

ದಾವಣಗೆರೆ ಹರಿಹರ-ಶಿವಮೊಗ್ಗ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಹಳೇ ಕುಂದುವಾಡ-ಬನ್ನಿಕೋಡು ಮಾರ್ಗದಲ್ಲಿ ನೇರ ಸೇತುವೆ ನಿರ್ಮಿಸಲು ಆಗ್ರಹಿಸಿ ಹಳೇ ಕುಂದುವಾಡ ಗ್ರಾಮಸ್ಥರು ಗುರುವಾರ ರಸ್ತೆತಡೆ ನಡೆಸಿದರು. ಹಳೇ ಕುಂದುವಾಡ ಗ್ರಾಮದಿಂದ ಬನ್ನಿಕೋಡು ಮಾರ್ಗದಲ್ಲಿ ಹೋಗಬೇಕಾದರೆ ರಾಷ್ಟ್ರೀಯ ಹೆದ್ದಾರಿಯ ಬಳಿ ಕೆಳಸೇತುವೆ ನಿರ್ಮಿಸಿದರೆ ಅನೇಕ ಗ್ರಾಮದವರಿಗೆ ಅನುಕೂಲವಾಗುತ್ತದೆ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡರು. ಈಗಾಗಲೇ ಎರಡು ಸೇತುವೆಗಳನ್ನು ಅವೈಜ್ಞಾನಿಕವಾಗಿ ಮಾಡಿದ್ದಾರೆ. ಅಲ್ಲದೇ ಸುತ್ತಿ, ಬಳಸಿ ಅಲ್ಲಿಗೆ ಹೋಗಬೇಕಾಗಿದೆ. Lಎಂದು ಒತ್ತಾಯಿಸಿದರು. ಇಪ್ಪತ್ತು ವರ್ಷಗಳಿಂದ ನೇರ ನೇತುವೆ ನಿರ್ಮಾಣ ಮಾಡುವಂತೆ ಮನವಿ ಮಾಡಿದರೂ ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ. ಈ ಹಿಂದೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸೂಚನೆ ನೀಡಿದ್ದರೂ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನೇರ ಸೇತುವೆ ನಿರ್ಮಾಣ ಮಾಡಿದರೆ ಹತ್ತಾರು ಹಳ್ಳಿಗಳಿಗೆ ಅನುಕೂಲವಾಗುತ್ತದೆ. ಶಾಲಾ ಮಕ್ಕಳಿಗೆ ಆಗುವ ತೊಂದರೆ ತಪ್ಪುತ್ತದೆ. ರೈತರ ಟ್ರ್ಯಾಕ್ಟರ್‌ಗಳು ಸಂಚರಿಸಲೂ ಅನುಕೂಲವಾಗುತ್ತದೆ. ಬಸ್ ಸಂಚಾರ ಆರಂಭವಾಗುತ್ತದೆ. ಇಷ್ಟೆಲ್ಲ ಅನುಕೂಲ ಇರುವುದರಿಂದ ಅಧಿಕಾರಿಗಳು ಸ್ಪಂದಿಸಬೇಕು. ಇಲ್ಲದಿದ್ದರೆ ಮುಂದಿನ ವಾರ ಹೆದ್ದಾರಿ ತಡೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ರಸ್ತೆ ಬಂದ್ ಆಗಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಉಪ ವಿಭಾಗಾಧಿಕಾರಿ ಸಂತೋಷ ಕುಮಾರ್, ತಹಸೀಲ್ದಾರ್ ಡಾ.ಎಂ.ಬಿ. ಅಶ್ವಥ್ ಅವರು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ವಿಜಯಕುಮಾರ್ ಸಂತೋಷ್, ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ ಭೇಟಿ ನಿಡಿದ್ದರು. ಒಂದು ಹಂತದಲ್ಲಿ ಅಧಿಕಾರಿಗಳು ಮತ್ತು ಗ್ರಾಮಸ್ಥರ ನಡುವೆ ವಾಗ್ವಾದ ನಡೆದು, 50ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಮಾಜಿ ಮೇಯರ್ ಎಚ್.ಎನ್. ಗುರುನಾಥ್, ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ಜಿ. ಗಣೇಶಪ್ಪ, ಮುಖಂಡರಾದ ಜೆ. ಮಾರುತಿ, ಎಚ್.ಜಿ. ಮಂಜಪ್ಪ, ಮಾಲತೇಶ್, ಜಿಮ್ಮಿ ಹನುಮಂತಪ್ಪ, ಮಿಟ್ಲಕಟ್ಟೆ ಚಂದ್ರಪ್ಪ, ಡಿಎಸ್‌ಎಸ್‌ನ ಮಂಜುನಾಥ, ಡಿ.ಜಿ. ಪ್ರಕಾಶ್, ಅಣ್ಣಪ್ಪ, ಗದಿಗೆಪ್ಪ, ಮಧು ನಾಗರಾಜ್, ದಯಾನಂದ್, ಜೆ.ಸಿ. ದೇವರಾಜ್, ರಮೇಶ್ ಪಾಲ್ಗೊಂಡಿದ್ದರು.