

ಹರಿಹರ : ಇತ್ತೀಚಿನ ದಿನಗಳಲ್ಲಿ ಯುವ ಬರಹಗಾರರ ಸಾಹಿತ್ಯ ಕೃಷಿ ಕಡಿಮೆಯಾಗಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ಡಾ.ಕೆ.ಎಂ. ವೀರೇಶ್ ಕಳವಳ ವ್ಯಕ್ತಪಡಿಸಿದರು. ಕಸಾಪ, ಪರಸ್ಪರ ಬಳಗ, ಕರ್ನಾಟಕ ಜಾನಪದ ಪರಿಷತ್ತು ಮತ್ತು ಸ್ಥಳೀಯ ಸಾಹಿತ್ಯ ಸಂಗಮ ಸಂಸ್ಥೆಗಳ ಸಹಯೋಗದಲ್ಲಿ ನಗರದ ಶ್ರೀಶೈಲ ಬಿ.ಇಡಿ. ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ನಿವೃತ್ತ ಪ್ರಾಚಾರ್ಯ, ಸಾಹಿತಿ ಪ್ರೊ.ಎಚ್.ಎ. ಭಿಕ್ಷಾವರ್ತಿಮಠ ಅವರ ‘ಆಧುನಿಕ ವಚನ ಸ್ಪಂದನ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು. ಪುಸ್ತಕ ಓದುವ ಅಭಿರುಚಿ ಹೆಚ್ಚಾದಷ್ಟು ಬರಹಗಾರರಿಗೆ ಇನ್ನಷ್ಟು ಕೃತಿಗಳನ್ನು ಪ್ರಕಟಿಸುವ ಹಂಬಲ ಮೂಡುತ್ತದೆ. ಆದ್ದರಿಂದ ಇಂದಿನ ಪೀಳಿಗೆ ಸಾಹಿತ್ಯದ ಅಧ್ಯಯನದ ಕಡೆ ಒಲವು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಸಮುದಾಯದ ನಡುವೆ ಬದುಕಿದ್ದ ವಚನಕಾರರು ತಾವು ಕಂಡ ಅಸತ್ಯ, ಢಾಂಬಿಕತೆ, ಮೌಢ್ಯಗಳನ್ನು ನೇರವಾಗಿ ಖಂಡಿಸಿದರು. ಬಸವಣ್ಣ ಆದಿಯಾಗಿ ಎಲ್ಲ ಪುರುಷ, ಮಹಿಳಾ ವಚನಾಕಾರರು ಕಲ್ಲು ದೇವರು ದೇವರಲ್ಲ, ಹುಸಿಯನು ನುಡಿಯಲು ಬೇಡ, ನುಡಿದರೆ ಮುತ್ತಿನ ಹಾರದಂತಿಬೇಕೆಂಬ ಸಂದೇಶಗಳನ್ನು ನೀಡಿ ಜನರಲ್ಲಿ ದೊಡ್ಡ ಜಾಗೃತಿ ಮೂಡಿಸಿದರು ಎಂದರು. ಆಧುನಿಕ ಕಾಲದಲ್ಲೂ ವಚನಗಳನ್ನು ಓದಿ ಅರ್ಥ ಮಾಡಿಕೊಂಡು, ಅದರಂತೆ ಬದುಕು ನಡೆಸಬೇಕೆಂದರೆ ಗಟ್ಟಿತನಬೇಕು. ಪ್ರೊ. ಭಿಕ್ಷಾವರ್ತಿಮಠ ಅವರು ಬಸವಣ್ಣನಿಂದ ಪ್ರೇರಿತರಾಗಿ ತಮ್ಮದೇ ಶೈಲಿಯಲ್ಲಿ ವಚನಗಳನ್ನು ರಚಿಸಿ ನಿಷ್ಠುರತೆ ಮೆರೆದಿದ್ದಾರೆ ಎಂದು ಪ್ರಸಂಶಿಸಿದರು. ವಿಮರ್ಶಕ ಪ್ರೊ. ಲಿಂಗರಾಜ್ ಕಮ್ಮಾರ್ ಕೃತಿ ಕುರಿತು ಮಾತನಾಡಿ, ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭುರವರ ವಚನಗಳಿಂದ ಲೇಖಕರು ಹೆಚ್ಚು ಪ್ರಭಾವಿತರಾಗಿದ್ದಾರೆ. ಏಕ ಸಂಸ್ಕೃತಿ, ಏಕ ದೇವಾರಾಧನೆ, ಏಕ ಭಾಷೆ ಹೇರಿಕೆ ನಿರಂಕುಶ ಪ್ರಭುತ್ವಕ್ಕೆ ದಾರಿಯಾಗುತ್ತದೆ. ಈ ದೇಶದ ನಾಡಿ ಮಿಡಿತವಾದ ಬಹುತ್ವವನ್ನು ಕೃತಿಕಾರರು ಬೆಂಬಲಿಸಿದ್ದಾರೆ ಎಂದರು. ಪತ್ರಕರ್ತ ಆರ್.ಜಿ. ಹಳ್ಳಿ ನಾಗರಾಜ್ ಮಾತನಾಡಿ, ಪುಸ್ತಕ ಓದು ವ್ಯಕ್ತಿಯ ವಿಚಾರ, ಮನಸ್ಸನ್ನು ವಿಶಾಲವಾಗಿಸುತ್ತದೆ ಎಂದರು. ಕೃತಿಕಾರ ಪ್ರೊ.ಎಚ್.ಎ. ಭಿಕ್ಷಾವರ್ತಿಮಠ ಮಾತನಾಡಿ, ದಾಸ, ಶರಣ, ತತ್ವಪದಗಳು ಈ ದೇಶಕ್ಕೆ ಬಹುತ್ವದ ತಳಹದಿ ರೂಪಿಸಿವೆ. ಬಸವಣ್ಣನಿಂದ ಪ್ರಭಾವಿತವಾದ ಮಠಗಳಲ್ಲಿ ಬೇರೆಯವರ ಭಾವಚಿತ್ರಗಳೇ ವಿಜೃಂಭಿಸುತ್ತಿವೆ. ಈ ಕುರಿತು ಸಂಬಂಧಪಟ್ಟ ಮಠಗಳ ಮುಖ್ಯಸ್ಥರಿಗೆ ನನ್ನ ತಕರಾರನ್ನು ವ್ಯಕ್ತಪಡಿಸಿದ್ದೇನೆ ಎಂದರು. ಮುಖಂಡ ಎನ್.ಜಿ. ನಾಗನಗೌಡ್ರು ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ಸಾಹಿತಿ ಪ್ರೊ.ಸಿ.ವಿ. ಪಾಟೀಲ್ ಅಧ್ಯಕ್ಷತೆವಹಿಸಿದ್ದರು. ನಿವೃತ್ತ ಪ್ರಾಚಾರ್ಯ ಡಾ.ಎಸ್.ಎಚ್. ಪ್ಯಾಟಿ, ಸಾಹಿತಿ ಜೆ. ಕಲೀಂಬಾಷಾ, ಕಾರ್ಮಿಕ ಮುಖಂಡ ಎಚ್.ಕೆ. ಕೊಟ್ರಪ್ಪ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಸ್.ಎಚ್. ಹೂಗಾರ್, ರಿಯಾಜ್ ಅಹ್ಮದ್, ಬಿ.ಬಿ. ರೇವಣನಾಯ್ಕ, ವಿ.ಬಿ. ಕೊಟ್ರೇಶಪ್ಪ, ಮೃತ್ಯುಂಜಯ ಉಪಸ್ಥಿತರಿದ್ದರು. ಕಲಾವಿದ ಕತ್ತಿಗೆ ಪರಮೇಶ್ವರಪ್ಪ ತಂಡದವರು ಸಂಗೀತ ಪ್ರಸ್ತುತಪಡಿಸಿದರು.