

ದಾವಣಗೆರೆ : ಪ್ರಧಾನಿ ಮೋದಿ ಅವರು 11 ವರ್ಷಗಳಲ್ಲಿ ತ್ರಿವಿಕ್ರಮ ಸಾಧನೆ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೋದಿ ಆಡಳಿತ ಅವಧಿಯ ಸಾಧನೆಗಳ ರಿಪೋರ್ಟ್ ಕಾರ್ಡ್ ನೀಡಿದರು. ಮೋದಿ ಅವರು ದೆಹಲಿ ದರ್ಬಾರ್‌ನ ಕಾಯಕ ಸಂಸ್ಕೃತಿಯನ್ನು ಬದಲಿಸಿದ್ದಾರೆ. ಸುಧಾರಣೆ, ಸಾಧನೆ ಜತೆಗೆ ಜನರಿಗೆ ಸೌಲಭ್ಯಗಳ ವರ್ಗಾವಣೆ ಮಾಡಿದ್ದಾರೆ ಎಂದು ತಿಳಿಸಿದರು. 2014 ಕ್ಕಿಂತ ಮುಂಚೆ ರೋಟಿ, ಕಪಡಾ ಹಾಗೂ ಮಕಾನ್ ಆದ್ಯತೆಯಾಗಿತ್ತು. ಕಳೆದ 11 ವರ್ಷಗಳಲ್ಲಿ ಭಾರತ ಜಾಗತಿಕ ಶಕ್ತಿಯಾಗಿ ಬೆಳೆದಿದೆ. ವಿಕಸಿತ ಭಾರತವಾಗಿದೆ ಎಂದು ಹೇಳಿದರು. ಮೋದಿ ಅವರ 11 ವರ್ಷಗಳ ಸಾಧನೆಗೆ ಶೂನ್ಯ ಅಂಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದಕ್ಕೆ ಪ್ರತಿಕ್ರಿಯಿಸಿ, ದೇಶದ ಜನ ಪೂರ್ಣ ಅಂಕ ನೀಡಿದ್ದಾರೆ. ‘ತಾನೂ ಕಳ್ಳ, ಪರರ ನಂಬ’ ಎಂಬುದು ಕಾಂಗ್ರೆಸ್‌ನವರ ಮನಃಸ್ಥಿತಿಯಾಗಿದೆ. ಮೋದಿ ಅವರು ಭ್ರಷ್ಟಾಚಾರದಲ್ಲಿ ಶೂನ್ಯ, ಸ್ವಜನ ಪಕ್ಷಪಾತದಲ್ಲಿ ಶೂನ್ಯ, ಸ್ವಾರ್ಥದಲ್ಲಿ ಶೂನ್ಯ ಅಂಕ ಪಡೆಯುತ್ತಾರೆ ಎಂದು ತಿರುಗೇಟು ಕೊಟ್ಟರು. ಕುರಿ, ಕೋಳಿ ಕೊಡುವುದು ಬಿಟ್ಟು ಕಾಂಗ್ರೆಸ್‌ನವರು ಬೇರೆ ಏನು ಮಾಡಿದ್ದಾರೆ ಎಂದು ಕಾಲೆಳೆದರು. ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿ ಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್. ರಾಜಶೇಖರ್, ಪಕ್ಷದ ಮುಖಂಡರಾದ ಮಾಡಾಳು ಮಲ್ಲಿಕಾರ್ಜುನ್, ಚಂದ್ರಶೇಖರ ಪೂಜಾರ್, ಬಿ.ಎಂ. ಸತೀಶ್, ಜಯಮ್ಮ, ಧನಂಜಯ ಕಡ್ಲೇಬಾಳ್, ಅನಿಲ್ ಕುಮಾರ್, ನಸೀರ್ ಅಹಮದ್, ಐರಣಿ ಅಣ್ಣೇಶ್ ಸುದ್ದಿಗೋಷ್ಠಿಯಲ್ಲಿದ್ದರು. ಇದಕ್ಕೂ ಮೊದಲು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ, ಪ್ರಧಾನಿ ಮೋದಿ ಅವರ 11 ವರ್ಷಗಳ ಸಾಧನೆಯ ಮಾಹಿತಿಯುಳ್ಳ ಪ್ರದರ್ಶನವನ್ನು ಸಿ.ಟಿ. ರವಿ ಉದ್ಘಾಟಿಸಿದರು. ಮುರುಘಾ ಮಠದ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.