ್‌ಫಾರ‌್ಮರ್, ವೈರಿಂಗ್ ಇತ್ಯಾದಿ ಮೂಲ ಸೌಕರ್ಯವನ್ನು ಆಯ್ದ ಮಾರ್ಗಗಳಲ್ಲಿ ಕಲ್ಪಿಸಬೇಕಿದೆ. ಇದಕ್ಕಾಗಿ 3.75 ಕೋಟಿ ರೂ. ಒದಗಿಸಲಾಗುವುದು.