

ದಾವಣಗೆರೆ : ನ್ಯಾಯಾಂಗ ವ್ಯವಸ್ಥೆಯಲ್ಲಿ ತ್ವರಿತ ನ್ಯಾಯ ಒದಗಿಸಿದಾಗ ಮಾತ್ರ ಪ್ರಗತಿ ಸಾಧ್ಯವಿದೆ ಎಂದು ನಿವೃತ್ತ ಡಿಜಿಪಿ ಮತ್ತು ಪೊಲೀಸ್ ಮಹಾ ನಿರೀಕ್ಷಕ ಶಂಕರ್ ಬಿದರಿ ಹೇಳಿದರು. ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ನಗರದ ಡಿ.ದೇವರಾಜ ಅರಸು ಬಡಾವಣೆಯಲ್ಲಿರುವ ಶಿವಧ್ಯಾನ ಮಂದಿರದಲ್ಲಿ ಶನಿವಾರ, ಮುಖ್ಯಮಂತ್ರಿಗಳ ಚಿನ್ನದ ಪದಕ ಮತ್ತು ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ ಪುರಸ್ಕೃತ ಪೊಲೀಸರಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಯಾವುದೇ ಅಪರಾಧ ನಡೆದಾಗ ಎರಡು ವರ್ಷದಲ್ಲಿ ಆ ಪ್ರಕರಣ ಇತ್ಯರ್ಥವಾಗಬೇಕು. ತಪ್ಪಿತಸ್ಥ ಎಂದು ನಿರ್ಧಾರವಾದರೆ ಶಿಕ್ಷೆ ಆಗಬೇಕು. ನಿರ್ದೋಷಿಯಾದರೆ ಬಿಡುಗಡೆ ಮಾಡಬೇಕು. ಹತ್ತಾರು ವರ್ಷಗಳಾದರೂ ನ್ಯಾಯ ತೀರ್ಮಾನ ಆಗದಿದ್ದರೆ ಪ್ರಯೋಜನವಿಲ್ಲ ಎಂದು ತಿಳಿಸಿದರು. ಬೆಂಗಳೂರಿನಲ್ಲಿ 2008 ಮತ್ತು 2010ರಲ್ಲಿ ಬಾಂಬ್ ಸ್ಫೋಟ ಪ್ರಕರಣ ನಡೆದು 16 ವರ್ಷ ಕಳೆದಿದೆ. ಇದುವರೆಗೂ ತೀರ್ಪು ಹೊರ ಬಿದ್ದಿಲ್ಲ. ಈ ರೀತಿಯಾದರೆ ಯಾರಿಗೂ ಉಪಯೋಗವಿಲ್ಲ. ನ್ಯಾಯ ವ್ಯವಸ್ಥೆ ಬಲಗೊಳ್ಳಬೇಕು ಎಂದರು. ಮನುಷ್ಯ-ಮನುಷ್ಯರ ನಡುವೆ, ಸಮಾಜ-ಸಮಾಜಗಳ ನಡುವೆ, ದೇಶ-ದೇಶಗಳ ನಡುವೆ ಇರುವ ದ್ವೇಷ, ಅಸೂಯೆ ಹೋಗಲಾಡಿಸಿ ಪರಸ್ಪರ ಪ್ರೀತಿ, ಗೌರವ ಭಾವನೆ ಬೆಳೆಸುವ ಕೆಲಸವನ್ನು ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮಾಡುತ್ತಿದೆ ಎಂದು ಹೇಳಿದರು. ಈ ಸಂಸ್ಥೆ ಸ್ಥಾಪನೆಯಾಗಿ 88 ವರ್ಷಗಳಲ್ಲಿ ಜಗತ್ತಿನ ವಿವಿಧೆಡೆ ಆಧ್ಯಾತ್ಮಿಕ ಶಕ್ತಿ ಕೇಂದ್ರಗಳನ್ನು ತೆರೆದು ಜನಸಾಮಾನ್ಯರನ್ನು ದೈವತ್ವದ ಕಡೆಗೆ ಕೊಂಡೊಯ್ಯುವ ಜತೆಗೆ ಸಾತ್ವಿಕ ಶಕ್ತಿಯನ್ನು ಬೆಳೆಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು. ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ದಾವಣಗೆರೆ ಪ್ರಧಾನ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಮಾತನಾಡಿ, ಆಧ್ಯಾತ್ಮಿಕ ಶಿಕ್ಷಣದಿಂದ ನೆಮ್ಮದಿ, ಒತ್ತಡಮುಕ್ತ ಜೀವನ ನಡೆಸಬಹುದು. ಈ ದೃಷ್ಟಿಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಶ್ವರೀಯ ವಿಶ್ವವಿದ್ಯಾಲಯ ಆಧ್ಯಾತ್ಮಿಕ ಸಂಸ್ಥೆಯನ್ನು ಸ್ಥಾಪಿಸಲಾಯಿತು. ವಿಶ್ವ ರಕ್ಷಕ ಪರಮಾತ್ಮನನ್ನು ದಿನಿನತ್ಯ ಸ್ಮರಣೆ ಮಾಡಿದರೆ ನೆಮ್ಮದಿ ಲಭಿಸಲಿದೆ ಎಂದರು. ಪೊಲೀಸರು ಮೂರು ಅಥವಾ ಐದು ದಿನಗಳ ಕಾಲ ಆಧ್ಯಾತ್ಮಿಕ ಜ್ಞಾನ ಪಡೆದರೆ ಒತ್ತಡ ಮುಕ್ತ ಜೀವನ, ನೆಮ್ಮದಿ ಕಾಣಬಹುದು. ಅಲ್ಲದೇ ಸಮಾಜದಲ್ಲಿ ನಡೆಯುವ ದುಷ್ಕೃತ್ಯ, ಅಪರಾಧ ಸಂಖ್ಯೆಗಳನ್ನು ಕಡಿಮೆ ಮಾಡುವ ಜತೆಗೆ ಅಪರಾಧಿಗಳಿಗೆ ಪ್ರೀತಿಯಿಂದ ಶಿಕ್ಷಣ ನೀಡಿದರೆ ಅವರನ್ನು ಪರಿವರ್ತನೆ ಮಾಡಬಹುದಾಗಿದೆ ಎಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕ ಮತ್ತು ರಾಷ್ಟಪತಿ ವಿಶಿಷ್ಟ ಸೇವಾ ಪದಕ ಪುರಸ್ಕೃತ ಪೊಲೀಸರನ್ನು ಸನ್ಮಾನ ಮಾಡಲಾಯಿತು. ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಹಳಿಯಾಳ ಶಾಖೆಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಡಾ. ಪದ್ಮಾಜಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪೊಲೀಸ್ ಅಧಿಕಾರಿಗಳಾದ ಬಿ.ಬಿ.ಸಕ್ರಿ, ಟಿ.ಎಸ್. ಮುರುಗಣ್ಣನವರ್, ಡಾ.ನಾಗಪ್ರಕಾಶ್, ಏಕಬೋಟೆ ಮಂಜುನಾಥ್ ಇದ್ದರು.