ಅಧಿಕಾರದಲ್ಲಿದ್ದರೆ ಆಡಳಿತ ದುರುಪಯೋಗ ಸಾಧ್ಯತೆ

dvg-bjp_20240927012017158.jpg
Published on

ದಾವಣಗೆರೆ  ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಎಫ್‌ಐಆರ್ ದಾಖಲು ಮಾಡಲು ಲೋಕಾಯುಕ್ತಕ್ಕೆ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಒತ್ತಾಯಿಸಿದರು.  ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಮುಂದುವರಿದರೆ ಆಡಳಿತ ಯಂತ್ರ ದುರುಪಯೋಗವಾಗಲು ಆವಕಾಶವಾಗಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.  ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಇದು ನೈತಿಕತೆ ಹಾಗೂ ಗೌರವದ ಪ್ರಶ್ನೆ. ಕೋರ್ಟ್ ತೀರ್ಪು ನೀಡಿದ ನಂತರ ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳುವುದು ಶೋಭೆ ತರುವುದಿಲ್ಲ, ಅವರ ಘನತೆಗೆ ದಕ್ಕೆ ತರಲಿದೆ. ಆರೋಪಕ್ಕೆ ಸಂಬಂಧಿಸಿದಂತೆ ತನಿಖೆಯಾಗಲಿ. ಮೊದಲು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.  2009-10ರಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ಲೋಕಾಯುಕ್ತದಿಂದ ಆರೋಪ ಬಂದ ಸಂದರ್ಭದಲ್ಲಿ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ಮುಖಂಡರು ಬಿಎಸ್‌ವೈ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಹೋರಾಟ ಮಾಡಿದ್ದರು. ಅಂದು ಅವರಾಡಿದ ಮಾತುಗಳನ್ನು ನಾವು ಇಂದು ನೆನಪಿಸುತ್ತಿದ್ದೇವೆ. ರಾಜ್ಯದಲ್ಲಿ ಯಡಿಯೂರಪ್ಪ ಅವರಿಗೊಂದು ನ್ಯಾಯ, ಸಿದ್ದರಾಮಯ್ಯನವರಿಗೊಂದು ನ್ಯಾಯವಾ? ಎಂದು ಪ್ರಶ್ನಿಸಿದರು.  ಮುಡಾ ನಿವೇಶನ ಪ್ರಕರಣ ಬಯಲಿಗೆ ಬಂದ ನಂತರ ಸಚಿವ ಬೈರತಿ ಸುರೇಶ್ ಅವರು ರಾತ್ರೋರಾತ್ರಿ ವಿಶೇಷ ವಿಮಾನದಲ್ಲಿ ಮೈಸೂರಿಗೆ ಹೋಗಿ ಅಧಿಕಾರಿಗಳ ಜತೆ ಚರ್ಚೆ ಮಾಡಿ ಬಂಡಲ್‌ಗಟ್ಟಲೇ ಎಲ್ಲ ದಾಖಲೆಗಳನ್ನು ಬೆಂಗಳೂರಿಗೆ ತಂದಿದ್ದರು. ಆದರೆ, ಸಿದ್ದರಾಮಯ್ಯ ಒಂದೇ ಒಂದು ಕಪ್ಪುಚುಕ್ಕೆ ಇಲ್ಲ ಎಂದು ಹೇಳುತ್ತಿದ್ದಾರೆ. ಅದರ ಮೇಲೆ ಬಿಳಿ ಬಣ್ಣ ಹಚ್ಚಿದ್ದಾರೆ ಎಂದು ಟೀಕಿಸಿದರು.  ಸಿದ್ದರಾಮಯ್ಯ ಅವರು ಮುಡಾ ಹಗರಣ ಕುರಿತು ಅಧಿವೇಶನದಲ್ಲಿ ಮುಕ್ತ ಚರ್ಚೆಗೆ ಅವಕಾಶ ನೀಡಿದ್ದರೆ ಮೈಸೂರಿಗೆ ಪಾದಯಾತ್ರೆ ನಡೆಯುತ್ತಿರಲಿಲ್ಲ. ವಾಲ್ಮೀಕಿ ನಿಗಮದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದಿದ್ದ ಸಿದ್ದರಾಮಯ್ಯನವರು ಆನಂತರ ಸದನದಲ್ಲೇ ಅದನ್ನು ಒಪ್ಪಿಕೊಂಡಿದ್ದರು. ಪಾದಯಾತ್ರೆ ಹಾಗೂ ಹೋರಾಟದ ಪ್ರತಿಫಲ ಯಶಸ್ವಿಯಾಗಿದೆ ಎಂದು ಹೇಳಿದರು.  ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಕುಟುಂಬದ ಸದಸ್ಯರೇ ಫಲಾನುಭವಿಗಳು ಎಂದು ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ. ಕಾಂಗ್ರೆಸ್ ಹೈಕಮಾಂಡ್ ಬಲಿಷ್ಠ ಆಗಿದ್ದರೆ ಸಿದ್ದರಾಮಯ್ಯ ಅವರ ರಾಜೀನಾಮೆ ಪಡೆಯಬೇಕು. ನ್ಯಾಯಾಲಯದಲ್ಲಿ ಈ ಬಗ್ಗೆ ಪ್ರಶ್ನೆ ಮಾಡಲು ಅವಕಾಶವಿದ್ದು, ಅವರು ನಿರಪರಾಧಿ ಎಂದು ಸಾಬೀತಾದರೆ ಮತ್ತೆ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಲಿ ಎಂದರು.  ಕಾಂಗ್ರೆಸ್‌ನಲ್ಲಿ ಬಹಳಷ್ಟು ಜನ ಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ. ಸರ್ಕಾರದ ಪತನ ನಿಶ್ಚಿತ. ಬಿಜೆಪಿಯವರು ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸಿಲ್ಲ. ಯಾವುದೇ ಸಬೂಬು ಹೇಳದೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಬಿಜೆಪಿ ಹಂತ ಹಂತವಾಗಿ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.  ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್, ಪಾಲಿಕೆ ಸದಸ್ಯ ಬಿ.ಜೆ. ಅಜಯ್‌ಕುಮಾರ್, ಬಿ.ಎಂ. ಸತೀಶ್ ಕೊಳೇನಹಳ್ಳಿ, ಧನಂಜಯ್ ಕಡ್ಲೇಬಾಳ್, ಪ್ರವೀಣ್ ಜಾಧವ್ ಕಾಯಪೇಟೆ ಮಂಜುನಾಥ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net