ರೈತರ ಅಭಿವೃದ್ಧಿಯೇ ಬಿಎಸ್‌ವೈ ಮಂತ್ರ

dvg-bsy-birthday.jpg
Published on

ದಾವಣಗೆರೆ  ರೈತರ ಸರ್ವಾಂಗೀಣ ಅಭಿವೃದ್ಧಿಯೇ ಬಿಜೆಪಿಯ ಗುರಿ ಎಂಬುದನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಆಡಳಿತ ಅವಧಿಯಲ್ಲಿ ನಿರೂಪಿಸಿದರು ಎಂದು ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ ಹೇಳಿದರು.  ಜಿಲ್ಲಾ ಬಿಜೆಪಿ ಹಾಗೂ ಮಹಿಳಾ ಮೋರ್ಚಾ ವತಿಯಿಂದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.  ದೇಶದ ಇತಿಹಾಸದಲ್ಲೇ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ಕೀರ್ತಿ ಬಿಎಸ್‌ವೈ ಅವರಿಗೆ ಸಲ್ಲುತ್ತದೆ. 1985 ರಲ್ಲಿ ಬಿಜೆಪಿಯಿಂದ ಏಕೈಕ ಶಾಸಕರಾಗಿ ಇದ್ದಾಗ, ಅಂದಿನ ಕಾಂಗ್ರೆಸ್ ಸರ್ಕಾರ ಬಗರ್‌ಹುಕುಂ ರೈತರನ್ನು ಒಕ್ಕಲೆಬ್ಬಿಸುವ ಕಾನೂನು ತರಲು ಮುಂದಾದಾಗ ಸದನದಲ್ಲಿ ಒಬ್ಬರೇ ಹೋರಾಟ ಮಾಡಿ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡಿದರು. ಅವರ ರೈತಪರ ಕಾಳಜಿಗೆ ಇದು ನಿದರ್ಶನ ಎಂದು ತಿಳಿಸಿದರು.  ಯಡಿಯೂರಪ್ಪ ಅವರು ಬೇರು ಮಟ್ಟದಿಂದ ಪಕ್ಷವನ್ನು ಸಂಘಟಿಸಿದರು. ಸೂಕ್ತ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಅವರಿಗಿತ್ತು. ಹಲವು ಸಂಕಷ್ಟದ ಸಂದರ್ಭಗಳನ್ನು ದಿಟ್ಟವಾಗಿ ಎದುರಿಸುವ ತಾಕತ್ತು ಅವರಿಗಿತ್ತು ಎಂದು ಬಣ್ಣಿಸಿದರು.  ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್. ರಾಜಶೇಖರ್ ಮಾತನಾಡಿ, ಯಡಿಯೂರಪ್ಪ ಅವರು ಪ್ರಚಾರ ನಡೆಸಿದರೆ ಪಕ್ಷದ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅದು ಅವರ ವ್ಯಕ್ತಿತ್ವ, ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ ಎಂದು ಹೇಳಿದರು.  ದಾವಣಗೆರೆ ಮಹಾನಗರ ಪಾಲಿಕೆ ರಚನೆಯಾಗಲು ಬಿಎಸ್‌ವೈ ಕಾರಣ. ಅಭಿವೃದ್ಧಿ ಕಾರ್ಯಗಳಿಗೆ 400 ಕೋಟಿ ರೂ. ವಿಶೇಷ ಅನುದಾನ ನೀಡಿದರು. ಪರಿಣಾಮವಾಗಿ ನಗರದಲ್ಲಿ ರಸ್ತೆ, ಬೀದಿದೀಪ, ಪಾರ್ಕ್‌ಗಳು ಪ್ರಗತಿಯಾದವು. ಭದ್ರಾ ನಾಲೆ ಆಧುನೀಕರಣಕ್ಕೆ ಆಗಿನ ಕಾಲದಲ್ಲೇ 950 ಕೋಟಿ ರೂ. ನೀಡಿದರು, ದಾವಣಗೆರೆ ವಿವಿ, ಜಿಲ್ಲಾಡಳಿತ ಭವನ ನಿರ್ಮಾಣವಾಗಿದ್ದು ಬಿಜೆಪಿ ಆಡಳಿತ ಅವಧಿಯಲ್ಲಿ ಎಂದು ವಿವರಿಸಿದರು.  ಬಿಜೆಪಿ ಆಡಳಿತ ಅವಧಿಯಲ್ಲಿ ಪ್ರಯೋಜನ ಪಡೆದ ಫಲಾನುಭವಿಗಳನ್ನು ಇದೇ ವೇಳೆ ಸನ್ಮಾನಿಸಲಾಯಿತು.  ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳ್ ಪ್ರಾಸ್ತಾವಿಕ ಮಾತನಾಡಿದರು. ಪಕ್ಷದ ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಜಯಮ್ಮ, ಅಲ್ಪಸಂಖ್ಯಾತರ ಮೋರ್ಚಾ ಉಪಾಧ್ಯಕ್ಷ ನಸೀರ್ ಅಹಮದ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಮಹೇಶ್, ಪಕ್ಷದ ಮುಖಂಡರಾದ ಕೆ.ಎಂ. ಸುರೇಶ್, ಎಲ್.ಎನ್. ಕಲ್ಲೇಶ್, ಪಾಲಿಕೆ ಮಾಜಿ ವಿಪಕ್ಷ ನಾಯಕ ಪ್ರಸನ್ನ ಕುಮಾರ್, ಕೃಷ್ಣ ಕುಮಾರ್, ತಾರೇಶ ನಾಯ್ಕ, ಸಚಿನ್ ಇದ್ದರು. ಅನಿಲ್ ಕುಮಾರ ನಾಯಕ್ ಸ್ವಾಗತಿಸಿದರು. ಐರಣಿ ಅಣ್ಣೇಶ್ ನಿರೂಪಿಸಿದರು.  ...  (ಕೋಟ್)  ಯಡಿಯೂರಪ್ಪ ಅವರು ತಮ್ಮ ಆಡಳಿತ ಅವಧಿಯಲ್ಲಿ ಎಲ್ಲ ಸಮಾಜಗಳನ್ನೂ ಸಮಾನವಾಗಿ ನೋಡಿದರು. ಹಲವು ನಿಗಮ, ಮಂಡಳಿಗಳನ್ನು ರಚಿಸಿದರು. ಮಠಗಳಿಗೆ ಕೊಡುಗೆ ನೀಡಿದರು. ಪರಿಶಿಷ್ಟರ ಕಾಲನಿಗಳಲ್ಲಿ ಮೂಲಸೌಲಭ್ಯ ಕಲ್ಪಿಸಿದರು. ಯಾವುದೇ ಯೋಜನೆಯನ್ನೂ ಜಾತಿ ಆಧಾರದ ಮೇಲೆ ಜಾರಿಗೆ ತರಲಿಲ್ಲ.   ಲೋಕಿಕೆರೆ ನಾಗರಾಜ, ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ  ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net