ಸಿಎಂ ಕುರ್ಚಿ ಭದ್ರಪಡಿಸಿಕೊಳ್ಳಲು ಜಾತಿಗಣತಿ ಅಸ್ತ್ರ

dvg-bjp_20250421234443063.jpg
Published on

ದಾವಣಗೆರೆ : ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂತರಾಜ ವರದಿಯನ್ನು ಜಾರಿಗೆ ತರಲು ಸಾಧ್ಯವೇ ಇಲ್ಲ. ಹಿಂದುಳಿದ ಸಮಾಜಗಳಿಗೆ ನ್ಯಾಯ ಒದಗಿಸುವ ಬದ್ಧತೆ ಅವರಿಗಿಲ್ಲ. ತಮ್ಮ ಕುರ್ಚಿ ಭದ್ರಪಡಿಸಿಕೊಳ್ಳಲು ಜಾತಿ ಜಾತಿಗಳ ನಡುವೆ ಬೆಂಕಿ ಹಚ್ಚಿ ಕಂದಕ ಸೃಷ್ಟಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.  ಬಿಜೆಪಿಯಿಂದ ಆಯೋಜಿಸಿರುವ ಜನಾಕ್ರೋಶ ಯಾತ್ರೆಯು ಸೋಮವಾರ ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ನಗರದ ಜಯದೇವ ವೃತ್ತದ ಬಳಿ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.  ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ಮುಂದಿಟ್ಟುಕೊಂಡು ಬೆಂಕಿ ಹಚ್ಚುವ ಕೆಲಸ ಮಾಡಿದರು. ಈಗ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬೇಕಾದ ಪರಿಸ್ಥಿತಿ ಬಂದಿರುವುದರಿಂದ ಗೊಂದಲ ಸೃಷ್ಟಿಸಲು ಜಾತಿಗಣತಿಯ ಅಸ್ತ್ರ ಪ್ರಯೋಗಿಸಿದ್ದಾರೆಯೇ ಹೊರತು ಅವರಿಗೆ ಹಿಂದುಳಿದವರ ಬಗ್ಗೆ ನಿಜವಾದ ಕಾಳಜಿ ಇಲ್ಲ ಎಂದು ಹೇಳಿದರು.  ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಮಾತನಾಡಿ, ಸಿಎಂ ಸಿದ್ದರಾಮಯ್ಯ ಮತ್ತು ಅವರ ಸಚಿವ ಸಂಪುಟವು ಅಲಿಬಾಬ ಮತ್ತು 40 ಕಳ್ಳರ ಕತೆಯ ತದ್ರೂಪ ಎಂದು ಆರೋಪಿಸಿದರು.  ರಾಜ್ಯದ ಖಜಾನೆ ಲೂಟಿ ಹೊಡೆದು, ಈಗ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನರ ಜೇಬಿಗೆ ಕೈಹಾಕಿದ್ದಾರೆ. ಪ್ರತಿ ಇಲಾಖೆಯ ಕಚೇರಿಯಲ್ಲಿ ಕಮಿಷನ್ ಸಂಗ್ರಹಕ್ಕೆ ಏಜೆಂಟರನ್ನು ನೇಮಕ ಮಾಡಿದ್ದಾರೆ. ಕಾನೂನು ವ್ಯವಸ್ಥೆ ಹದಗೆಟ್ಟಿರುವುದಕ್ಕೆ ನಿವೃತ್ತ ಡಿಜಿಪಿ ಅವರ ಕೊಲೆಯೇ ನಿದರ್ಶನವಾಗಿದೆ ಎಂದರು.  ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಮಾತನಾಡಿ, ಸಿದ್ದರಾಮಯ್ಯ ಅವರಿಗೆ ಸಾಮಾಜಿಕ ನ್ಯಾಯದ ಗಂಧವೂ ಗೊತ್ತಿಲ್ಲ. ಮುಸ್ಲಿಮರಲ್ಲೂ ದಲಿತರಿದ್ದಾರೆ ಎಂಬುದು ಅವರಿಗೆ ತಿಳಿದಿದೆಯೆ ಎಂದು ಪ್ರಶ್ನಿಸಿದರು.  ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿದರು. ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಸದಸ್ಯ ಕೆ.ಎಸ್. ನವೀನ್, ಮಾಜಿ ಶಾಸಕರಾದ ಪಿ. ರಾಜೀವ್, ಮಾಡಾಳು ವಿರೂಪಾಕ್ಷಪ್ಪ, ವೈ. ಸಂಪಂಗಿ, ಪಕ್ಷದ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್ ಇದ್ದರು.  ...  (ಬಾಕ್ಸ್)  ಬುರ್ಕಾ ಧರಿಸಿ ಓಡಾಡುವ ಸ್ಥಿತಿ  ಪಂಚ ಗ್ಯಾರಂಟಿಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ನ ಎರಡು ವರ್ಷಗಳ ಆಡಳಿತದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳ ಗುದ್ದಲಿ ಪೂಜೆ ಆಗುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಹಾಗೂ ಅವರ ತಂಡದವರು ರಾಜ್ಯದಲ್ಲಿ ಬುರ್ಕಾ ಹಾಕಿಕೊಂಡು ಓಡಾಡಬೇಕಾದ ಸ್ಥಿತಿ ಬಂದಿದೆ ಎಂದು ವಿಜಯೇಂದ್ರ ತಿಳಿಸಿದರು.  ವಿಧಾನಸಭೆ ಚುನಾವಣೆಗೆ ಪೂರ್ವದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಭರವಸೆ ನೀಡಿದ್ದ ಕಾಂಗ್ರೆಸ್ ಜನರಿಗೆ ಮೋಸ ಮಾಡಿದೆ. ಯಾವ ಸೌಲಭ್ಯಗಳೂ ಸಾರ್ವಜನಿಕರಿಗೆ ಸಿಗುತ್ತಿಲ್ಲ ಎಂದು ದೂರಿದರು.  ಭ್ರಷ್ಟಾಚಾರದಲ್ಲಿ ಕರ್ನಾಟಕ ದೇಶದಲ್ಲೇ ನಂ. 1 ಸ್ಥಾನದಲ್ಲಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರೇ ಹೇಳಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆಯಾಗುತ್ತಿಲ್ಲ ಎಂದು ಆಡಳಿತ ಪಕ್ಷದ ಶಾಸಕರೇ ಅಳಲು ತೋಡಿಕೊಳ್ಳುತ್ತಿದ್ದಾರೆ ಎಂದರು.  ಸಿದ್ದರಾಮಯ್ಯ ಕೇವಲ ಮುಸ್ಲಿಮರ ಮತಗಳನ್ನು ಪಡೆದು ಮುಖ್ಯಮಂತ್ರಿ ಆಗಿದ್ದಾರೆಯೆ. ಹಿಂದುಗಳಿಗೆ ಏಕೆ ಅಪಮಾನ ಮಾಡುತ್ತಿದ್ದೀರಿ ಎಂದು ರಾಜ್ಯದ ಜನರು ಕೇಳುವ ಪ್ರಶ್ನೆಗೆ ಉತ್ತರಿಸುವ ಧೈರ್ಯ ಸಿಎಂಗೆ ಇಲ್ಲ. ಹಾಗಾಗಿ ಅವರು ರಾಜ್ಯ ಪ್ರವಾಸ ಮಾಡುತ್ತಿಲ್ಲ ಎಂದು ಹೇಳಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net