

ದಾವಣಗೆರೆ : ಸಚಿವರಾಗಿ 10 ವರ್ಷಗಳಲ್ಲಿ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಸಂಸದೆಯಾಗಿ ಡಾ.ಪ್ರಭಾ ಮಲ್ಲಿಕಾರ್ಜುನ್ ಕಳೆದ ಒಂದು ವರ್ಷದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ದಾಖಲೆ ಬಿಡುಗಡೆ ಮಾಡಲಿ ಎಂದು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಆಗ್ರಹಿಸಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಅವಧಿಯಲ್ಲಿ ಏನು ಸಾಧನೆ ಮಾಡಿದ್ದಾರೆಂದು ಕಾಂಗ್ರೆಸ್ ಮುಖಂಡರು ಪ್ರಶ್ನಿಸಿದ್ದಾರೆ. ಅದಕ್ಕೆ ನಮ್ಮ ಬಳಿ ಉತ್ತರವಿದೆ ಎಂದು ತಿಳಿಸಿದರು. ಬಿಜೆಪಿ ಅವಧಿಯಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣ, ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ, ದಾವಣಗೆರೆ ವಿವಿ ಸ್ಥಾಪನೆ, 104 ಉದ್ಯಾನಗಳ ಅಭಿವೃದ್ಧಿ, ಆಧುನಿಕ ರೈಲು ನಿಲ್ದಾಣ, ಪಾಸ್‌ಪೋರ್ಟ್ ಕಚೇರಿ, ಸುಸಜ್ಜಿತ ಇಎಸ್‌ಐ ಆಸ್ಪತ್ರೆ, ಕೇಂದ್ರೀಯ ವಿದ್ಯಾಲಯ, ಸಿಆರ್‌ಸಿ ಕೇಂದ್ರ, ಜಗಳೂರು ಕೆರೆ ತುಂಬಿಸುವ ಯೋಜನೆ, ಕೆಎಸ್ಸಾರ್ಟಿಸಿ ಹಾಗೂ ಖಾಸಗಿ ಬಸ್ ನಿಲ್ದಾಣಗಳ ಅಭಿವೃದ್ಧಿ, ಸ್ಮಾರ್ಟ್‌ಸಿಟಿ ಯೋಜನೆ, ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್, ಥೀಮ್ ಪಾರ್ಕ್ ಸೇರಿ 22 ಪ್ರಮುಖ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಪಟ್ಟಿ ಮಾಡಿದರು. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ದಾವಣಗೆರೆಯನ್ನು ಸಿಂಗಪೂರ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಿದ್ದಾರೆಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ. ಕಾಂಗ್ರೆಸ್ಸಿಗರು ಯಾವಾಗಲೂ ಹೇಳುವ ಆಶ್ರಯ ಮನೆ, ಕುಂದುವಾಡ ಕೆರೆ, ಗಾಜಿನ ಮನೆ, ನಾಲ್ಕು ಸಿಸಿ ರಸ್ತೆ ಹೊರತು ಪಡಿಸಿದರೆ, ಸಚಿವರ ಹತ್ತು ವರ್ಷದ ಅವಧಿಯಲ್ಲಿ ಯಾವ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದಾರೆಂಬುದನ್ನು ಉತ್ತರಿಸಲಿ ಎಂದರು. ಜಿ.ಎಂ. ಸಿದ್ದೇಶ್ವರ್ 25 ವರ್ಷಗಳಲ್ಲಿ ಮಾಡದ ಕೆಲಸವನ್ನು ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಒಂದೇ ವರ್ಷದಲ್ಲಿ ಮಾಡಿದ್ದಾರೆ ಎನ್ನುತ್ತಾರೆ. ಸಂಸದರು ಕಳೆದೊಂದು ವರ್ಷದಲ್ಲಿ ಯಾವ ಅಭಿವದ್ಧಿ ಮಾಡಿದ್ದಾರೆ ಹಾಗೂ ಚುನಾವಣೆಯಲ್ಲಿ ಅವರೇ ಬಿಡುಗಡೆ ಮಾಡಿದ್ದ ಪ್ರಣಾಳಿಕೆಯಲ್ಲಿ ಘೋಷಿಸಿದ್ದ 141ಆಶ್ವಾಸನೆಗಳ ಪೈಕಿ ಎಷ್ಟು ಈಡೇರಿಸಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು. ಬಿಜೆಪಿ ಮುಖಂಡರಾದ ಅಣಬೇರು ಜೀವನಮೂರ್ತಿ, ಕೊಂಡಜ್ಜಿ ಜಯಪ್ರಕಾಶ್, ಬಿ. ರಮೇಶ್ ನಾಯ್ಕ, ಟಿಂಕರ್ ಮಂಜಣ್ಣ, ಶಿವನಗೌಡ ಟಿ. ಪಾಟೀಲ್, ಕಿಶೋರ್ ಕುಮಾರ್, ನೀಲಗುಂದ ರಾಜು ಸುದ್ದಿಗೋಷ್ಠಿಯಲ್ಲಿದ್ದರು.