

ದಾವಣಗೆರೆ : ಮತ ಗಳಿಕೆಯ ಏಕೈಕ ಉದ್ದೇಶದಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ, ಕೋಮು ಪ್ರಚೋದನೆ ಹಾಗೂ ರಾಷ್ಟ್ರದ್ರೋಹದ ಹೇಳಿಕೆ ನೀಡಿರುವ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ವಿರುದ್ಧ ಕೂಡಲೇ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಪಾಲಿಕೆ ಮಾಜಿ ಮೇಯರ್ ಬಿ.ಜಿ. ಅಜಯ್‌ಕುಮಾರ್ ಒತ್ತಾಯಿಸಿದರು.
ಸನಾತನ ಧರ್ಮವನ್ನು ಡೆಂೆ, ಕರೊನಾ ಹಾಗೂ ಮಲೇರಿಯಾಕ್ಕೆ ಸಮಾನವಾದದ್ದು ಎಂದು ಹೇಳಿಕೆ ನೀಡಿರುವುದು ಅತ್ಯಂತ ಖಂಡನೀಯ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಸಮಾಜದಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡಬಾರದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಭಾರತದ ಪರಂಪರೆ ಮತ್ತು ಸಂಪ್ರದಾಯದ ವಿರುದ್ಧ ಇರುವ ಮೈತ್ರಿಕೂಟ ದೇಶದ ಶೇ.80ರಷ್ಟಿರುವ ಹಿಂದೂ ಸನಾತನ ಧರ್ಮದವರನ್ನು ಅವಮಾನಿಸಿದ್ದಲ್ಲದೆ, ಧರ್ಮಗಳ ನಡುವೆ ಕಿತ್ತಾಟ ಹಚ್ಚಿದ್ದಾರೆ. ಕೋಮು ಪ್ರಚೋದನೆ, ತುಷ್ಟೀಕರಣ ರಾಜಕಾರಣಕ್ಕಾಗಿ ಉದಯನಿಧಿ ಸನಾತನ ಧರ್ಮ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದರು.
ಸನಾತನ ಎಂದರೆ ಶಾಶ್ವತ ಹಾಗೂ ಸದಾಕಾಲ ಇರುವಂತದ್ದು, ಸಮಾಜದಲ್ಲಿ ಸಂತೋಷದಿಂದ ಬಾಳಬೇಕಾದರೆ ಧರ್ಮ ಅತ್ಯಗತ್ಯ. ಎಲ್ಲರಿಗೂ ಸುಖ ಬಯಸುವುದು ಸನಾತನ ಧರ್ಮದ ವಿಶೇಷತೆ. ರಾಜಕೀಯ ಮೇಲಾಟಕ್ಕಾಗಿ ಇದನ್ನು ಅವಮಾನಗೊಳಿಸಿದ್ದು ಸಮಸ್ತರ ಭಾವನೆಗಳಿಗೆ ಧಕ್ಕೆ ತಂದಿದೆ. ದ್ವೇಷಭಾಷಣ ಮಾಡಿರುವ ಉದಯನಿಧಿ ಸ್ಟಾಲಿನ್ ಅವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ರಾಜು ನೀಲಗುಂದ, ಕೊಟ್ರೇಶ್‌ಗೌಡ್ರು, ರಾಕೇಶ್ ಭಜರಂಗಿ, ಗುರುಪ್ರಸಾದ್, ರವಿಕಿರಣ್, ಪ್ರದೀಪ್, ಚನ್ನಬಸವನಗೌಡ್ರು ಸುದ್ದಿಗೋಷ್ಠಿಯಲ್ಲಿದ್ದರು.
ನಂತರ ಅಜಯ್ ಕುಮಾರ್ ಹಾಗೂ ಬಿಜೆಪಿ ಮುಖಂಡರು ಎಸ್ಪಿ ಉಮಾ ಪ್ರಶಾಂತ್ ಅವರಿಗೆ ಮನವಿ ಸಲ್ಲಿಸಿದರು.