

ದಾವಣಗೆರೆ : ಜಿಲ್ಲೆಯಾದ್ಯಂತ ಹಲವು ಸಂಘಟನೆಗಳು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಇಲಾಖೆಯಿಂದ ಸೌಲಭ್ಯಗಳನ್ನು ಕೊಡಿಸುತ್ತೇವೆ ಎಂದು ಆಸೆ, ಆಮಿಷ ತೋರಿಸಿ ಬೋಗಸ್ ಕಾರ್ಡುಗಳನ್ನು ಹಂಚಿಕೆ ಮಾಡುತ್ತಿವೆ ಎಂದು, ಎಐಟಿಯಸಿ ನೇತೃತ್ವದ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯವ ಕ್ವಾರಿ ಕಾರ್ಮಿಕರ ಸಂಘದ ರಾಜ್ಯ ಹಾಗೂ ಜಿಲ್ಲಾ ಸಮಿತಿಗಳು ಆರೋಪಿಸಿವೆ. ನೈಜ ಕಟ್ಟಡ ಕಾರ್ಮಿಕರು ಅಲ್ಲದವರಿಗೂ ಕಟ್ಟಡ ನಿರ್ಮಾಣ ಕಾರ್ಮಿಕರ ಗುರುತಿನ ಕಾರ್ಡ್ ಮಾಡಿಕೊಡುತ್ತಿದ್ದಾರೆ. ಕಟ್ಟಡ ನಿರ್ಮಾಣ ಕಾಮಗಾರಿಗೆ ಬೇಕಾಗುವ ಸಾಮಗ್ರಿಗಳ ಮಾರಾಟ ಮಳಿಗೆಗಳಿಗೆ ತೆರಳಿ ವಂತಿಗೆ ವಸೂಲಿ ಮಾಡುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಆವರಗೆರೆ ಎಚ್.ಜಿ. ಉಮೇಶ್, ಜಿಲ್ಲಾಧ್ಯಕ್ಷ ವಿ. ಲಕ್ಷ್ಮ್ಮಣ್ ತಿಳಿಸಿದ್ದಾರೆ. ನಕಲಿ ಕಟ್ಟಡ ಕಾರ್ಮಿಕರ ಕಾರ್ಡ್‌ಗಳನ್ನು ಮಾಡಿಸುವ ಮೂಲಕ ಕಟ್ಟಡ ಕಾರ್ಮಿಕರಲ್ಲದವರಿಗೂ ಸರ್ಕಾರಿ ಸವಲತ್ತುಗಳನ್ನು ನೀಡುವ ಯತ್ನ ಮಾಡುತ್ತಿದ್ದಾರೆ. ಕಾರ್ಮಿಕರ ಗುರುತಿನ ಕಾರ್ಡ್ ಮಾಡಿ ಕೊಡುವುದರ ಜತೆಗೆ ಒಂದು ಕಾರ್ಡ್‌ಗೆ 500 ರೂ.ಗಳಿಂದ 1000 ರೂ. ವರೆಗೂ ಅಮಾಯಕ ಜನರಿಂದ ವಸೂಲಿ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಕಟ್ಟಡ ಕಾರ್ಮಿಕರಾಗಲಿ, ಜಿಲ್ಲೆಯ ನಾಗರಿಕರಾಗಲಿ ಬೋಗಸ್ ಕಾರ್ಡ್ ಮಾಡಿಕೊಡುವ ಸಂಘಟನೆಗಳಿಗೆ ಹೆಚ್ಚಿನ ಹಣ ನೀಡದೇ ನಮ್ಮ ಸಂಘಟನೆಯ ಕಚೇರಿಗೆ ದಾಖಲೆಗಳನ್ನು ನೀಡುವ ಮೂಲಕ ಕಾರ್ಮಿಕ ಇಲಾಖೆಯಿಂದ ನೀಡಲಾಗುವ ಗುರುತಿನ ಚೀಟಿಗಳನ್ನು ಪಡೆಯುವಂತೆ ಮನವಿ ಮಾಡಿದ್ದಾರೆ. ಯಾವುದೇ ಕಟ್ಟಡ ಕಾರ್ಮಿಕರ ಸಂಘಟನೆಯ ಹೆಸರು ಹೇಳಿಕೊಂಡು ದೇಣಿಗೆ ಸಂಗ್ರಹಿಸಲು ಬಂದರೆ ನಮ್ಮ ಸಂಘಟನೆಯ ಪದಾಧಿಕಾರಿಗಳಿಗೆ ತಿಳಿಸಬೇಕು. ಇಲ್ಲವೇ ನಮ್ಮ ಸಂಘದ ಕಚೇರಿಗೆ ಲಿಖಿತವಾಗಿ ತಿಳಿಸಿದರೆ, ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ.