ಅಡುಗೆ ಅನಿಲ ಸಿಲಿಂಡರ್ ಬೆಲೆ ಕಡಿತಕ್ಕೆ ಸ್ವಾಗತ

dvg-bjp-30.jpg
Published on

ದಾವಣಗೆರೆ : ದೇಶದ ಮಹಿಳೆಯರಿಗೆ ರಕ್ಷಾ ಬಂಧನ ಉಡುಗೊರೆಯಾಗಿ ಕೇಂದ್ರ ಸರ್ಕಾರ ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು 200 ರೂ.ಗಳಷ್ಟು ಕಡಿತ ಮಾಡಿರುವುದು, ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಹೆಚ್ಚುವರಿ ಸಬ್ಸಿಡಿ ನೀಡಿರುವ ಕ್ರಮವನ್ನು ಸ್ವಾಗತಿಸಿರುವ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯರು ಮತ್ತು ಮುಖಂಡರು ಪಾಲಿಕೆ ಆವರಣದಲ್ಲಿ ಬುಧವಾರ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.
 ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 9 ವರ್ಷದಲ್ಲಿ ವಿಶ್ವವೇ ಮೆಚ್ಚುವ ಮಹತ್ವಾಕಾಂಕ್ಷಿ ಬದಲಾವಣೆಗಳನ್ನು ಮಾಡಿದ್ದಾರೆ ಎಂದರು.
 ಈ ಹಿಂದಿನ ಸರ್ಕಾರದಲ್ಲಿ ದಶಕಗಳುದ್ದಕ್ಕೂ ಲಕ್ಷ ಲಕ್ಷ ಕೋಟಿ ರೂ. ಭ್ರಷ್ಟಾಚಾರ, ಹಗರಣಗಳು ಬೆಳಕಿಗೆ ಬರುತ್ತಲೇ ಇದ್ದವು. 13, 14ನೇ ಸ್ಥಾನದಲ್ಲಿದ್ದ ದೇಶದ ಆರ್ಥಿಕತೆಯು 10ನೇ ಸ್ಥಾನಕ್ಕೆ ಬರಲು 30 ವರ್ಷ ತೆಗೆದುಕೊಂಡಿತು. ಆದರೆ, ಕಳೆದ 9 ವರ್ಷದಲ್ಲಿ 10ನೇ ಸ್ಥಾನದಿಂದ 5 ನೇ ಸ್ಥಾನಕ್ಕೇರಿ ಜಗತ್ತಿನ ಆರ್ಥಿಕ ಶಕ್ತಿಶಾಲಿ ರಾಷ್ಟಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಪಡೆದಿದೆ ಎಂದು ತಿಳಿಸಿದರು.
 ದೇಶವನ್ನು ಆರ್ಥಿಕವಾಗಿ ಮುನ್ನಡೆಸುತ್ತಿದ್ದರೆ, ಮತ್ತೊಂದು ಕಡೆ ಬಡವರಿಗೆ ಸೂರು ಕಲ್ಪಿಸುವುದು, ಉಚಿತ ಚಿಕಿತ್ಸೆ ಒದಗಿಸಲು ಆಯುಷ್ಮಾನ್ ಭಾರತ್ ಯೋಜನೆ, ಜನೌಷಧ ಕೇಂದ್ರಗಳು, ಕಿಸಾನ್ ಸಮ್ಮಾನ್ ನಿಧಿ, ಯೂರಿಯಾ ಗೊಬ್ಬರಕ್ಕೆ ಶೇ. 90 ರಷ್ಟು ಸಬ್ಸಿಡಿ ನೀಡಿದ್ದನ್ನು ಪ್ರಸ್ತಾಪಿಸಿದರು.
 ಉಪ ಮೇಯರ್ ಯಶೋದಾ ಹೆಗ್ಗಪ್ಪ ಮಾತನಾಡಿ ಉಜ್ವಲ ಯೋಜನೆ ಅಡಿಯಲ್ಲಿ 75 ಲಕ್ಷ ಉಚಿತ ಹೊಸ ಎಲ್ಪಿಜಿ ಸಂಪರ್ಕ ಒದಗಿಸಲು ತೀರ್ಮಾನಿಸಿರುವ ಕ್ರಮ ಶ್ಲಾಘನೀಯ. ಉಜ್ವಲ ಯೋಜನೆಯಿಂದ ದೇಶದ ಬಡ ಮಹಿಳೆಯರಿಗೆ ಹೆಚ್ಚು ಅನುಕೂಲವಾಗಿದೆ ಎಂದರು.
 ‘ದೇಶದ ನಾಗರಿಕರ ಆಶಯಕ್ಕೆ ಸ್ಪಂದಿಸಿ ಈ ನಿರ್ಧಾರ ಕೈಗೊಂಡ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳು’ ಎಂದು ಘೋಷಣೆ ಕೂಗಲಾಯಿತು.
 ಪಾಲಿಕೆ ಸದಸ್ಯರಾದ ಎಸ್.ಟಿ. ವೀರೇಶ್, ಆರ್. ಶಿವಾನಂದ್, ಎಲ್.ಡಿ. ಗೋಣೆಪ್ಪ, ಆರ್. ಶಿವಪ್ರಕಾಶ್, ಕೆ.ಎಂ. ವೀರೇಶ್, ಶಿಲ್ಪಾ ಜಯಪ್ರಕಾಶ್, ಗಾಯತ್ರಿಬಾಯಿ ಖಂಡೋಜಿರಾವ್, ರೇಣುಕಾ ಶ್ರೀನಿವಾಸ್, ಬಿಜೆಪಿ ಮುಖಂಡರಾದ ಸುರೇಶ್ ಗಂಡುಗಾಳೆ, ಮುಕುಂದಪ್ಪ, ಜಯಪ್ರಕಾಶ್, ಶ್ರೀನಿವಾಸ್, ನಾಗಪ್ಪ, ಪದ್ಮನಾಭ ಶೆಟ್ಟಿ, ಗಣೇಶ್, ಸಚಿನ್ ವರ್ಣೇಕರ್, ಕಿರಣ, ಸಂತೋಷ್ ಕೋಟೆ, ದಂಡಪಾಣಿ, ರಘು ತೋಗಾಟ್, ರುದ್ರೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net