ಆರ್‌ಎಸ್‌ಎಸ್‌ಗೆ ಅಂಕುಶ, ರೇಣುಕಾಚಾರ್ಯ ಆಕ್ಷೇಪ

RENUKACHARYA-MP-mla-3.jpg
Published on

ದಾವಣಗೆರೆ :  ಮನೆಗಳಿಗೆ ಬೆಂಕಿ ಇಟ್ಟವರು, ವಿಧಾನ ಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದವರು, ಕಲ್ಲು ತೂರಾಟ ನಡೆಸಿದವರ ಬಗ್ಗೆ ರಾಜ್ಯ ಸರ್ಕಾರ ಮೃದು ಧೋರಣೆ ತಾಳಿದೆ. ಆದರೆ ಆರ್‌ಎಸ್‌ಎಸ್‌ಗೆ ಅಂಕುಶ ಹಾಕಲು ಹೊರಟಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.  ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಧಿಕಾರದ ಮದ ನೆತ್ತಿಗೇರಿದ್ದರಿಂದ ಈ ರೀತಿ ಮಾಡುತ್ತಿದ್ದಾರೆ. ಆರ್‌ಎಸ್‌ಎಸ್ ನಿಷೇಧಿಸಲು ನಿಮಗೆ ತಾಕತ್ ಇದೆಯೆ ಎಂದು ಪ್ರಶ್ನಿಸಿದರು.  ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ನಿಷೇಧ ಮಾಡಿ ಒಂದೇ ವರ್ಷದಲ್ಲಿ ವಾಪಸ್ ಪಡೆದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾ ಗಾಂಧಿ ಅವರೂ ಅದೇ ಕ್ರಮ ಕೈಗೊಂಡು ವಾಪಸ್ ಪಡೆದರು. ಬಾಬರಿ ಮಸೀದಿ ಧ್ವಂಸ ಮಾಡಿದಾಗಲೂ ಆರ್‌ಎಸ್‌ಎಸ್ ಬ್ಯಾನ್ ಾಡಿ ಮತ್ತೆ ವಾಪಸು ಪಡೆದರು. ಆರ್‌ಎಸ್‌ಎಸ್ ಕುರ್ಚಿಗಾಗಿ ಎಂದೂ ಆಸೆಪಟ್ಟಿಲ್ಲ, ದೇಶದ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.  ಸಚಿವ ಪ್ರಿಯಾಂಕ ಖರ್ಗೆ ಅವರು ಸೂಪರ್ ಸಿಎಂ ರೀತಿ ವರ್ತಿಸುತ್ತಿದ್ದಾರೆ. ಗೋಮಾತೆಯನ್ನು ಕೊಲ್ಲುವವರು ನಿಮಗೆ ದೇಶಪ್ರೇಮಿಗಳಂತೆ ಕಾಣುತ್ತಾರೆ. ಮಚ್ಚು, ಲಾಂಗ್ ಹಿಡಿದು ಓಡಾಡುವವರನ್ನು ಸುಮ್ಮನೆ ಬಿಟ್ಟು ಈಗ ದಂಡ ಹಿಡಿದು ಓಡಾಡಿದವರ ಮೇಲೆ ಕಡಿವಾಣ ಹಾಕುತ್ತಿದ್ದೀರಿ. ಮೊದಲು ರಸ್ತೆ ಗುಂಡಿಗಳನ್ನು ಮುಚ್ಚಿ ಅಭಿವೃದ್ಧಿ ಮಾಡಲಿ ಎಂದು ಟಾಂಗ್ ಕೊಟ್ಟರು.  ತಮಗೆ ಬೆದರಿಕೆ ಇದೆ ಎಂದು ಸಚಿವ ಪ್ರಿಯಾಂಕ ಖರ್ಗೆ ಸುಮ್ಮನೆ ಹೇಳುತ್ತಾರೆ. ನನಗೂ ಬೆಳಗಾವಿ ಕಡೆಯಿಂದ ಯಾರೋ ಒಬ್ಬ ವ್ಯಕ್ತಿ ಕರೆ ಮಾಡಿ ಬೆದರಿಕೆ ಹಾಕಿದ್ದ. ಪ್ರಿಯಾಂಕ ಖರ್ಗೆ ಬಗ್ಗೆ ಮಾತನಾಡಿದರೆ ಸರಿ ಇರುವುದಿಲ್ಲ ಎಂದು ಹೇಳಿದ. ನಾನು ಆತನಿಗೆ ಸರಿಯಾಗಿ ಆವಾಜ್ ಹಾಕಿದೆ ಎಂದರು.  ಗಣೇಶ ಹಬ್ಬದಲ್ಲಿ ಭಾಷಣ ಮಾಡಿದರೆ ನಾಯಕರಾಗುವುದಿಲ್ಲ. ಸ್ವಯಂ ಘೋಷಿತ ನಾಯಕರಾಗಬಾರದು, ಜನ ಮೆಚ್ಚುಗೆ ಪಡೆಯಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net