

ದಾವಣಗೆರೆ : ಮುಸ್ಲಿಂ ಸಮುದಾಯಕ್ಕೆ ಇತಿಹಾಸದಲ್ಲಿ ಬಹುದೊಡ್ಡ ಅನ್ಯಾಯವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು. ಜಿಲ್ಲಾ ಹಾಗೂ ಹರಿಹರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಪರಸ್ಪರ ಬಳಗ ಮತ್ತು ಮಾನವ ಬಂಧುತ್ವ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಲೇಖಕ ಜೆ. ಕಲೀಂ ಬಾಷಾ ಅನುವಾದಿಸಿರುವ ‘ಕ್ರಾಂತಿಕಾರಿ ಸ್ವಾತಂತ್ರ್ಯ ಹುತಾತ್ಮ ಕವಿ ರಾಮ್ ಪ್ರಸಾದ್ ಬಿಸ್ಮಿಲ್’ (ಆತ್ಮಕಥೆ) ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು. ಬ್ರಿಟಿಷರು ಹಾಗೂ ಇಂಗ್ಲಿಷ್ ಭಾಷೆಯನ್ನು ಏಕಕಾಲಕ್ಕೆ ವಿರೋಧಿಸಿದವರು ಮುಸ್ಲಿಮರು. ತೀವ್ರಗಾಮಿ ಪಂಥದಲ್ಲಿ ಅತಿ ಹೆಚ್ಚು ಮುಸ್ಲಿಂ ಹೋರಾಟಗಾರರಿದ್ದರು. ದೇಶದ ಸ್ವಾತಂತ್ರ್ಯ ಚಳವಳಿಯ ಚರಿತ್ರೆಯಲ್ಲಿ ಇದು ಸರಿಯಾಗಿ ದಾಖಲಾಗಿಲ್ಲ ಎಂದು ತಿಳಿಸಿದರು. ಮೊಘಲರ ಕೊನೆಯ ದೊರೆ ಬಹದ್ದೂರ್ ಷಾ ಜಾಫರ್‌ನನ್ನು ಬ್ರಿಟಿಷರು ಕ್ರೂರವಾಗಿ ಕೊಂದು ಹಾಕಿದರು. ದೇಶದ ಮುಸ್ಲಿಂ ಸಮುದಾಯಕ್ಕೆ ಇದು ದೊಡ್ಡ ಘಾಸಿಯುಂಟು ಮಾಡಿತು. ಬಹುತೇಕ ಮುಸ್ಲಿಮರು ಇಂಗ್ಲಿಷ್ ಶಾಲೆಗೆ ಸೇರಲೇ ಇಲ್ಲ. ಇಂತಹ ಸ್ವಾತಂತ್ರ್ಯ ಹೋರಾಟಗಾರರಿಗೆ ಇತಿಹಾಸದಲ್ಲಿ ನ್ಯಾಯ ಸಿಕ್ಕಿಲ್ಲ ಎಂದು ಪ್ರತಿಪಾದಿಸಿದರು. ಮುಸ್ಲಿಮರು ಸರ್ಕಾರದ ಅಧಿಕಾರಯುತ ಹುದ್ದೆಗಳಿಗೆ ಏರದಂತೆ ಬ್ರಿಟಿಷರು ಎಚ್ಚರ ವಹಿಸಿದ್ದರು. ಉರ್ದು ಬದಲಾಗಿ ಹಿಂದಿಗೆ ಪ್ರಾಮುಖ್ಯತೆ ನೀಡಲಾಯಿತು. ಬ್ರಿಟಿಷರ ಈ ಅನ್ಯಾಯವನ್ನು ಜವಾಹರಲಾಲ್ ನೆಹರೂ ಗುರುತಿಸಿದ್ದರು ಎಂದರು. ಬ್ರಿಟಿಷರ ನೀತಿಯನ್ನು ಬಿಜೆಪಿ ಸರ್ಕಾರ ಅನುಷ್ಠಾನಕ್ಕೆ ತರುತ್ತಿದೆ. ಆಡಳಿತಾತ್ಮಕ ಸೇವೆಗೆ ಮುಸ್ಲಿಮರು ಬರದಂತೆ ನೋಡಿಕೊಳ್ಳುವ ವ್ಯವಸ್ಥೆಯೊಂದು ರೂಪುಗೊಳ್ಳುತ್ತಿದೆ. ಸ್ವಾತಂತ್ರ್ಯ ಹೋರಾಟದ ಬಗ್ಗೆ ಹಸಿ ಸುಳ್ಳುಗಳನ್ನು ಬಿತ್ತಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ 22 ಭಾಷೆಗಳಲ್ಲಿ ಪುಸ್ತಕಗಳನ್ನು ಹೊರತರುವ ಪ್ರಯತ್ನ ನಡೆಯಿತು. ತೆರೆ ಮರೆಗೆ ಸರಿದ ಹೋರಾಟಗಾರರ ಮೇಲೆ ಬೆಳಕು ಚೆಲ್ಲುವುದು ಇದರ ಉದ್ದೇಶವಾಗಿತ್ತು. ಆಗ ಕರ್ನಾಟಕದಿಂದ ಸರಿಯಾದ ಒಂದೇ ಒಂದು ಪ್ರಸ್ತಾವ ಸಲ್ಲಿಕೆಯಾಗಲಿಲ್ಲ ಎಂದರು. ಎಪ್ಪತ್ತೈದು ವರ್ಷಗಳ ಹಿಂದೆ ದೇಶದಲ್ಲಿ ಏನು ನಡೆಯಿತು ಎಂಬುದರ ಬಗ್ಗೆ ಯುವ ಸಮೂಹಕ್ಕೆ ಗೊತ್ತಿಲ್ಲ. ಆದರೆ, ಸಾವಿರಾರು ವರ್ಷಗಳ ಹಿಂದಿನ ಅಯೋಧ್ಯೆಯ ಬಗ್ಗೆ ಮಾತನಾಡುತ್ತಾರೆ. ಪ್ರಖರ ಬೌದ್ಧಿಕ ಚಿಂತನಾ ಕ್ರಮ ಹುಟ್ಟದ ಹೊರತು ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಹೇಳಿದರು. ಸಾಹಿತಿ ದಾದಾಪೀರ್ ನವಿಲೇಹಾಳ್ ಮಾತನಾಡಿ, ರಾಷ್ಟ್ರೀಯತೆಗೆ ಬಹುಮುಖ ಆಯಾಮ ಇದೆ. ಈ ಸಾಮಾಜಿಕ ಸಂದರ್ಭದಲ್ಲಿ ಎಲ್ಲರನ್ನೂ ಒಳಗೊಳ್ಳಬೇಕು. ಆದರೆ, ಕೆಲವರನ್ನು ಹೊರದಬ್ಬುವುದು ರಾಷ್ಟ್ರೀಯತೆ ಎಂಬ ಹುಸಿ ಪ್ರಜ್ಞೆ ಬೆಳೆಯುತ್ತಿರುವುದು ಅಪಾಯಕಾರಿ ಎಂದರು. ರಾಷ್ಟ್ರ ಭಕ್ತಿ ಸಾಬೀತು ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ದೇಶಭಕ್ತಿ ರಾಜಕೀಯ ಬಂಡವಾಳ ಆಗಿದೆ. ಇದರಿಂದ ಹೊರಬಂದು ಜನಜೀವನ ಮುಖ್ಯ ಆಗಬೇಕಿದೆ. ಬಸವಣ್ಣನ ದೃಷ್ಟಿಯಲ್ಲಿ ನಾವು ಬದುಕು ಕಟ್ಟಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು. ಲೇಖಕ ಎ.ಬಿ. ರಾಮಚಂದ್ರಪ್ಪ ಮಾತನಾಡಿ, ದೇಶಪ್ರೇಮದ ವ್ಯಾಖ್ಯಾನ ಬದಲಾಯಿಸಲಾಗಿದೆ. ಸಂಸ್ಕೃತಿ, ಸಮುದಾಯ, ಹೋರಾಟದ ಪರಿಕಲ್ಪನೆ, ಸ್ವರೂಪ ಕೂಡ ಬದಲಾಗಿದೆ ಎಂದು ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಬಿ. ವಾಮದೇವಪ್ಪ, ಪತ್ರಕರ್ತ ಬಿ.ಎನ್. ಮಲ್ಲೇಶ್, ಪ್ರೊ.ಎಚ್.ಎ. ಭಿಕ್ಷಾವರ್ತಿಮಠ, ಪ್ರೊ.ಸಿ.ವಿ. ಪಾಟೀಲ್, ಎಚ್. ನಿಜಗುಣ, ಮಹೇಶ ಬಳ್ಳಾರಿ, ಮಂಜುನಾಥಯ್ಯ, ಮಂಜಣ್ಣ, ಹೆಗ್ಗೆರೆ ರಂಗಪ್ಪ, ಅಂಜಿನಪ್ಪ ಲೋಕಿಕೆರೆ, ಆವರಗೆರೆ ಚಂದ್ರು ಇದ್ದರು.