ರಕ್ತದಾನ ಜೀವ ರಕ್ಷಣೆಗೆ ಸಹಕಾರಿ

dvg-blood.jpg
Published on

ದಾವಣಗೆರೆ : ವಿವಿಯಲ್ಲಿ ಶಿಬಿರ ಉದ್ಘಾಟನೆ  ವಿಜಯವಾಣಿ ಸುದ್ದಿಜಾಲ ದಾವಣಗೆರೆ  ರಕ್ತದಾನ ಶ್ರೇಷ್ಠವಾದುದು. ಆರೋಗ್ಯವಂತ ವಿದ್ಯಾರ್ಥಿಗಳು ವರ್ಷಕ್ಕೆ ಕನಿಷ್ಠ ಎರಡು ಬಾರಿ ರಕ್ತದಾನ ಮಾಡುವುದು ಉತ್ತಮ. ಇದರಿಂದ ರಕ್ತದ ಅನಿವಾರ್ಯತೆ ಇರುವವರ ಪ್ರಾಣ ರಕ್ಷಣೆಗೆ ಸಹಕಾರಿಯಾಗಲಿದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಡಿ. ಕುಂಬಾರ್ ಸಲಹೆ ನೀಡಿದರು.  ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬುಧವಾರ, ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಘಟಕ, ವಿದ್ಯಾನಗರ ರೋಟರಿ ಕ್ಲಬ್, ಎಚ್‌ಡಿಎಫ್‌ಸಿ ಬ್ಯಾಂಕ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಿಗಟೇರಿ ಆಸ್ಪತ್ರೆ ರಕ್ತ ಭಂಡಾರದ ಸಹಯೋಗದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.  ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ರಕ್ತವನ್ನು ಬಡವರು, ಗರ್ಭಿಣಿಯರು ಹಾಗೂ ತುರ್ತು ಅಗತ್ಯ ಇರುವವರಿಗೆ ಬಳಕೆಯಾಗಬೇಕು. ರಕ್ತದಾನದ ಕುರಿತು ವಿದ್ಯಾರ್ಥಿಗಳಲ್ಲಿ ಅಡಗಿರುವ ಭಯವನ್ನು ದೂರ ಮಾಡಿ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯ, ಜನಪರ ಕಾಳಜಿ, ಮತ್ತು ಆರೋಗ್ಯದ ಬಗ್ಗೆ ಪ್ರಾಯೋಗಿಕವಾಗಿ ತಿಳಿವಳಿಕೆ ನೀಡುವುದು ಇದರ ಆಶಯವಾಗಿದೆ ಎಂದು ಹೇಳಿದರು.  ರಕ್ತದಾನದ ಹೆಸರಿನಲ್ಲಿ ಕೆಲವು ಖಾಸಗಿ ಸಂಸ್ಥೆಗಳು ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ರಕ್ತವನ್ನು ಮಾರಾಟ ಮಾಡುತ್ತಿದ್ದ ಆರೋಪಗಳು ಕೇಳಿ ಬಂದಿದ್ದವು. ಆದ್ದರಿಂದ ಅಂತಹ ಸಂಸ್ಥೆಗಳಿಗೆ ಅವಕಾಶ ನೀಡದೇ ಆರೋಗ್ಯ ಇಲಾಖೆ, ರೋಟರಿಯಂತಹ ಸಂಸ್ಥೆಗಳ ಸಹಯೋಗದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗುತ್ತಿದೆ, ಇಲ್ಲಿ ಸಂಗ್ರಹಿಸಿದ ರಕ್ತವನ್ನು ಬಡವರು, ದುರ್ಬಲರಿಗೆ ಚಿಗಟೇರಿ ಆಸ್ಪತ್ರೆಯ ಮೂಲಕ ವಿತರಿಸುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.  ಚಿಗಟೇರಿ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಅಧಿಕಾರಿ ಡಾ. ಡಿ.ಎಚ್. ಗೀತಾ ಮಾತನಾಡಿ, ಪುರುಷರು ಮೂರು ತಿಂಗಳಿಗೊಮ್ಮೆ, ಮಹಿಳೆಯರು ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದಾಗಿದೆ. ಒಬ್ಬ ವ್ಯಕ್ತಿ ರಕ್ತದಾನ ಮಾಡುವುದರಿಂದ ಮೂವರ ಪ್ರಾಣ ರಕ್ಷಣೆ ಆಗುತ್ತದೆ ಎಂದು ಮಾಹಿತಿ ನೀಡಿದರು.  ರಕ್ತದಾನ ಮಾಡುವವರಿಗೆ ದೇಹದಲ್ಲಿ ಹಳೆಯ ರಕ್ತ ಹೋಗಿ ಹೊಸ ರಕ್ತ ಉತ್ಪತ್ತಿಯಾಗುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು, ಮಧುಮೇಹ, ರಕ್ತದೊತ್ತಡ ಹಾಗೂ ಪಾರ್ಶ್ವವಾಯುವಿನಂತಹ ಕಾಯಿಲೆಗಳಿಂದ ಮುಕ್ತರಾಗಬಹುದು ಎಂದು ವಿವರಿಸಿದರು.  ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್. ಷಣ್ಮುಖಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ.ರಾಘವನ್, ರೋಟರಿ ಕ್ಲಬ್‌ನ ಅಧ್ಯಕ್ಷ ಎಸ್.ಎನ್. ಮಳವಳ್ಳಿ ಮಾತನಾಡಿದರು. ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ.ಅಶೋಕ್ ಕುಮಾರ್ ವಿ. ಪಾಳೇದ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ.ಸಿದ್ದಪ್ಪ ಕಕ್ಕಳಮೇಲಿ ಕಾರ್ಯಕ್ರಮ ನಿರೂಪಿಸಿದರು, ಎಚ್‌ಡಿಎಫ್‌ಸಿ ಬ್ಯಾಂಕ್ ಅಧಿಕಾರಿ ಪ್ರಕಾಶ್ ಗುಡಿಯಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net