ಬಜೆಟ್ ವಿರೋಧಿಸಿ ಬೀದಿಗಿಳಿದ ಬಿಜೆಪಿ

dvg-bjp-protest_20250309011247450.jpg
Published on

ದಾವಣಗೆರೆ  : ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ರೈತ ವಿರೋಧಿ, ಜನ ವಿರೋಧಿಯಾಗಿದೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿಯಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.  ಜಯದೇವ ವೃತ್ತದಿಂದ ಟ್ರಾೃಕ್ಟರ್‌ಗಳೊಂದಿಗೆ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು ಮಹಾತ್ಮ ಗಾಂಧಿ ವೃತ್ತದ ಮೂಲಕ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.  ಎಸಿ ಕಚೇರಿ ಬಳಿ ನಡೆದ ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ಮುಖಂಡರು ಮಾತನಾಡಿ, ರಾಜ್ಯ ಸರ್ಕಾರದ ಬಜೆಟ್ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.  ಬಜೆಟ್ನಲ್ಲಿ ಅಲ್ಪಸಂಖ್ಯಾತ ಸಮುದಾಯವೊಂದಕ್ಕೆ ಹೆಚ್ಚಿನ ಅನುದಾನ ನೀಡಿ ಓಲೈಕೆ ಮಾಡಿದೆ. ಅಂಬೇಡ್ಕರ್ ಅವರ ಆಶಯಗಳಿಗೆ ತಿಲಾಂಜಲಿ ನೀಡಿದ್ದಾರೆ. ಮಲೆನಾಡು, ಕರಾವಳಿ, ಬಯಲು ಸೀಮೆ ಅಭಿವೃದ್ಧಿ ಮಂಡಳಿಗಳಿಗೆ ನೀಡಿರುವ ಹಣ ಅತ್ಯಲ್ಪವಾಗಿದೆ. ವಿಧಾನಸಭೆ ಕ್ಷೇತ್ರಗಳ ರಸ್ತೆ, ನೀರು ಮತ್ತು ಮೂಲಸೌಕರ್ಯ ಕಲ್ಪಿಸಲು ಮೀಸಲಿಟ್ಟಿರುವ ಹಣ ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಎಂಬಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.  ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್. ರಾಜಶೇಖರ್ ಮಾತನಾಡಿ, ರಾಜ್ಯ ಸರ್ಕಾರ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ. ರೈತರ ಹಿತವನ್ನು ಕಡೆಗಣಿಸಿದೆ. ದಾವಣಗೆರೆ ಜಿಲ್ಲೆಗೆ ಯಾವುದೇ ಕೊಡುಗೆ ನೀಡಿಲ್ಲ. ಸರ್ಕಾರಿ ವೈದ್ಯಕೀಯ ಕಾಲೇಜಿನ ಬಗ್ಗೆ ಪ್ರಸ್ತಾಪಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.  ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಹಿಂದುಳಿದವರಿಗೆ, ಪರಿಶಿಷ್ಟರಿಗೆ ಅನ್ಯಾಯ ಮಾಡಿದ್ದಾರೆ. ರಾಜ್ಯದ ಬೊಕ್ಕಸ ಖಾಲಿಯಾಗಿದೆ ಎಂದು ಮಾಜಿ ಶಾಸಕ ಬಸವರಾಜ ನಾಯ್ಕ ದೂರಿದರು.  ಪಕ್ಷದ ಮುಖಂಡ ಬಿ.ಎಂ. ಸತೀಶ್ ಮಾತನಾಡಿ, ಬಜೆಟ್ನಲ್ಲಿ ರೈತರಿಗೆ ಅನ್ಯಾಯವಾಗಿದೆ. ಭದ್ರಾ ನಾಲೆಗಳ ಆಧುನೀಕರಣದ ಬಗ್ಗೆ ಪ್ರಸ್ತಾಪ ಇಲ್ಲ. ದಾವಣಗೆರೆ ವಿಮಾನ ನಿಲ್ದಾಣ ಸ್ಥಾಪನೆಯ ಬಗ್ಗೆ ಹೇಳಿಲ್ಲ. ಜಿಲ್ಲಾಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಮಾಡುವ ಕುರಿತು ತಿಳಿಸಿಲ್ಲ. ಇದು ರೈತ ವಿರೋಧಿ, ಜನವಿರೋಧಿ ಬಜೆಟ್ ಎಂದು ಟೀಕಿಸಿದರು.  ಪ್ರಸಕ್ತ ಸಾಲಿನ ಬಜೆಟ್ ನೋಡಿದರೆ ಸಾಲ ಮಾಡಿಯಾದರೂ ತುಪ್ಪ ತಿನ್ನು ಎನ್ನುವಂತಿದೆ, ಸರ್ಕಾರ ದಿವಾಳಿಯಾಗಿದೆ ಎಂದು ಹರಿಹರ ತಾಲೂಕಿನ ಬಿಜೆಪಿ ಮುಖಂಡ ಚಂದ್ರಶೇಖರ ಪೂಜಾರ ಹೇಳಿದರು.  ಸರ್ಕಾರ ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೆ ಆದ್ಯತೆ ಕೊಟ್ಟಿಲ್ಲ. ಮಧ್ಯಮ ವರ್ಗದ ಜನರಿಗಾಗಿ ಕಾರ್ಯಕ್ರಮ ರೂಪಿಸಿಲ್ಲ ಎಂದು ಮುಖಂಡ ಶಿವನಳ್ಳಿ ರಮೇಶ್ ತಿಳಿಸಿದರು. ಆಲೂರು ಲಿಂಗರಾಜ ಮಾತನಾಡಿದರು.  ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಆರ್.ಎಲ್. ಶಿವಪ್ರಕಾಶ್, ಕೆ.ಎಂ. ವೀರೇಶ್, ಪಕ್ಷದ ಮುಖಂಡರಾದ ಅಜಯ ಕುಮಾರ, ಶ್ರೀನಿವಾಸ ದಾಸಕರಿಯಪ್ಪ, ಧನಂಜಯ ಕಡ್ಲೇಬಾಳ್, ಐರಣಿ ಅಣ್ಣೇಶ, ಬಾತಿ ಚಂದ್ರಶೇಖರ್, ಬೆಳ್ಳೂಡಿ ಮಂಜುನಾಥ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net