ವೀರಶೈವ ಒಳಪಂಗಡ ಪ್ರಮುಖರ ಸಭೆ ಶನಿವಾರ

RAJSHEKHAR-BJP.jpg
Published on

ದಾವಣಗೆರೆ :  ಬಿಜೆಪಿಗೆ ವೀರಶೈವ ಲಿಂಗಾಯತರ ಮತಗಳನ್ನು ಕ್ರೋಡೀಕರಿಸುವ ಉದ್ದೇಶದಿಂದ ದಾವಣಗೆರೆ, ಚಿತ್ರದುರ್ಗ ಮತ್ತು ಹಾವೇರಿ ಜಿಲ್ಲೆಗಳ, ಸಮಾಜದ ಎಲ್ಲ ಒಳಪಂಗಡಗಳ ಪ್ರಮುಖರ ಸಭೆ ಮಾ. 1 ರಂದು ನಗರದಲ್ಲಿ ನಡೆಯಲಿದೆ.  ಬಿಜೆಪಿಯ ಹಾಗೂ ವೀರಶೈವ ಸಮಾಜದ ಮುಖಂಡ ಲೋಕಿಕೆರೆ ನಾಗರಾಜ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.  ಪ್ರತಿ ಜಿಲ್ಲೆಯಿಂದ ನೂರು ಜನರಂತೆ ಮೂರೂ ಜಿಲ್ಲೆಗಳಿಂದ ಒಟ್ಟು 300 ಪ್ರಮುಖರು ಪಾಲ್ಗೊಳ್ಳುವರು. ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು ಮತ್ತೊಬ್ಬ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಮಾಡಾಳು ವಿರೂಪಾಕ್ಷಪ್ಪ ಸೇರಿದಂತೆ ಮಾಜಿ ಶಾಸಕರು, ಸಮಾಜದ ಮುಖಂಡರು ಭಾಗವಹಿಸುವರು. ಸ್ಥಳ ಇನ್ನೂ ಅಂತಿಮಗೊಳಿಸಿಲ್ಲ ಎಂದು ಹೇಳಿದರು.  ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವೀರಶೈವ ಲಿಂಗಾಯತ ಸಮಾಜದ ಪ್ರಶ್ನಾತೀತ ಜನ ನಾಯಕರಾಗಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೂ ಸಮುದಾಯದ ಬೆಂಬಲವಿದೆ. ಇದನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಮುಂಬರುವ ದಿನಗಳಲ್ಲಿ ರಾಜ್ಯಮಟ್ಟದ ದೊಡ್ಡ ಸಮಾವೇಶವನ್ನು ಹಮ್ಮಿಕೊಳ್ಳಲು ಚಿಂತನೆ ನಡೆದಿದೆ ಎಂದು ತಿಳಿಸಿದರು.  ಅದಕ್ಕೆ ಪೂರ್ವಭಾವಿಯಾಗಿ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ವೀರಶೈವ ಲಿಂಗಾಯತ ಒಳ ಪಂಗಡಗಳ ಪ್ರಮುಖರ ಸಭೆ ನಡೆಸಲಾಗುವುದು. ಸಂಘಟನೆ ದೃಷ್ಟಿಯಿಂದ ಇದು ಪಕ್ಷಕ್ಕೆ ನೆರವಾಗಲಿದೆ ಎಂದು ಹೇಳಿದರು.  ಬೆಂಗಳೂರಿನಲ್ಲಿ ಮಂಗಳವಾರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಣದ ಸಭೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ವೀರೇಶ ಹನಗವಾಡಿ, ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧ ಮಾತನಾಡಿದ್ದು ಸರಿಯಲ್ಲ ಎಂದರು.  ವೀರೇಶ ಅವರು ಸಂಘಟನೆಗೆ ಯಾವುದೇ ರೀತಿಯ ಕೊಡುಗೆ ನೀಡಿಲ್ಲ. ಅವರು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಲು, ರಾಜಕೀಯದಲ್ಲಿ ಗುರುತಿಸಿಕೊಳ್ಳಲು ಬಿಎಸ್‌ವೈ ಅವರೇ ಕಾರಣ ಎಂದು ತಿಳಿಸಿದರು.  ವೀರಶೈವ ಸಮಾಜದ ಮುಖಂಡರಾದ ಚಂದ್ರಶೇಖರ ಪೂಜಾರ್, ಧನಂಜಯ ಕಡ್ಲೇಬಾಳ್, ರಾಜು, ಜಯಣ್ಣ, ಬಾತಿ ಶಿವಣ್ಣ, ತೋಟಪ್ಪ ಸುದ್ದಿಗೋಷ್ಠಿಯಲ್ಲಿದ್ದರು.  ...  (ಕೋಟ್)  ರಾಜ್ಯದ ಎಲ್ಲ ವೀರಶೈವ ಲಿಂಗಾಯತ ಒಳ ಪಂಗಡದವರು ಬಿ.ಎಸ್. ಯಡಿಯೂರಪ್ಪ ಅವರಿಗೆ ಬೆಂಬಲ ನೀಡಿದ್ದಾರೆ. ಬಿ.ವೈ. ವಿಜಯೇಂದ್ರ ಅವರಿಗೂ ಅದೇ ಬೆಂಬಲ ಸಿಗಲಿದೆ. ಇದನ್ನು ಮತ್ತೊಮ್ಮೆ ದೃಢೀಕರಿಸುವ ಉದ್ದೇಶದಿಂದ ದಾವಣಗೆರೆ ಅಥವಾ ಬೆಂಗಳೂರಿನಲ್ಲಿ 250 ರಿಂದ 300 ಮಠಾಧೀಶರ ನೇತೃತ್ವದಲ್ಲಿ ಸಮಾವೇಶ ನಡೆಯಲಿದೆ. ಅದಕ್ಕೆ ಪೂರ್ವಭಾವಿಯಾಗಿ ಜಿಲ್ಲೆಗಳಲ್ಲಿ ಪೂರ್ವಭಾವಿ ಸಭೆಗಳನ್ನು ಆಯೋಜಿಸಲಾಗುತ್ತಿದೆ.   ಎನ್. ರಾಜಶೇಖರ್, ಜಿಲ್ಲಾ ಬಿಜೆಪಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net