

ದಾವಣಗೆರೆ: ತಾವು ಮತದಾರರಲ್ಲದಿದ್ದರೂ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯ ವೇಳೆ ಹರಿಹರದ ಕಾಂಗ್ರೆಸ್ ಶಾಸಕ ಎಸ್. ರಾಮಪ್ಪ ಮತಗಟ್ಟೆಗೆ ಪ್ರವೇಶ ಮಾಡಿ ಚರ್ಚೆಗೆ ಗ್ರಾಸವಾಗಿದ್ದಾರೆ.
ಮಲೇಬೆನ್ನೂರು ಗ್ರಾಮದ ಜಿಗಳಿ ರಸ್ತೆಯ ಪದವಿಪೂರ್ವ ಕಾಲೇಜಿನ ಮತಗಟ್ಟೆಗೆ ಬುಧವಾರ ಮಧ್ಯಾಹ್ನ ತೆರಳಿದ ರಾಮಪ್ಪ, ಒಳಗೆ ಪ್ರವೇಶಿಸಿ, ಮತಗಟ್ಟೆ ಸಿಬ್ಬಂದಿಯಿಂದ ಮತದಾನದ ಕುರಿತು ಮಾಹಿತಿ ಪಡೆದರು. ಆಗ ಅವರು ಮಾಸ್ಕ್ ಕೂಡಾ ಹಾಕಿರಲಿಲ್ಲ ಎಂಬುದು ಗಮನಾರ್ಹ. ಶಾಸಕರ ಜತೆಗೆ ಅವರ ಬೆಂಬಲಿಗರೂ ಇದ್ದರು.
ಶಾಸಕರು ಮತದಾನ ಕೇಂದ್ರದ ಹೊರಗೆ ಮಾತ್ರ ಮನವಿ ಮಾಡಿಕೊಳ್ಳಲು ಅವಕಾಶವಿದೆ, ಆದರೆ ಮತಗಟ್ಟೆಯ ಒಳಗೆ ಪ್ರವೇಶಿಸಿದ್ದು ತಪ್ಪು ಎಂಬ ಮಾತು ಕೇಳಿಬಂದಿದೆ.
ಇಲ್ಲಿ ಬಿಸಿಲಿದೆ, ಮತದಾರರಿಗೆ ಶಾಮಿಯಾನ ವ್ಯವಸ್ಥೆ ಮಾಡಿಲ್ಲ. ವೃದ್ಧರು, ಆರೋಗ್ಯ ಸಮಸ್ಯೆ ಉಳ್ಳವರಿದ್ದಾರೆ. ಕರೊನಾ ಆತಂಕವೂ ಇದೆ. ಇದು ನಿಮ್ಮ ಗಮನಕ್ಕೆ ಬಂದಿಲ್ಲವೆ ಎಂದು ಪ್ರಶ್ನಿಸಿದರು.
ಹೊರಗೆ ಬರುವ ಸಂದರ್ಭದಲ್ಲಿ ಮತದಾನ ಮಾಡಲು ಸಾಲಿನಲ್ಲಿ ನಿಂತಿದ್ದ ಮಹಿಳೆಯೊಬ್ಬರು ಶಾಸಕರನ್ನು ತರಾಟೆಗೆ ತೆಗೆದುಕೊಂಡರು.
ನಮ್ಮಂಥ ಪದವೀಧರರಿಗೇ ಈ ಅವಸ್ಥೆಯಾದರೆ ಅಮಾಯಕರ ಗತಿಯೇನು, ಏಕೆ ಈ ನಿರ್ಲಕ್ಷೃ ಎಂದು ಕೇಳಿದರು.