

ದಾವಣಗೆರೆ : ಮಾಜಿ ಸಚಿವ, ಬಿಜೆಪಿ ಹಿರಿಯ ಮುಖಂಡ ಎಸ್.ಎ. ರವೀಂದ್ರನಾಥ್ ಅವರ ಬಗ್ಗೆ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಏಕ ವಚನದಲ್ಲಿ ಮಾತನಾಡಿರುವುದು ಪಕ್ಷದ ಕಾರ್ಯಕರ್ತರಿಗೆ ಬೇಸರ ತಂದಿದೆ. ಆರೋಪ, ಪ್ರತ್ಯಾರೋಪ ಮಾಡುವುದನ್ನು ಬಿಟ್ಟು ಹಿರಿಯ ನಾಯಕರು ಪಕ್ಷ ಕಟ್ಟುವ ಕಾರ್ಯದಲ್ಲಿ ತೊಡಗಿಕೊಳ್ಳಬೇಕಿದೆ ಎಂದು ಮಾಜಿ ಮೇಯರ್ ಬಿ.ಜಿ. ಅಜಯ್ ಕುಮಾರ್ ಹಾಗೂ ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್ ಹೇಳಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಸ್‌ಎಆರ್ ಅವರ ಮಾತುಗಳನ್ನು ಸಿದ್ದೇಶ್ವರ ತಪ್ಪಾಗಿ ಅರ್ಥ ಮಾಡಿಕೊಂಡು ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಇದು ಅವರಿಗೇ ಗೌರವ ತರುವುದಿಲ್ಲ. ಜಿಲ್ಲೆಯಲ್ಲಿ ಪಕ್ಷ ಬಲಿಷ್ಠವಾಗಿದೆ ಎಂದರೆ ಅದಕ್ಕೆ ಕಾರಣ ರವೀಂದ್ರನಾಥ್. ಅವರು ಪಕ್ಷ ಕಟ್ಟಿದ್ದರಿಂದಲೇ ಜಿ.ಎಂ. ಸಿದ್ದೇಶ್ವರ 4 ಬಾರಿ ಸಂಸದರಾಗಿದ್ದಾರೆ. ಇದನ್ನು ಮರೆಯಬಾರದು ಎಂದರು. ಈಗಾಗಲೆ ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಪಕ್ಷ ಸೋತಿದೆ. ಆದರೆ, ಮುಂದೆ ಕಾರ್ಯಕರ್ತರ ಚುನಾವಣೆಗಳು (ಸ್ಥಳೀಯ ಸಂಸ್ಥೆ) ಬರಲಿವೆ. ಮುಂದಿನ ಸಾರ್ವತ್ರಿಕ ಚುನಾವಣೆಗಳಲ್ಲಿ ಬಿಜೆಪಿ ಮತ್ತೆ ಜಿಲ್ಲೆಯಲ್ಲಿ ಹಿಡಿತ ಸಾಧಿಸಬೇಕೆಂದರೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪಕ್ಷದ ಕಾರ್ಯಕರ್ತರನ್ನು ಗೆಲ್ಲಿಸಬೇಕಿದೆ ಎಂದರು. ಹರಿಹರ ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಪಾಲಿಕೆ ಸದಸ್ಯರಾದ ಕೆ.ಎಂ. ವಿರೇಶ್, ನಾಗರಾಜ್, ಪಕ್ಷದ ಅಂಜಿನಪ್ಪ, ವಾಟರ್ ಮಂಜುನಾಥ, ಎನ್.ಎಚ್. ಹಾಲೇಶ್, ಪ್ರವೀಣ್ ಜಾಧವ್, ಮಂಜುನಾಥ್, ಜಯಣ್ಣ ಇದ್ದರು.