ಭವ ಬಂಧನ ಮುಕ್ತಿಗೆ ಬೇಕು ಪರಮಾತ್ಮನ ರಕ್ಷಣೆ

dvg-brahma-kumari.jpg
Published on

ದಾವಣಗೆರೆ :  ಹಲವು ಬಂಧನಗಳ ನಡುವೆ ಬದುಕು ಸಾಗಿಸುವ ನಮ್ಮೆಲ್ಲರಿಗೆ ಪರಮಾತ್ಮನ ರಕ್ಷಣೆ ಬೇಕೇ ಬೇಕು. ಅದನ್ನು ಪಡೆದುಕೊಳ್ಳುವ ಹಬ್ಬವೇ ‘ರಕ್ಷಾ ಬಂಧನ’ ಎಂದು, ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ದಾವಣಗೆರೆ ಘಟಕದ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಹೇಳಿದರು.  ನಗರದ ದೇವರಾಜ ಅರಸು ಬಡಾವಣೆಯಲ್ಲಿರುವ ಶಿವಧ್ಯಾನ ಮಂದಿರದಲ್ಲಿ ಭಾನುವಾರ, ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಹಮ್ಮಿಕೊಂಡಿದ್ದ ರಕ್ಷಾ ಬಂಧನ, ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.  ಬಂಧನ ಯಾರಿಗೂ ಇಷ್ಟವಿಲ್ಲ, ಆದರೆ ರಕ್ಷಾ ಬಂಧನ ಎಲ್ಲರಿಗೂ ಇಷ್ಟ. ಲೌಕಿಕ, ಅಲೌಕಿಕ, ಆಧ್ಯಾತ್ಮಿಕ, ಪಾರಮಾರ್ಥಿಕ ಬಂಧನಗಳಿಗೆ ನಾವು ಒಳಗಾಗುತ್ತೇವೆ. ಮದುವೆಯೂ ಒಂದು ಬಂಧನವೇ ಆಗಿದೆ ಎಂದು ಅಭಿಪ್ರಾಯಪಟ್ಟರು.  ರಕ್ಷಾ ಬಂಧನವು ಪ್ರೀತಿ, ಸಹೋದರತೆ ಸಾರುವ ಹಬ್ಬವಾಗಿದೆ. ಈ ಸಂದರ್ಭದಲ್ಲಿ ನಾವು ದುಶ್ಚಟಗಳನ್ನು ತ್ಯಜಿಸುವ, ಕೋಪ ಮಾಡಿಕೊಳ್ಳುವುದಿಲ್ಲ ಎನ್ನುವ ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.  ಜೀವನದಲ್ಲಿ ಯಾರಿಗೂ ನೋಯಿಸದಂತೆ ಇರಬೇಕು. ಮುಳ್ಳಿನಂತಾಗದೇ ದೈವೀ ಗುಣಗಳಿಂದ ಕೂಡಿದ ಚೈತನ್ಯದ ಹೂವಾಗಬೇಕು. ಸಂಯಮ ಮತ್ತು ನಿಯಮಗಳನ್ನು ಅನುಸರಿಸಬೇಕು. ಮಧುರ ಸಂಬಂಧಗಳನ್ನು ಕಾಪಾಡಿಕೊಳ್ಳಬೇಕು. ಪರಮಾತ್ಮನೊಂದಿಗೆ ಸಂಬಂಧ ಹೊಂದಬೇಕು ಎಂದರು.  ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ 7 ದಿನಗಳ ಕೋರ್ಸ್ ಇದ್ದು ಆಸಕ್ತರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಇಲ್ಲಿ ಸಿಗುವ ಜ್ಞಾನವನ್ನು ಪಡೆದು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.  ದೇವರ ಮೇಲೆ ಭಕ್ತಿ, ಪ್ರೀತಿ ಇದ್ದವರೇ ಪಾಂಡವರು. ಅವರ ಹೆಸರುಗಳು ಧರ್ಮ, ಆತ್ಮಬಲ, ಜ್ಞಾನಾರ್ಜನೆ, ಸಮಾನತೆ, ಸಹಯೋಗದ ಸಂದೇಶವನ್ನು ಸಾರುತ್ತವೆ. ಭಗವಂತನಲ್ಲಿ ಪ್ರೀತಿ ಇಲ್ಲದವರು ಕೌರವರು ಎಂದು ವಿಶ್ಲೇಷಿಸಿದರು.  ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್ ಮಾತನಾಡಿ, ಜೀವನದಲ್ಲಿ ಹಲವು ಬಂಧನಗಳಿಗೆ ಒಳಗಾಗಿ ಬಿಡುಗಡೆಯ ಕಡೆಗೆ ಹೋಗುವುದೇ ಮೋಕ್ಷ. ಸಮಾಧಾನ ಮತ್ತು ಶಾಂತಿಯನ್ನು ಮೈಗೂಡಿಸಿಕೊಳ್ಳಬೇಕು. ನಮ್ಮ ಕಣ್ಣಿಗೆ ನೈತಿಕತೆಯ ಪರದೆ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.  ರಾಜಯೋಗಿನಿ ಬ್ರಹ್ಮಾಕುಮಾರಿ ರಾಜೇಶ್ವರಿ ಪ್ರಾಸ್ತಾವಿಕ ಮಾತನಾಡಿ, 1937 ರಲ್ಲಿ ಸ್ಥಾಪನೆಯಾದ ಬ್ರಹ್ಮಾಕುಮಾರಿ ಈಶ್ವರೀಯ ವಿವಿ ವಸುಧೈವ ಕುಟುಂಬಕಂ ಎಂಬ ಧ್ಯೇಯದೊಂದಿಗೆ ಕಾರ್ಯ ನಿರ್ವಹಿಸುತ್ತ ಬಂದಿದೆ. ಸಂಸ್ಥೆಯು 147 ದೇಶಗಳಲ್ಲಿ 15 ಸಾವಿರಕ್ಕೂ ಹೆಚ್ಚು ಕೇಂದ್ರಗಳನ್ನು ಹೊಂದಿದೆ. ವಿಶ್ವಸಂಸ್ಥೆಯ ಸಲಹಾ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಮಾಹಿತಿ ನೀಡಿದರು.  ಈಶ್ವರೀಯ ವಿವಿಯ ಕಡೂರು ಶಾಖೆಯ ಸಂಚಾಲಕಿ ಜ್ಞಾನೇಶ್ವರಿ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಬಾಪೂಜಿ ವಿದ್ಯಾಸಂಸ್ಥೆಯ ನಿರ್ದೇಶಕ ಡಾ. ಸಂಪನ್ನ ಮುತಾಲಿಕ್, ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಡಾ.ಎಂ.ಸಿ. ಶಶಿಕಾಂತ್, ದಂತ ವೈದ್ಯೆ ಡಾ. ರೂಪಶ್ರೀ ಶಶಿಕಾಂತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಬಡದಾಳ್, ಖಜಾಂಚಿ ಪವನ್ ಐರಣಿ, ಸಾರ್ವಜನಿಕ ಸಂಪರ್ಕಾಧಿಕಾರಿ ಪಿ.ಎಸ್. ಲೋಕೇಶ್ ಇದ್ದರು.  ಹಿರಿಯ ಪತ್ರಕರ್ತ ಇ.ಎಂ. ಮಂಜುನಾಥ್ ಸ್ವಾಗತಿಸಿದರು. ಡಾ. ಸಿದ್ದೇಶ್ ನಿರೂಪಿಸಿದರು. ಬಾಲಕಿ ಸಿಂಚನಾ ಮತ್ತು ತಂಡದವರು ನೃತ್ಯ ಪ್ರದರ್ಶನ ನೀಡಿದರು. ಇದೇ ವೇಳೆ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net