ದೇಶ ತಿರುಗುವ ಮುಂಚೆ ಕೋಶ ಓದಿ

dvg-sapna-book-house.jpg
Published on

ದಾವಣಗೆರೆ :  ಜ್ಞಾನ ಸಂಪಾದಿಸಲು ದೇಶ ತಿರುಗುವ ಮುಂಚೆ ಕೋಶ ಓದಬೇಕು ಎಂದು ಸಿರಿಗೆರೆ ತರಳಬಾಳು ಮಠದ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.  ನಗರದ ಎವಿಕೆ ಕಾಲೇಜು ರಸ್ತೆಯಲ್ಲಿ (ಆರ್.ಎಲ್. ಲಾ ಕಾಲೇಜು ಎದುರು) ಶುಕ್ರವಾರ ನಡೆದ ಸಪ್ನ ಬುಕ್ ಹೌಸ್‌ನ 23ನೇ ಶಾಖೆಯ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.  ಕೋಶ ಓದಬೇಕು ಅಥವಾ ದೇಶ ಸುತ್ತಬೇಕು ಎಂಬ ಮಾತಿದೆ. ದೇಶ ತಿರುಗಿದ ಮಾತ್ರಕ್ಕೆ ಸಂಪೂರ್ಣ ಜ್ಞಾನ ಉಂಟಾಗುವುದಿಲ್ಲ. ಆದ್ದರಿಂದ ಅಧ್ಯಯನವೂ ಅಷ್ಟೇ ಮುಖ್ಯ ಎಂದು ನುಡಿದರು.  ಶಾಲಾ ಶಿಕ್ಷಕರು ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವ ಮೊದಲು ಆ ಸ್ಥಳದ ವಿಶೇಷತೆಯ ಕುರಿತು ಮಾಹಿತಿ ನೀಡಬೇಕು ಎಂದು ತಿಳಿಸಿದರು.  ಸಪ್ನ ಬುಕ್ ಹೌಸ್ ‘ಭಾರತೀಯ ಪುಸ್ತಕ ಭಂಡಾರದ ಚಕ್ರವರ್ತಿ’ ಎಂದು ಬಣ್ಣಿಸಿದ ಸ್ವಾಮೀಜಿ, ಸಪ್ನ ಬುಕ್ ಹೌಸ್ ಒಳಗೆ ಹೋದರೆ ಮಾನಸಿಕ ಇನ್ನಿತರ ಸಮಸ್ಯೆಗಳಿಗೆ ಉತ್ತರ ನೀಡುವ ಪುಸ್ತಕಗಳು ದೊರೆಯುತ್ತವೆ. ಹಿರಿಯ ಜೀವಗಳ ಜೀವನಾನುಭವ ಸಿಗುತ್ತದೆ ಎಂದು ತಿಳಿಸಿದರು.  ವಿದ್ವಾಂಸ, ನಾಡೋಜ ಪ್ರೊ. ಹಂಪ ನಾಗರಾಜಯ್ಯ ಅವರೊಂದಿಗಿನ ತಮ್ಮ ಒಡನಾಟವನ್ನು ಮೆಲುಕು ಹಾಕಿದ ಸ್ವಾಮೀಜಿ, ಹಂಪನಾ ಅವರಿಗೆ ‘ನೀವು ಏಕಾಂಗಿಯಲ್ಲ, ಸಾಹಿತ್ಯ ಸೇವೆಯನ್ನು ಮುಂದುವರಿಸಿ’ ಎಂದು ಸಾಂತ್ವನ ಹೇಳಿದರು.  ಸಂಸ್ಥೆಯ ಮಾಲೀಕ ನಿಜೇಶ್ ಷಾ ಮಾತನಾಡಿ, ಸಪ್ನ ಬುಕ್ ಹೌಸ್ ಜನ ಮತ್ತು ಸಂಸ್ಕೃತಿಯ ಪ್ರತಿಬಿಂಬ, ಜ್ಞಾನದ ಜಗತ್ತು ಎಂದರು. ಎಸ್ಪಿ ಉಮಾ ಪ್ರಶಾಂತ್, ದಾವಣಗೆರೆ ವಿವಿ ಕುಲಪತಿ ಪ್ರೊ. ಬಿ.ಡಿ. ಕುಂಬಾರ್, ಜಿಲ್ಲಾ ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿದರು. ಕೆಪಿಎಸ್‌ಸಿ ನಿಕಟಪೂರ್ವ ಅಧ್ಯಕ್ಷ ಡಾ.ಎಚ್.ಎನ್. ಕೃಷ್ಣ, ಸಪ್ನ ಬುಕ್ ಹೌಸ್ ವ್ಯವಸ್ಥಾಪಕ ದೊಡ್ಡೇಗೌಡರು ಇದ್ದರು. ವತ್ಸಲಾ ಮೋಹನ್ ನಿರೂಪಿಸಿದರು.  ...    (ಬಾಕ್ಸ್)  ದಾವಣಗೆರೆ ನಂಟು ಮೆಲುಕು  ವಿದ್ವಾಂಸ, ನಾಡೋಜ ಪ್ರೊ. ಹಂಪ ನಾಗರಾಜಯ್ಯ ದಾವಣಗೆರೆಯೊಂದಿಗೆ ತಮ್ಮ ನಂಟಿನ ಮೆಲುಕು ಹಾಕಿದರು. 1961 ರಲ್ಲಿ ಇಲ್ಲಿನ ಡಿ.ಆರ್.ಎಂ. ಕಾಲೇಜಿನ ಕನ್ನಡ ಉಪನ್ಯಾಸಕರಾಗಿ ಕೆಲಸ ಮಾಡಿದ ಅನುಭವ ನೆನಪು ಮಾಡಿಕೊಂಡರು.  ಕೂಲಂಬಿ-ಕುಂದೂರು ಬಳಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಪತ್ನಿಯೊಂದಿಗೆ ತೆರಳಿದ್ದ ಸಂದರ್ಭವೊಂದನ್ನು ಪ್ರಸ್ತಾಪಿಸಿ, ಅಂದು ರಾತ್ರಿ ಅಲ್ಲಿಯೇ ತಂಗಿದ್ದನ್ನು ‘ಹನಿಮೂನ್’ ಎಂದು ಹೇಳಿ ಹಾಸ್ಯಚಟಾಕಿ ಹಾರಿಸಿದರು.  ಸಪ್ನ ಬುಕ್ ಹೌಸ್‌ನ ಸಂಸ್ಥಾಪಕ ಸುರೇಶ್ ಷಾ ಅವರನ್ನು ‘ಗ್ರಂಥ ಪುರುಷ’ ಎಂದು ಕರೆದರು. ನಾಡಿನಲ್ಲಿ ಓದುವ ಪ್ರೀತಿ ಬೆಳೆಸಿದರು. ಮುದ್ರಕ, ಪ್ರಕಾಶಕರಿಗೆ ಪ್ರೋತ್ಸಾಹ ನೀಡಿದರು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net