

ದಾವಣಗೆರೆ : ರಾಜಕಾರಣದ ದಿಕ್ಕು ಬದಲಾಗಿರುವ ಈ ಹೊತ್ತಿನಲ್ಲಿ ಹಿರಿಯರು ಹಾಕಿಕೊಟ್ಟ ಆದರ್ಶವನ್ನೂ ಮರೆಯದೆ, ಈಗಿರುವ ವ್ಯವಸ್ಥೆಯಲ್ಲಿ ಈಜಬೇಕಾದ ಸವಾಲು ನಮ್ಮ ಮುಂದಿದೆ ಎಂದು ವಿಧಾನಸಭೆಯ ಅಧ್ಯಕ್ಷ ಯು.ಟಿ. ಖಾದರ್ ಹೇಳಿದರು. ಜಗಳೂರಿನ ಜೆ.ಎಂ. ಇಮಾಂ ಟ್ರಸ್ಟ್, ಜೆ.ಎಂ. ಇಮಾಂ ಸ್ಮಾರಕ ಶಾಲೆ ವತಿಯಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಆಯೋಜಿಸಿದ್ದ ಸಮಾರಂಭದಲ್ಲಿ, ‘ಮಾನವತೆಯ ಬೆಳಕು ಜಗಳೂರು ಮಹಮದ್ ಇಮಾಂ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ಸೈದ್ಧಾಂತಿಕ ರಾಜಕಾರಣದ ಬಗ್ಗೆ ಪ್ರಸ್ತಾಪಿಸಿ, ಅಂದಿನ ರಾಜಕಾರಣವೇ ಬೇರೆ, ಇಂದಿನ ರಾಜಕಾರಣವೇ ಬೇರೆ. ಬದಲಾದ ಕಾಲಘಟ್ಟದಲ್ಲಿ ಸಮತೋಲನ ಕಾಯ್ದುಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು. ಈ ಹಿಂದೆ ರಾಜಕಾರಣಿಗಳು ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ವ್ಯಾಪಾರಿಗಳು ವ್ಯಾಪಾರ ಮಾಡುತ್ತಿದ್ದರು. ಅಗತ್ಯವಿದ್ದಾಗ ರಾಜಕಾರಣಿಗಳು ಉದ್ಯಮಿಗಳಿಗೆ ಸಹಕಾರ ಮಾಡುತ್ತಿದ್ದರು. ಚುನಾವಣೆ ಬಂದಾಗ ವ್ಯಾಪಾರಸ್ಥರು ರಾಜಕಾರಣಿಗಳಿಗೆ ನೆರವು ನೀಡುತ್ತಿದ್ದರು. ಕ್ರಮೇಣ ರಾಜಕಾರಣಿಗಳು ಉದ್ಯಮಕ್ಕೆ ಕಾಲಿಟ್ಟರು, ಉದ್ಯಮಿಗಳು ರಾಜಕೀಯ ಪ್ರವೇಶಿಸಿದರು. ಈಗ ಇಷ್ಟಾದರೂ ಇದೆ, ಇನ್ನೂ 10 ವರ್ಷಗಳ ನಂತರ ಪರಿಸ್ಥಿತಿ ಏನಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು. ನಾವು ಬುದ್ಧನ ಬಗ್ಗೆ ತಿಳಿದಿದ್ದೇವೆ, ಆದರೆ ಬುದ್ಧನಂತಾಗಲು ಮನಸ್ಸಿಲ್ಲ. ಜೆ.ಎಂ. ಇಮಾಂ ಅವರ ಬಗ್ಗೆ ಓದಿದ್ದೇವೆ, ಆದರೆ ಅವರಂತಾಗಲು ಪ್ರಯತ್ನಿಸುವುದಿಲ್ಲ. ಕನಿಷ್ಠ ಪಕ್ಷ ಅವರ ಆದರ್ಶಗಳನ್ನು ಶೇ. 25 ರಷ್ಟಾದರೂ ಪಾಲಿಸಿದರೆ ಸಾರ್ಥಕ ಎಂದು ಅಭಿಪ್ರಾಯಪಟ್ಟರು. ಇಮಾಂ ಅವರ ಜೀವನ, ಸಾಧನೆಯನ್ನು ಗಮನಿಸಿದಾಗ ಅವರ ವ್ಯಕ್ತಿತ್ವವನ್ನು ಜನರಿಗೆ ಪರಿಚಯಿಸಲು ನಾವು ವಿಫಲರಾಗಿದ್ದೇವೆ. ಅವರು ದಿವಾನರಾಗಿ, ಸಂಸದರಾಗಿ, ವಿಪಕ್ಷ ನಾಯಕರಾಗಿ ಮಾಡಿದ ಕೆಲಸಗಳು ಅಪಾರ ಎಂದು ಬಣ್ಣಿಸಿದರು. ಎಲ್ಲ ಧರ್ಮಗಳೂ ಮಾನವೀಯತೆ ಮತ್ತು ಪ್ರೀತಿಯ ಸಂದೇಶ ನೀಡುತ್ತವೆ. ಇಮಾಂ ಅವರ ಬದುಕು ಈ ನೆಲೆಗಟ್ಟಿನ ಮೇಲೆಯೇ ಸಾಗಿತು. ಸ್ವಾರ್ಥ ರಹಿತವಾಗಿ ಅವರು ಮಾಡಿದ ಸಮಾಜಮುಖಿ ಕಾರ್ಯಗಳು ಇಂದಿಗೂ ಜನಮಾನಸದಲ್ಲಿ ಉಳಿದಿವೆ. ನಿರಂತರವಾಗಿ ಗೆಲ್ಲುತ್ತ ಬಂದಿದ್ದರೆ ಅವರಿಗೆ ಮುಖ್ಯಮಂತ್ರಿ ಆಗುವ ಅವಕಾಶವಿತ್ತು ಎಂದರು. ಉತ್ತಮ ರಾಜಕಾರಣಿಗಳಿದ್ದರೆ ಎಲ್ಲ ಕ್ಷೇತ್ರಗಳೂ ಉದ್ಧಾರವಾಗುತ್ತವೆ. ಜನರು ಇದನ್ನು ಅರ್ಥ ಮಾಡಿಕೊಂಡು ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕು ಎಂದು ಹೇಳಿದರು. ಜೆ.ಎಂ. ಇಮಾಂ ಟ್ರಸ್ಟ್ನ ಗೌರವ ಅಧ್ಯಕ್ಷ ಹಾಜಿ ಜೆ.ಕೆ. ಹುಸೇನ್ ಮಿಯ್ಯ ಸಾಬ್, ಜಗಳೂರು ಶಾಸಕ ಬಿ. ದೇವೇಂದ್ರಪ್ಪ, ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಮಾಜಿ ಮೇಯರ್ ಕೆ. ಚಮನ್ ಸಾಬ್, ನಿವೃತ್ತ ಪ್ರಾಧ್ಯಾಪಕಿ ಚಮನ್ ಫರ್ಜಾನ, ಗುರು, ಜಲೀಲ್ ಸಾಬ್, ಎಚ್.ಇ. ದಾದಾ ಖಲಂದರ್, ಕೃತಿಯ ಪ್ರಧಾನ ಸಂಪಾದಕ ಎನ್.ಟಿ. ಎರ‌್ರಿಸ್ವಾಮಿ ಇದ್ದರು. ನಿವೃತ್ತ ಪ್ರಾಚಾರ್ಯ ಡಾ. ದಾದಾಪೀರ್ ನವಿಲೇಹಾಳ್ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ಪದ್ಮಶ್ರೀ ಪ್ರಾರ್ಥಿಸಿದರು. ಎಂ. ಶಿಲ್ಪಾ ಸ್ವಾಗತಿಸಿದರು. ಎಸ್.ಎಂ. ವಿಜಯಲಕ್ಷ್ಮೀ ವಂದಿಸಿದರು. ಎಸ್.ಐ. ಸೀಮಾ ತಬಸ್ಸುಮ್ ನಿರೂಪಣೆ ಮಾಡಿದರು. ... (ಬಾಕ್ಸ್) ವಿಶ್ವ ಕನ್ನಡ ಸಮ್ಮೇಳನ ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸುವ ಕುರಿತು ಸರ್ಕಾರದ ಗಮನ ಸೆಳೆಯುವಂತೆ ಜಿಲ್ಲಾ ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ ಮಾಡಿದ ಮನವಿಗೆ ಸ್ಪಂದಿಸಿದ ಯು.ಟಿ. ಖಾದರ್, ಈ ಕುರಿತು ಸಿಎಂ ಹಾಗೂ ಸಂಬಂಧಿಸಿದ ಸಚಿವರಿಗೆ ಒತ್ತಾಯ ತರುವುದಾಗಿ ಭರವಸೆ ನೀಡಿದರು. ವಿಧಾನಸೌಧದಲ್ಲಿ 22 ರಿಂದ ನಡೆಯುವ ಪುಸ್ತಕ ಮೇಳದಲ್ಲಿ ಇಮಾಂ ಅವರ ಪುಸ್ತಕವನ್ನು ಇಡುವ ವ್ಯವಸ್ಥೆ ಮಾಡಲಾಗುವುದು ಎಂದರು. ... (ಬಾಕ್ಸ್) ಅನನ್ಯ ಕನ್ನಡಾಭಿಮಾನ ಜೆ.ಎಂ. ಇಮಾಂ ಅವರಿಗೆ ಕನ್ನಡ ನಾಡು, ನುಡಿಯ ಬಗ್ಗೆ ಅನನ್ಯವಾದ ಅಭಿಮಾನವಿತ್ತು ಎಂದು, ಕೃತಿಯ ಕುರಿತು ಮಾತನಾಡಿದ ನಿವೃತ್ತ ಪ್ರಾಧ್ಯಾಪಕ ಡಾ. ರಾಜೇಂದ್ರ ಚೆನ್ನಿ ಹೇಳಿದರು. ಕರ್ನಾಟಕ ಏಕೀಕರಣದಲ್ಲಿ ಅವರ ಪಾತ್ರ ದೊಡ್ಡದಿದೆ. ವಿಪಕ್ಷ ನಾಯಕರಿದ್ದಾಗಲೂ ಕನ್ನಡದ ಪರವಾಗಿ ನಿಂತರು. ನೂರಾರು ಕೆರೆ, ತೋಡು ಬಾವಿಗಳನ್ನು ನಿರ್ಮಿಸಿದರು. ಜಗಳೂರು ಕ್ಷೇತ್ರದ ಅಭಿವೃದ್ಧಿಗೆ 5 ವರ್ಷಗಳ ಯೋಜನೆ ರೂಪಿಸಿ ಕಾರ್ಯರೂಪಕ್ಕೆ ತಂದರು. ಶಿಕ್ಷಣ ಕಾಯ್ದೆಯ ಮೂಲಕ ಸುಧಾರಣೆ ತಂದರು. ಪ್ರಾಮಾಣಿಕತೆ, ನೈತಿಕತೆಯ ರಾಜಕಾರಣ ಮಾಡಿದರು. ಅವರ ರಾಜಕೀಯ ಚಿಂತನೆಯ ಅಧ್ಯಯನ ಮಾಡುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ... (ಕೋಟ್) ಜೆ.ಎಂ. ಇಮಾಂ ಅವರ ಸಾಧನೆ ಅಪಾರ. ಜನಪ್ರತಿನಿಧಿಯಾಗಿ ಅವರು ಮಾಡಿದ ಕಾಯಕ ಅನುಕರಣೀಯ. ಅವರ ವ್ಯಕ್ತಿತ್ವ ಹಾಗೂ ಸಮಾಜಮುಖಿ ಕಾರ್ಯಗಳು ಮಾದರಿಯಾಗಿವೆ. ಅವರು ಶಿವಶರಣರಂತೆ ಆದರ್ಶದ ಜೀವನ ಸಾಗಿಸಿದರು. ಯಾವುದೇ ಜಾತಿ, ಪಂಗಡಕ್ಕೆ ಸೀಮಿತವಾಗದೇ ಜನಾನುರಾಗಿಯಾಗಿದ್ದರು. ಡಾ. ಪ್ರಭಾ ಮಲ್ಲಿಕಾರ್ಜುನ್, ಸಂಸದೆ