

ದಾವಣಗೆರೆ : ಪಕ್ಷದ ಮಂಡಲ ಸಮಿತಿಗಳ ರಚನೆಯ ಸಂದರ್ಭದಲ್ಲಿ ಶಿಸ್ತು ಮತ್ತು ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಜಿಲ್ಲಾ ಸಹ ಚುನಾವಣಾಧಿಕಾರಿ ಜವಾಬ್ದಾರಿಯಿಂದ ಯಶವಂತರಾವ್ ಜಾಧವ್ ಅವರನ್ನು ನಿವೃತ್ತಿಗೊಳಿಸಿ ಬಿಜೆಪಿಯ ರಾಜ್ಯ ಚುನಾವಣಾಧಿಕಾರಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಆದೇಶ ಹೊರಡಿಸಿದ್ದಾರೆ. ದೇಶದಾದ್ಯಂತ ಸಂಘಟನಾ ಪರ್ವ ಚಟುವಟಿಕೆಗಳು ನಡೆದುಕೊಂಡು ಬಂದಿವೆ. ಅದರ ಅಂಗವಾಗಿ ತಮ್ಮನ್ನು ಜಿಲ್ಲಾ ಸಹ ಚುನಾವಣಾಧಿಕಾರಿಯನ್ನಾಗಿ ಈ ಹಿಂದೆ ಘೋಷಿಸಲಾಗಿತ್ತು. ಜಿಲ್ಲೆಯ ಮಂಡಲಗಳ ಸಮಿತಿ ರಚನೆಯ ಸಂದರ್ಭದಲ್ಲಿ ನಿಯಮ ಮೀರಿ, ಏಕಪಕ್ಷೀಯವಾಗಿ ಖಾಸಗಿ ಅತಿಥಿ ಗೃಹವೊಂದರಲ್ಲಿ ಸಭೆ ನಡೆಸಿ, ಅಧಿಕಾರ ವ್ಯಾಪ್ತಿ ಮೀರಿ ಸುದ್ದಿಗೋಷ್ಠಿ ಮಾಡಿ, 5 ಮಂಡಲಗಳ ಅಧ್ಯಕ್ಷರನ್ನು ಘೋಷಿಸಿರುವುದು ರಾಜ್ಯ ಸಮಿತಿಯ ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ. ಈ ಏಕಪಕ್ಷೀಯ ನಿರ್ಣಯವು ಪಕ್ಷದ ಶಿಸ್ತು ಮತ್ತು ಚುನಾವಣಾ ನಿಯಮದ ಉಲ್ಲಂಘನೆ ಆಗಿರುವುದರಿಂದ, ವಿಚಾರಣೆಯನ್ನು ಕಾಯ್ದಿರಿಸಿ ತಕ್ಷಣ ಜಾರಿಗೆ ಬರುವಂತೆ ಕ್ರಮ ಕೈಗೊಳ್ಳಲಾಗಿದೆ. ಅನಧಿಕೃತವಾಗಿ ಪ್ರಕಟಿಸಿರುವ ಮಂಡಲ ಸಮಿತಿಯನ್ನು ಅಸಿಂಧು ಎಂದು ಘೋಷಿಸಲಾಗಿದೆ ಎಂದು ಗಣೇಶ್ ಕಾರ್ಣಿಕ್ ಆದೇಶದಲ್ಲಿ ಹೇಳಿದ್ದಾರೆ.