ಬಿಜೆಪಿಯಿಂದ ಮತದಾರ ಚೇತನ ಮಹಾ ಅಭಿಯಾನ

dvg-G.M.Siddeshwar-budget-01.jpg
Published on

ದಾವಣಗೆರೆ : ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ‘ಮತದಾರ ಚೇತನ ಮಹಾ ಅಭಿಯಾನ’ವನ್ನು ಜಿಲ್ಲೆಯಲ್ಲಿ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಎಂ. ವೀರೇಶ ಹನಗವಾಡಿ ಹೇಳಿದರು.
 ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚುನಾವಣಾ ಆಯೋಗ ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಿದೆ. ಅದಕ್ಕೆ ಪೂರಕವಾಗಿ ಪಕ್ಷದ ವತಿಯಿಂದಲೂ ಕೈಜೋಡಿಸಲಾಗುವುದು ಎಂದು ತಿಳಿಸಿದರು.
 ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ನಿರ್ದೇಶನದಂತೆ ಹೊಸ ಮತದಾರರ ನೋಂದಣಿ, ನಕಲಿ ಮತದಾರರು ಸೇರಿಕೊಳ್ಳದಂತೆ ತಡೆಯುವುದು, ವಿಳಾಸ ಬದಲಾಗಿರುವುದು, ಊರಿಗೆ ಹೊಸದಾಗಿ ಬಂದವರು, ಹಾಸ್ಟೆಲ್, ಪಿಜಿ, ಹೋಮ್ ಸ್ಟೇ ಇತ್ಯಾದಿ ಸ್ಥಳಗಳಲ್ಲಿ ವಾಸವಾಗಿರುವವರು, ಹೊರ ರಾಜ್ಯಗಳಿಂದ ಬಂದವರು ಇದನ್ನೆಲ್ಲ ಗಮನಿಸಿ ಸರಿಯಾದ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ನೆರವಾಗಬೇಕಿದೆ ಎಂದು ಮಾಹಿತಿ ನೀಡಿದರು.
 ಈ ಕಾರ್ಯಕ್ಕಾಗಿ 3 ಸದಸ್ಯರ ಜಿಲ್ಲಾ ಸಮಿತಿ, ವಿಧಾನಸಭಾ ಕ್ಷೇತ್ರಕ್ಕೆ 3 ಜನರ ಸಮಿತಿ ಮತ್ತು ಶಕ್ತಿ ಕೇಂದ್ರ ಮಟ್ಟದಲ್ಲೂ ಸಮಿತಿಗಳನ್ನು ರಚಿಸಲಾಗುತ್ತಿದೆ ಎಂದು ಹೇಳಿದರು.
 ಜಿಲ್ಲಾ ಮತ್ತು ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಕಾರ್ಯಾಗಾರ, ಶಕ್ತಿ ಕೇಂದ್ರ ಮಟ್ಟದಲ್ಲಿ ಬಿಎಲ್‌ಎ-2 ಕಾರ್ಯಾಗಾರ ಮಾಡಲಾಗುವುದು. ಜಿಲ್ಲೆಯ ಸಂಸದರು, ಶಾಸಕರು ಮತ್ತು ಪದಾಧಿಕಾರಿಗಳು ಚುನಾವಣಾ ಆಯೋಗದಿಂದ ನೇಮಿಸಲಾದ ಬಿಎಲ್‌ಒಗಳೊಂದಿಗೆ ನಿರಂತರ ಸಂಪರ್ಕದಲ್ಲಿ ಇರಲಿದ್ದಾರೆ. ಅಗತ್ಯಕ್ಕೆ ಅನುಗುಣವಾಗಿ ದೂರುಗಳನ್ನು ನೋಂದಾಯಿಸಲಿದ್ದಾರೆ ಎಂದು ತಿಳಿಸಿದರು.
 ಶಕ್ತಿ ಕೇಂದ್ರ ಮಟ್ಟದಲ್ಲಿ ತಾಂತ್ರಿಕ ಹಿನ್ನೆಲೆ ಹೊಂದಿರುವ ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ನೇಮಿಸಲಾಗುವುದು. ಪಕ್ಷದ ಕಾರ್ಯಕರ್ತರಿಂದ ಮನೆ ಮನೆ ಪ್ರಚಾರ, ಸಾರ್ವಜನಿಕ ಸ್ಥಳಗಳಲ್ಲಿ ಅಭಿಯಾನ, ಡಿಜಿಟಲ್ ವ್ಯವಸ್ಥೆಗಳನ್ನು ಬಳಸಿಕೊಳ್ಳಲಾಗುವುದು. ಹೊಸ ವಸತಿ ಪ್ರದೇಶ, ಬಹುಮಹಡಿ ಕಟ್ಟಡ, ಹಾಸ್ಟೆಲ್, ಕಾರ್ಮಿಕ ವಸತಿ ಪ್ರದೇಶಗಳಲ್ಲಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
 ಮತದಾರರ ಪಟ್ಟಿಗೆ ಹೊಸ ಮತದಾರರ ಸೇರ್ಪಡೆ, ನಕಲಿ ಮತದಾರರನ್ನು ತೆಗೆಸುವುದು ಮತ್ತು ವರ್ಗಾವಣೆ ಪ್ರಕ್ರಿಯೆಗೆ ದೊಡ್ಡ ವಿಧಾನಸಭಾ ಕ್ಷೇತ್ರಗಳಲ್ಲಿ ಕನಿಷ್ಠ 20 ಸಾವಿರ, ಅದಕ್ಕಿಂತ ಚಿಕ್ಕ ಕ್ಷೇತ್ರಗಳಲ್ಲಿ 10 ಸಾವಿರ, ಸಣ್ಣ ಕ್ಷೇತ್ರಗಳಲ್ಲಿ 5 ಸಾವಿರ ಮತದಾರರ ಗುರಿ ನಿಗದಿಪಡಿಸಲಾಗಿದೆ ಎಂದು ಹೇಳಿದರು.
 ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ಮಹಾನಗರ ಪಾಲಿಕೆಯ ಉಪ ಮೇಯರ್ ಯಶೋದಾ, ಸದಸ್ಯರಾದ ಉಮಾ ಪ್ರಕಾಶ್, ಗೌರಮ್ಮ, ರೇಣುಕಾ, ಮುಖಂಡರಾದ ಶ್ರೀನಿವಾಸ ದಾಸಕರಿಯಪ್ಪ, ಮಂಜಾನಾಯ್ಕ, ಡಿ.ಎಸ್. ಶಿವಶಂಕರ್, ಬಾತಿ ವೀರೇಶ್, ಎಚ್.ಪಿ. ವಿಶ್ವಾಸ್ ಇದ್ದರು.
 ...
 * ಸುಳ್ಳು ಹೇಳಿರುವುದೇ ಸಾಧನೆ
 ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮತದಾರರಿಗೆ ಗ್ಯಾರಂಟಿ ಯೋಜನೆಗಳ ಆಮಿಷವೊಡ್ಡಿ ಅಧಿಕಾರಕ್ಕೆ ಬಂದಿದೆ. ಆದರೆ ಆ ಯೋಜನೆಗಳು ಜನರಿಗೆ ಸರಿಯಾಗಿ ತಲುಪಿಲ್ಲ. ಸುಳ್ಳು ಹೇಳಿರುವುದೇ ಸರ್ಕಾರದ 100 ದಿನಗಳ ಸಾಧನೆಯಾಗಿದೆ ಎಂದು ಟೀಕಿಸಿದರು.
 ವಿಧಾನಸಭೆ ಪ್ರತಿಪಕ್ಷ ನಾಯಕನ ಆಯ್ಕೆಯಾಗದಿದ್ದರೂ ಹೋರಾಟ ನಿಂತಿಲ್ಲ. ನಮ್ಮ ನಾಯಕರು ಸದನದ ಒಳಗೆ ಮತ್ತು ಹೊರಗೆ ಹೋರಾಟ ಮಾಡುತ್ತಿದ್ದಾರೆ ಎಂದು ತಿಳಿಸಿದರು.
 ಹೊನ್ನಾಳಿ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಪಕ್ಷದ ವರಿಷ್ಠರು ಎಲ್ಲವನ್ನೂ ಗಮನಿಸುತ್ತಾರೆ, ಅಗತ್ಯವೆನಿಸಿದರೆ ಕರೆದು ಮಾತನಾಡುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
 ಲೋಕಸಭಾ ಚುನಾವಣೆಗೆ ತಾವು ಪ್ರಬಲ ಆಕಾಂಕ್ಷಿ ಎಂದು ರೇಣುಕಾಚಾರ್ಯ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ, ಮುಂದಿನ ಚುನಾವಣೆಯಲ್ಲಿ ಜಿ.ಎಂ. ಸಿದ್ದೇಶ್ವರ ಅವರನ್ನು ಗೆಲ್ಲಿಸಿ ಎಂದು ಮಾಜಿ ಸಿಎಂಗಳಾದ ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ ಎಂದರು.
 ...
 * ನಾನೂ ಟಿಕೆಟ್ ಆಕಾಂಕ್ಷಿ
 ಲೋಕಸಭಾ ಚುನಾವಣೆಗೆ ತಾವೂ ಆಕಾಂಕ್ಷಿ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಪುನರುಚ್ಚರಿಸಿದರು.
 ನಾಲ್ಕು ಬಾರಿ ಲೋಕಸಭಾ ಸದಸ್ಯನಾಗಿ ಕೆಲಸ ಮಾಡಿರುವೆ. ಈ ಬಾರಿಯೂ ಚುನಾವಣೆಗೆ ನಿಲ್ಲುವ ಆಕಾಂಕ್ಷೆ ಇದೆ. ಪಕ್ಷದ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.
 ಕ್ಷೇತ್ರದಲ್ಲಿ ತಾವು ನಿರಂತರವಾಗಿ ಗೆಲ್ಲುತ್ತ ಬಂದಿದ್ದು ಈ ಬಾರಿಯೂ ಅವಕಾಶ ನೀಡಿದರೆ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
 ರಾಜಕಾರಣದಲ್ಲಿ ಏಳು ಬೀಳುಗಳು ಇರುತ್ತವೆ. ನಮ್ಮ ಆಡಳಿತವಿದ್ದಾಗ ಕಾಂಗ್ರೆಸ್‌ನವರು 5 ವರ್ಷ ಮನೆಯಲ್ಲಿ ಕುಳಿತಿದ್ದರು. ಈಗ ನಮ್ಮ ಸರದಿ. ಮುಂದೆ ಮತ್ತೆ ಗೆಲ್ಲುತ್ತೇವೆ ಎಂದು ಹೇಳಿದರು.
 ಬರಪೀಡಿತ ಪ್ರದೇಶಗಳನ್ನು ರಾಜ್ಯ ಸರ್ಕಾರ ಘೋಷಣೆ ಮಾಡಬೇಕು. ನಂತರ ನೆರವಿಗಾಗಿ ಕೇಂದ್ರ ಸರ್ಕಾರವನ್ನು ಕೇಳಬೇಕು ಎಂದರು.
 ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಕಡೆಗಣಿಸಿಲ್ಲ. ರಾಷ್ಟ್ರೀಯ ಸಂಸದೀಯ ಮಂಡಳಿಯ ಸದಸ್ಯರನ್ನಾಗಿ ಮಾಡಿ ಪಕ್ಷ ಅವರಿಗೆ ಸೂಕ್ತ ಸ್ಥಾನಮಾನ ನೀಡಿದೆ ಎಂದು ಹೇಳಿದರು.
 ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net