

ದಾವಣಗೆರೆ : ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ರಾಜ್ಯದ ನಿಪ್ಪಾಣಿ ಕ್ಷೇತ್ರದಲ್ಲಿ ಭಾಷಣ ಮಾಡಿ ನೂರು ವರ್ಷ ಆಗಿರುವ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿರುವ ರಥಯಾತ್ರೆ ‘ಭೀಮ ಹೆಜ್ಜೆ’ ಏ. 12 ರಂದು ದಾವಣಗೆರೆಗೆ ಆಗಮಿಸಲಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್. ರಾಜಶೇಖರ್ ಹೇಳಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಥಯಾತ್ರೆ ಸಾಗುವ ಮಾರ್ಗ ಮತ್ತು ದಾವಣಗೆರೆಯಲ್ಲಿ ಅದನ್ನು ಸ್ವಾಗತಿಸುವ ಕಾರ್ಯಕ್ರಮದ ವಿವರ ನೀಡಿದರು. ರಥಯಾತ್ರೆಯು ವಿಧಾನಸೌಧ ಮುಂಭಾಗದಿಂದ ಗುರುವಾರ ಹೊರಡಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ಸಮುದಾಯದ ಹಲವಾರು ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ರಥಯಾತ್ರೆಯು ನೆಲಮಂಗಲ, ಮಧುಗಿರಿ, ತುಮಕೂರು, ಚಿತ್ರದುರ್ಗ ಮಾರ್ಗವಾಗಿ ದಾವಣಗೆರೆಗೆ ಬರಲಿದೆ. ಇಲ್ಲಿಂದ ಹಾವೇರಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಮೂಲಕ ಏ. 15 ರಂದು ನಿಪ್ಪಾಣಿ ತಲುಪಲಿದೆ ಎಂದು ಮಾಹಿತಿ ನೀಡಿದರು. ಶನಿವಾರ ಬೆಳಗ್ಗೆ 10 ಗಂಟೆಗೆ ರಥಯಾತ್ರೆಯು ಹೆಬ್ಬಾಳ ಮೂಲಕ ಜಿಲ್ಲೆಯನ್ನು ಪ್ರವೇಶಿಸಲಿದೆ. ಮಾಯಕೊಂಡ ಕ್ಷೇತ್ರದ ಆನಗೋಡಿನಲ್ಲಿ ರಥಕ್ಕೆ ಪುಷ್ಪಾರ್ಚನೆ ಮೂಲಕ ಗೌರವ ಸಲ್ಲಿಸಲಾಗುವುದು. ನಗರ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ಕಿಟ್ ಹೌಸ್ ಬಳಿಯಿಂದ 1 ಸಾವಿರಕ್ಕೂ ಹೆಚ್ಚು ಬೈಕ್‌ಗಳಲ್ಲಿ ಹದಡಿ ರಸ್ತೆಯ ಮೂಲಕ ಅಂಬೇಡ್ಕರ್ ವೃತ್ತ ತಲುಪಲಿದೆ. ಅಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗುವುದು ಎಂದರು. ಅಲ್ಲಿ ನಡೆಯುವ ಸಭೆಯಲ್ಲಿ ಮಾಜಿ ಸಂಸದರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಪಕ್ಷದ ಹಿರಿಯ ಕಾರ್ಯಕರ್ತರು, ಮುಖಂಡರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಸಮುದಾಯದ ನಾಯಕರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು. ಇಲ್ಲಿಂದ ಹರಿಹರಕ್ಕೆ ತೆರಳಿ ನಂತರ ಹಾವೇರಿ ಜಿಲ್ಲೆಗೆ ರಥಯಾತ್ರೆ ತೆರಳಲಿದೆ ಎಂದು ಹೇಳಿದರು. ಪಕ್ಷದ ಮುಖಂಡ ಆಲೂರು ನಿಂಗರಾಜ ಮಾತನಾಡಿ, 2009-10 ರಲ್ಲಿ ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿದ್ದಾಗ ದಾವಣಗೆರೆಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 5 ಕೋಟಿ ರೂ. ಮಂಜೂರು ಮಾಡಿದರು. ಆದ್ದರಿಂದ ಅಂಬೇಡ್ಕರ್ ಭವನ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಯಡಿಯೂರಪ್ಪ ಅವರನ್ನು ಆಹ್ವಾನಿಸಬೇಕು ಎಂದು ಆಗ್ರಹಿಸಿದರು. ಪಕ್ಷದ ಮುಖಂಡರಾದ ಧನಂಜಯ ಕಡ್ಲೇಬಾಳ್, ಹನುಮಂತ ನಾಯ್ಕ, ಶಿವಾನಂದ, ಓದೋ ಗಂಗಪ್ಪ, ಎಚ್.ಪಿ. ವಿಶ್ವಾಸ್, ಜಿ.ವಿ. ಗಂಗಾಧರ್, ಕರಿಯಣ್ಣನವರ್, ಮಂಜಾನಾಯ್ಕ, ಆನಂದ, ಹರೀಶ್ ಸುದ್ದಿಗೋಷ್ಠಿಯಲ್ಲಿದ್ದರು.