

ರಮೇಶ ಜಹಗೀರದಾರ್ ದಾವಣಗೆರೆ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಮಂಡಿಸಲಿರುವ ಆಯವ್ಯಯದ ಮೇಲೆ ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಯ ಜನರು ಹಲವು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದೇ ಹಳೆಯ ಬೇಡಿಕೆಗಳು, ಈ ಬಾರಿಯಾದರೂ ಬಜೆಟ್‌ನ ಪುಟಗಳಲ್ಲಿ ಪ್ರಸ್ತಾಪವಾಗಲಿ ಎಂದು ಕಾಯುತ್ತಿದ್ದಾರೆ. ಮೂಲಸೌಲಭ್ಯ, ಆರೋಗ್ಯ, ಪ್ರವಾಸೋದ್ಯಮ, ನೀರಾವರಿ, ಮಹಿಳಾ ಸಬಲೀಕರಣ, ಉದ್ಯೋಗ, ಕೌಶಲ ಹೀಗೆ ವಿವಿಧ ಕ್ಷೇತ್ರಗಳಲ್ಲಿ ನಿರೀಕ್ಷೆಗಳಿವೆ. ಕೆಲವು ಯೋಜನೆಗಳು ಅಪೂರ್ಣವಾಗಿವೆ, ಮತ್ತೆ ಕೆಲವು ಟೇಕಾಫ್ ಆಗಿಲ್ಲ. ಅನುದಾನ ಹಂಚಿಕೆಯಾಗಿಲ್ಲ. ಹೊಸ ಯೋಜನೆಗಳಿಗೆ ಹಸಿರು ನಿಶಾನೆ ದೊರಕಲಿ ಎಂಬ ಹಾರೈಕೆಯೂ ಇದೆ. ... * ವಿಮಾನ ನಿಲ್ದಾಣ ದಾವಣಗೆರೆಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಾಗಬೇಕು ಎಂಬುದು ಈ ಭಾಗದ ಜನರ ಬಹು ದಿನಗಳ ಕನಸು. ಇಲ್ಲಿ ಉದ್ಯಮಿಗಳಿದ್ದಾರೆ, ವರ್ತಕರಿದ್ದಾರೆ. ಹಲವು ಶಿಕ್ಷಣ ಸಂಸ್ಥೆಗಳಿವೆ. ರಸ್ತೆ ಮತ್ತು ರೈಲು ಸಂಪರ್ಕ ಉತ್ತಮವಾಗಿದೆ ಆದರೆ ವಿಮಾನ ನಿಲ್ದಾಣದ ಕೊರತೆಯಿದೆ. ದಾವಣಗೆರೆ ಸ್ಮಾರ್ಟ್‌ಸಿಟಿ ಇದೆ, ಆರೋಗ್ಯ ಸೌಲಭ್ಯಗಳು ಉತ್ತಮವಾಗಿವೆ. ನೀರು ಸೇರಿದಂತೆ ಸಂಪನ್ಮೂಲಗಳು ಸಾಕಷ್ಟಿವೆ. ಏರ್‌ಪೋರ್ಟ್ ಬಂದರೆ ಈ ಭಾಗದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರವೂ ಬೆಳೆಯುತ್ತದೆ ಎನ್ನುವ ನಿರೀಕ್ಷೆಯಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದ ಅನುದಾನ ದೊರಕಿದರೆ ಅದರ ಲಾಭ ಜಿಲ್ಲೆಯ ಜಗಳೂರು ತಾಲೂಕಿಗೂ ಆಗಲಿದೆ. ಬರಪೀಡಿತ ತಾಲೂಕನ್ನು ಹಸಿರಾಗಿಸಲು ಇದರಿಂದ ಅನುಕೂಲವಾಗಲಿದೆ. ... * ರೈಲು ಮಾರ್ಗ ತುಮಕೂರು-ದಾವಣಗೆರೆ ನೇರ ರೈಲು ಮಾರ್ಗ ಯೋಜನೆ ವೇಗ ಪಡೆಯಬೇಕಿದೆ. ಈ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಏನಾದರೂ ಹೇಳಲಾಗಿದೆಯೆ ಎನ್ನುವುದು ಸದ್ಯದ ಕುತೂಹಲ. ಹರಿಹರ-ಹೊನ್ನಾಳಿ-ಶಿವಮೊಗ ರೈಲು ಮಾರ್ಗ ಎರಡು ಬಾರಿ ಸರ್ವೇ ಆಗಿದೆ. ಪ್ರತಿ ಬಜೆಟ್ ಸಂದರ್ಭದಲ್ಲೂ ಈ ಬಗ್ಗೆ ನಿರೀಕ್ಷೆ ಇರುತ್ತದೆ, ಆದರೆ ಆಯವ್ಯಯದಲ್ಲಿ ಯಾವುದೇ ಪ್ರಸ್ತಾಪವಾಗಿಲ್ಲ. ಈ ಬಾರಿಯಾದರೂ ಅನುದಾನ ನಿಗದಿಯಾದರೆ ಯೋಜನೆಯು ಹಳಿಯ ಮೇಲೆ ಬರಬಹುದು. ಶಿವಮೊಗ್ಗ-ಮರಿಯಮ್ಮನಹಳ್ಳಿ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಅಭಿವೃದ್ಧಿಪಡಿಸಲು ಅನುದಾನದ ಅಗತ್ಯವಿದೆ. ... * ದೇಗುಲಗಳ ಅಭಿವೃದ್ಧಿ ಜಿಲ್ಲೆಯಲ್ಲಿ ಹರಿಹರೇಶ್ವರ ದೇವಸ್ಥಾನ ಸೇರಿದಂತೆ ಪುರಾತತ್ವ ಇಲಾಖೆ ವ್ಯಾಪ್ತಿಯ, ಪ್ರವಾಸಿ ಆಕರ್ಷಣೆಯ ಹಲವು ದೇಗುಲಗಳಿವೆ. ಅವುಗಳನ್ನು ಅಭಿವೃದ್ಧಿಪಡಿಸುವ ಕಡೆಗೆ ಗಮ ಹರಿಸಬೇಕಿದೆ. ಜಿಲ್ಲೆಯಲ್ಲಿ ಮಹಿಳೆಯರು ಗಾರ್ಮೆಂಟ್ ಉದ್ಯಮ ಸ್ಥಾಪಿಸಲು ಪ್ರೋತ್ಸಾಹ ನೀಡಬೇಕಿದೆ. ಮಹಿಳೆಯರ ಆರೋಗ್ಯಕ್ಕೆ ಒತ್ತು ನೀಡಬೇಕಿದ್ದು ಗರ್ಭಕಂಠದ ಕ್ಯಾನ್ಸರ್‌ಗೆ ಉಚಿತ ಲಸಿಕೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಿ ಅನುಷ್ಠಾನಕ್ಕೆ ತಂದರೆ ಮಹಿಳೆಯರ ಸ್ವಾಸ್ಥೃ ಸುಧಾರಿಸಿ ಅವರೂ ಆರ್ಥಿಕವಾಗಿ ಸಬಲೀಕರಣ ಹೊಂದಲು ಸಾಧ್ಯವಾಗುತ್ತದೆ. ... * ಉದ್ಯೋಗ, ಕೌಶಲ ತರಬೇತಿ ಜಿಲ್ಲೆಯಲ್ಲಿ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ಸ್ಥಾಪನೆಯಾದರೆ ಹಲವು ಕಂಪನಿಗಳು ಬಂದು ಯುವಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಹರಿಹರದ ಕೈಗಾರಿಕಾ ಪ್ರದೇಶದಲ್ಲಿ ಲಭ್ಯವಿರುವ 16 ಎಕರೆ ಸರ್ಕಾರಿ ಜಾಗವನ್ನು ಈ ಉದ್ದೇಶಕ್ಕೆ ಬಳಸಲು ಅವಕಾಶವಿದೆ. ಯುವಜನರಲ್ಲಿ ಕೌಶಲ ಅಭಿವೃದ್ಧಿಪಡಿಸಿ ಅವರು ಉದ್ಯೋಗದಲ್ಲಿ ತೊಡಗುವಂತೆ ಮಾಡಲು ಕೌಶಲಾಭಿವೃದ್ಧಿ ಕೇಂದ್ರ ಸ್ಥಾಪಿಸುವ ಪ್ರಸ್ತಾವನೆಯೂ ಇದೆ. ನಗರದ ಸರ್ಕಾರಿ ಐಟಿಐ ಕಾಲೇಜು ಆವರಣದಲ್ಲಿ ಅದನ್ನು ಸ್ಥಾಪಿಸಲು ಜಾಗವಿದೆ. ... (ಕೋಟ್) ರಾಜ್ಯದಿಂದ ಹೆಚ್ಚು ಜಿಎಸ್‌ಟಿ ಸಂಗ್ರಹ ಆಗುತ್ತಿದೆ. ಆದಾಯ ತೆರಿಗೆಯಲ್ಲೂ ಕೊಡುಗೆ ಇದೆ. ಅದಕ್ಕೆ ತಕ್ಕಂತೆ ಕರ್ನಾಟಕಕ್ಕೆ ವಿವಿಧ ಯೋಜನೆಗಳ ಕೊಡುಗೆ ಸಿಗಬೇಕಿದೆ. ರೈತರಿಗಾಗಿ, ಯುವಜನರಿಗಾಗಿ ಕಾರ್ಯಕ್ರಮಗಳು ರೂಪಿತವಾಗಬೇಕು. ಮಹಿಳಾ ಸಬಲೀಕರಣಕ್ಕೆ ಒತ್ತು ಸಿಗಬೇಕು. ನೀರಾವರಿ, ಮೂಲಸೌಲಭ್ಯಕ್ಕೆ ಆದ್ಯತೆ ದೊರೆಯಬೇಕು. ಬುಡಕಟ್ಟು ಜನಾಂಗದ ಮಕ್ಕಳ ಶಿಕ್ಷಣಕ್ಕಾಗಿ ಏಕಲವ್ಯ ಶಾಲೆ ಸ್ಥಾಪನೆಯಾಗಬೇಕು. ಮೆಕ್ಕೆಜೋಳ ಸಂಶೋಧನಾ ಕೇಂದ್ರ ಆಗಬೇಕು. ಡಾ. ಪ್ರಭಾ ಮಲ್ಲಿಕಾರ್ಜುನ್, ಸಂಸದೆ