ಸಕಾರಾತ್ಮಕ ಚಿಂತನೆಯಿಂದ ಆತ್ಮಬಲ ಹೆಚ್ಚಳ

shivani.jpg
Published on

ದಾವಣಗೆರೆ : ಇತರರ ಬಗ್ಗೆ ನಕಾರಾತ್ಮಕ ಆಲೋಚನೆ ಮಾಡುವುದನ್ನು ಬಿಟ್ಟು ಸಕಾರಾತ್ಮಕ ಚಿಂತನೆಯ ಮೂಲಕ ಆತ್ಮ ಬಲವನ್ನು ಹೆಚ್ಚಿಸಿಕೊಳ್ಳಬೇಕು ಎಂದು, ಅಂತಾರಾಷ್ಟ್ರೀಯ ಪ್ರೇರಕ ಪ್ರವಚನಕಾರರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಶಿವಾನಿ ಹೇಳಿದರು.
 ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ ನಗರದ ಬಾಪೂಜಿ ಎಂ.ಬಿ.ಎ ಕಾಲೇಜು ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಸಕಾರಾತ್ಮಕ ಚಿಂತನ ಕಲೆ’ ಕುರಿತು ಉಪನ್ಯಾಸ ನೀಡಿದರು.
 ನಮ್ಮ ಆಲೋಚನಾ ಕ್ರಮ, ಮಾತು ಮತ್ತು ವ್ಯವಹಾರ ಪರಿಶುದ್ಧ ಮತ್ತು ಗುಣಮಟ್ಟದಿಂದ ಕೂಡಿದ್ದರೆ ಆತ್ಮದ ಶಕ್ತಿ ಜಾಸ್ತಿಯಾಗುತ್ತದೆ. ಬೇರೆಯವರ ಬಗ್ಗೆ ಗಾಸಿಪ್ ಮಾಡುವುದು, ನಿಂದಿಸುವುದರಿಂದ ಅದರ ಪರಿಣಾಮ ಮೊದಲು ನಮ್ಮ ಮೇಲೆಯೆ ಆಗುತ್ತದೆ ಎಂದು ತಿಳಿಸಿದರು.
 ಇನ್ನೊಬ್ಬರ ಸ್ವಭಾವ, ಸಂಸ್ಕಾರ ನಕಾರಾತ್ಮಕವಾಗಿದ್ದರೂ ನಮ್ಮಲ್ಲಿ ಅವರ ಬಗ್ಗೆ ಒಳ್ಳೆಯ ಭಾವನೆ ಮೂಡಬೇಕು. ಅಂಥ ಸಕಾರಾತ್ಮಕ ಆಲೋಚನೆಯು ಪರಿಣಾಮ ಬೀರಿ ಅವರಲ್ಲಿ ಬದಲಾವಣೆ ತರಲಿದೆ ಎಂದು ಅಭಿಪ್ರಾಯಪಟ್ಟರು.
 ಕಲಿಯುಗದಲ್ಲಿ ವಿಕಾರಗಳು ಅತಿಯಾಗಿದ್ದು ಆತ್ಮದ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕಿದೆ. ಸತ್ಯಯುಗದ ಕಡೆಗೆ ನಾವು ಹೆಜ್ಜೆ ಹಾಕಬೇಕಾದರೆ ನಮ್ಮ ವಿಚಾರಗಳು, ಮಾತು ಮತ್ತು ವ್ಯವಹಾರಗಳು ಗುಣಮಟ್ಟದಿಂದ ಕೂಡಿರಬೇಕು. ಇದನ್ನು ವ್ರತದಂತೆ ಪಾಲಿಸಬೇಕು ಎಂದು ಹೇಳಿದರು.
 ಹುಬ್ಬಳ್ಳಿಯ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ನಿರ್ದೇಶಕ ರಾಜಯೋಗಿ ಬ್ರಹ್ಮಾಕುಮಾರ ಡಾ. ಬಸವರಾಜ ರಾಜಋಷಿ ಸಾನ್ನಿಧ್ಯ ವಹಿಸಿದ್ದರು. ಬ್ರಹ್ಮಾಕುಮಾರಿ ನಿರ್ಮಲಾಜಿ, ಹರಿಹರ ಶಾಸಕ ಬಿ.ಪಿ. ಹರೀಶ್, ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್, ದಾವಣಗೆರೆ ವಿವಿ ಕುಲಪತಿ ಬಿ.ಡಿ. ಕುಂಬಾರ್, ಉದ್ಯಮಿಗಳಾದ ಅಥಣಿ ವೀರಣ್ಣ, ಅಜಯ್ ಗುಪ್ತಾ, ಎಸ್.ಎಸ್. ಕೇರ್ ಟ್ರಸ್ಟ್‌ನ ಲೈಫ್ ಟ್ರಸ್ಟಿ ಡಾ. ಪ್ರಭಾ ಮಲ್ಲಿಕಾರ್ಜುನ್ ಇದ್ದರು. ಬ್ರಹ್ಮಾಕುಮಾರಿ ಲೀಲಾಜಿ ಸ್ವಾಗತಿಸಿದರು.
 ...
 (ಬಾಕ್ಸ್)
 ದಿವ್ಯತೆಯ ನಗರ
 ಪ್ರತಿಯೊಂದು ಊರಿಗೂ ಒಂದು ವಿಶೇಷತೆ ಇರುತ್ತದೆ. ದಾವಣಗೆರೆಯನ್ನು ‘ದೇವನಗರಿ’ ಎನ್ನುತ್ತಾರೆ. ಇಲ್ಲಿ ದೇವ, ದೇವತೆಯರು ಇದ್ದಾರೆ, ಹಾಗಾಗಿ ಇದು ದಿವ್ಯತೆಯ ನಗರ ಎಂದು ಬ್ರಹ್ಮಾಕುಮಾರಿ ಶಿವಾನಿ ಹೇಳಿದರು.
 ದೇವನಗರಿ ಎಂದು ಕೇವಲ ಹೇಳಿದರೆ ಸಾಲದು, ಅದು ಆಚರಣೆಯಲ್ಲಿ ಕಾಣಬೇಕು. ಅದಕ್ಕೆ ತಕ್ಕಂತೆ ನಮ್ಮ ಆಲೋಚನೆ, ಚಿಂತನೆಗಳು ಇರಬೇಕು. ರಾಮರಾಜ್ಯ, ಸತ್ಯಯುಗದ ಮಾದರಿಯನ್ನು ನೋಡಬೇಕಿದ್ದರೆ ದಾವಣಗೆರೆಗೆ ಬರಬೇಕು ಎನ್ನುವಂತೆ ನಮ್ಮ ವರ್ತನೆಗಳು ಇರಬೇಕು ಎಂದು ತಿಳಿಸಿದರು.
 ...
 
 (ಕೋಟ್)
 ನಕಾರಾತ್ಮಕ, ವಿರೋಧಾತ್ಮಕ ವಿಚಾರಗಳು ಸಮಾಜದ ವಾತಾವರಣವನ್ನು ಹಾಳು ಮಾಡುತ್ತವೆ. ಆದ್ದರಿಂದ ಸಕಾರಾತ್ಮಕ ಆಲೋಚನೆಗಳನ್ನು ಬೆಳೆಸಿಕೊಳ್ಳಬೇಕು. ಒತ್ತಡಮುಕ್ತ ಜೀವನ, ನಾಯಕತ್ವ, ಕೌಶಲ ಅಭಿವೃದ್ಧಿ, ಜೀವನ ನಿರ್ವಹಣೆಯ ಕುರಿತು ಶಿವಾನಿ ದೀದಿ ಅವರು ಸರಳವಾಗಿ ತಿಳಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ದಾವಣಗೆರೆ ಶಾಖೆಯು ಸಮಾಜದಲ್ಲಿ ಆಧ್ಯಾತ್ಮಿಕ ಅರಿವನ್ನು ಮೂಡಿಸುತ್ತ ಬಂದಿದೆ.
  ಡಾ. ಶಾಮನೂರು ಶಿವಶಂಕರಪ್ಪ, ಶಾಸಕ
 ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net