ಜ್ಞಾನ ವೃದ್ಧಿಗೆ ಪುಸ್ತಕಗಳು ಸಹಕಾರಿ

book.jpg
Published on

ದಾವಣಗೆರೆ : ಪುಸ್ತಕಗಳು ವಿದ್ಯಾರ್ಥಿಗಳ ಜ್ಞಾನ ಹೆಚ್ಚಿಸುವ ಜತೆಗೆ ಶೈಕ್ಷಣಿಕ ಸಾಧನೆಗೆ ಸಹಕಾರಿಯಾಗಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ. ಕೊಟ್ರೇಶ್ ಹೇಳಿದರು.
 ಡಾ.ಎಚ್.ಎಫ್. ಕಟ್ಟಿಮನಿ ಪ್ರೌಢಶಿಕ್ಷಣ ಪ್ರತಿಷ್ಠಾನ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತಿತರೆ ಸಂಸ್ಥೆಗಳ ಸಹಯೋಗದಲ್ಲಿ ನಗರದ ಈಶ್ವರಮ್ಮ ಪ್ರೌಢಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪುಸ್ತಕ ಪಂಚಮಿ 14ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
 ಅನ್ನದಾನ ಒಂದು ಹೊತ್ತಿನ ಪ್ರಸಾದವಾದರೆ ಪುಸ್ತಕದಾನ ಜೀವಮಾನದ ಪ್ರಸಾದ. ಶಾಲಾ ಮಕ್ಕಳ ಶಿಕ್ಷಣಕ್ಕಾಗಿ ಪ್ರತಿಷ್ಠಾನವು ಪ್ರತಿವರ್ಷ ಪ್ರತಿಭಾವಂತರಿಗೆ ಪುಸ್ತಕ ವಿತರಿಸುತ್ತಿದ್ದು, ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸದೊಂದಿಗೆ ಜೀವನದಲ್ಲಿ ಉನ್ನತ ಸಾಧನೆ ಕೈಗೊಳ್ಳಬೇಕು ಎಂದು ತಿಳಿಸಿದರು.
 ಶಾಲೆಗಳಲ್ಲಿ ವಿದ್ಯಾರ್ಥಿಗಳ ಕಲಿಕೆಯಲ್ಲಿ ವ್ಯತ್ಯಾಸವಿರುತ್ತದೆ. ಶಿಕ್ಷಕರು ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ದಡ್ಡ ಎಂಬ ಹಣೆಪಟ್ಟಿ ಕಟ್ಟಬಾರದು. ಇದರಿಂದ ಮಕ್ಕಳಲ್ಲಿ ಕೀಳರಿಮೆ ಮನೋಭಾವ ಮೂಡುತ್ತದೆ ಎಂದು ವಿದ್ಯಾರೇಖೆಯೇ ಇಲ್ಲ ಎಂದಿದ್ದ ಪಾಣಿನಿಯು ಪ್ರಸಿದ್ಧ ಸಂಸ್ಕೃತ ವ್ಯಾಕರಣ ತಜ್ಞ ಎನಿಸಿದ್ದನ್ನು ಉದಾಹರಿಸಿದರು.
 ಶಿಕ್ಷಕರು ಹಾಗೂ ಪಾಲಕರು ಮಕ್ಕಳ ಶಿಕ್ಷಣಕ್ಕೆ ಪ್ರೇರಣೆ ನೀಡಬೇಕು. ಮಕ್ಕಳು ಶಾಲೆಯಿಂದ ಬಂದಾಗ ಟಿವಿ ಹಾಗೂ ಮೊಬೈಲ್‌ಗಳಿಂದ ಹೊರಬಂದು ಶಾಲೆಯಲ್ಲಿ ನಡೆದ ಪಾಠ ಪ್ರವಚನಗಳ ಬಗ್ಗೆ ಪರಿಶೀಲಿಸಬೇಕು ಹಾಗೂ ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ಕಲ್ಪಿಸಬೇಕು. ಇದರಿಂದ ಮಕ್ಕಳ ಕಲಿಕೆಗೆ ಉತ್ತೇಜನ ನೀಡಿದಂತಾಗಲಿದೆ ಎಂದರು.
 ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯೆ ಕಿರುವಾಡಿ ಗಿರಿಜಮ್ಮ ಮಾತನಾಡಿ, ಮಕ್ಕಳ ಜ್ಞಾನಕ್ಕೆ ಪೂರಕವಾದ ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವುದಲ್ಲದೆ ಪಾಲಕರಿಗೆ ಅರಿವು ಮೂಡಿಸಲಿದೆ. ದಾನಿಗಳಿಗೆ ಇಂತಹ ಸಮಾಜಮುಖಿ ಕಾರ್ಯಗಳು ಹೆಚ್ಚಿನ ಪ್ರೇರಣೆ ನೀಡಲಿವೆ ಎಂದು ಹೇಳಿದರು.
 ಡಾ.ಎಚ್.ಎಫ್. ಕಟ್ಟಿಮನಿ ಪ್ರೌಢಶಿಕ್ಷಣ ಪ್ರತಿಷ್ಠಾನದ ಸಹ ಸಂಚಾಲಕ ಡಾ.ಸಿ.ಆರ್. ಬಾಣಾಪುರಮಠ್ ಮಾತನಾಡಿ, ಇಂದಿನ ಮಕ್ಕಳೆ ನಾಳಿನ ಪ್ರಜೆಗಳು. ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದಾಗ ಮಾತ್ರ ಉನ್ನತ ಸಾಧನೆ ಕೈಗೊಳ್ಳಲು ಸಾಧ್ಯ. ಡಾ.ಎಚ್.ಎಫ್. ಕಟ್ಟಿಮನಿ ಅವರು ಸ್ವಾತಂತ್ರೃಪೂರ್ವದಲ್ಲೇ ಹಳ್ಳಿಗಳಲ್ಲಿ ದಾನಿಗಳ ನೆರವಿನಿಂದ ಶಾಲೆ ತೆರೆದು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದರು ಎಂದು ತಿಳಿಸಿದರು.
 ಈಶ್ವರಮ್ಮ ಶಾಲಾಡಳಿತ ಮಂಡಳಿ ಗೌರವ ಕಾರ್ಯದರ್ಶಿ ಎ.ಆರ್. ಉಷಾ ರಂಗನಾಥ್ ಅಧ್ಯಕ್ಷತೆ ವಹಿಸಿದ್ದರು. ಶಾಲಾಡಳಿತ ಮಂಡಳಿ ಸುಜಾತಾ, ಪ್ರಾಚಾರ್ಯ ಕೆ.ಎಸ್. ಪ್ರಭುಕುಮಾರ್, ಪ್ರತಿಷ್ಠಾನದ ವಿ.ಸಿ. ಪುರಾಣಿಕ ಮಠ ಇತರರು ಇದ್ದರು.
 ಪ್ರತಿಷ್ಠಾನದಿಂದ ನಗರದ 21 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಸುಮಾರು 54 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ 520 ರೂ. ಮೌಲ್ಯದ ಪುಸ್ತಕಗಳು ಹಾಗೂ ಶೈಕ್ಷಣಿಕ ಪರಿಕರ ನೀಡಲಾಯಿತು.
 ಈಶ್ವರಮ್ಮ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿಶ್ರಾಂತ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್ ಬೂಸ್ನೂರು ಸ್ವಾಗತಿಸಿದರು, ಶಿಕ್ಷಕಿ ಶ್ರೀದೇವಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net