ಬೆಳೆ ಹಾನಿಗೆ ಸರ್ಕಾರ ನೀಡಲಿ ಪರಿಹಾರ

60351443_591717507978642_7269643.jpg
Published on

ದಾವಣಗೆರೆ  : ರಾಜ್ಯ ಸರ್ಕಾರ ಅತಿವೃಷ್ಟಿಯಿಂದ ಹಾನಿಯಾದ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗೆ 50 ಸಾವಿರ, ಅಕಾಲಿಕ ಮಳೆಯಿಂದ ನಾಶವಾದ ಈರುಳ್ಳಿ ಬೆಳೆಗೆ 40 ಸಾವಿರ ರೂ. ಪರಿಹಾರವನ್ನು ಘೋಷಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಆಗ್ರಹಿಸಿದರು.  ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಯಾರೇ ಆಗಲಿ, ರೈತರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.  ಭೀಮಾ ನದಿ ಪ್ರವಾಹದಿಂದ 30 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಎನ್‌ಡಿಆರ್‌ಎಫ್ ಹಣ ಬಿಡುಗಡೆಯಾಗಿದ್ದರೂ ರಾಜ್ಯ ಸರ್ಕಾರ ರೈತರ ಖಾತೆಗಳಿಗೆ ಹಣ ಬಿಡುಗಡೆ ಮಾಡಿಲ್ಲ. ನೆರೆಯ ಮಹಾರಾಷ್ಟ್ರದಲ್ಲಿ ಅಲ್ಲಿನ ಸರ್ಕಾರ ರೈತರಿಗೆ 31 ಸಾವಿರ ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಿದೆ ಎಂದು ತಿಳಿಸಿದರು.  ರಾಜ್ಯದ ವಿಜಯಪುರ, ಗದಗ, ಕೊಪ್ಪಳ, ದಾವಣಗೆರೆ, ಚಿತ್ರದುರ್ಗ ಹಾಗೂ ಬಳ್ಳಾರಿಯ ಕೆಲವು ಭಾಗಗಳಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ಆ ಬೆಳೆಗಾರರೂ ಈಗ ಸಂಕಷ್ಟದಲ್ಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಬದಲು ರಾಜ್ಯದ ಖಜಾನೆಯಿಂದ ಪರಿಹಾರ ಹಣ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.  ರಾಜ್ಯದಲ್ಲಿ ಸಚಿವರು ಪ್ರವಾಸ ಮಾಡುತ್ತಿಲ್ಲ. ಜಿಲ್ಲಾಮಟ್ಟದಲ್ಲಿ ರೈತರ ಸಮಸ್ಯೆಗಳ ಬಗ್ಗೆ ಸಭೆಗಳನ್ನು ನಡೆಸುತ್ತಿಲ್ಲ. ಕಾನೂನು, ಸುವ್ಯವಸ್ಥೆ ಕುಸಿದಿದೆ. ಭ್ರೂಣ ಹತ್ಯೆಗಳಾಗುತ್ತಿವೆ. ಈ ವಿಷಯಗಳ ಕಡೆಗೆ ಸರ್ಕಾೃ ಗಮನ ಹರಿಸಬೇಕು ಎಂದು ಹೇಳಿದರು.  ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಿದೆ. ರಾಜ್ಯದಲ್ಲಿ ಈ ಸರ್ಕಾರದ ಅವಧಿಯಲ್ಲಿ 2003 ರೈತರು, 15ಕ್ಕೂ ಹೆಚ್ಚು ಗುತ್ತಿಗೆದಾರರು, 7 ಮಂದಿ ಸರ್ಕಾರಿ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 1300 ಅತ್ಯಾಚಾರ, ದೌರ್ಜನ್ಯ ಪ್ರಕರಣಗಳಾಗಿವೆ ಎಂದು ವಿವರಿಸಿದರು.  ನವೆಂಬರ್ ಕ್ರಾಂತಿ, ಡಿಸೆಂಬರ್ ಕ್ರಾಂತಿ ನಮಗೆ ಮುಖ್ಯವಲ್ಲ, ರೈತರಿಗೆ, ಪರಿಶಿಷ್ಟರಿಗೆ, ಬಡವರಿಗೆ ಏನು ಕೆಲಸ ಮಾಡಿಕೊಟ್ಟಿದ್ದೀರಿ ಎಂದು ಪ್ರಶ್ನಿಸಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿ, ಬಿಜೆಪಿಯಲ್ಲಿ ಸಮರ್ಥ ನಾಯಕತ್ವ ಇದೆ. ಯಾವ ಗೊಂದಲಗಳೂ ಇಲ್ಲ ಎಂದು ತಿಳಿಸಿದರು.  ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್. ರಾಜಶೇಖರ್, ಬಿಜೆಪಿ ಮುಖಂಡರಾದ ಬಿ.ಎಂ. ಸತೀಶ್, ಬಿ.ಜಿ. ಅಜಯ ಕುಮಾರ್, ಆರ್.ಎಲ್. ಶಿವಪ್ರಕಾಶ್, ಅನಿಲ್ ಕುಮಾರ್, ಧನಂಜಯ ಕಡ್ಲೇಬಾಳ್, ತಾರೇಶ ನಾಯ್ಕ, ಮಾರುತಿ ನಾಯ್ಕ ಸುದ್ದಿಗೋಷ್ಠಿಯಲ್ಲಿದ್ದರು.    

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net