ಕಲ್ಲು ತೂರಾಟ ಪ್ರಕರಣ ಎನ್‌ಐಎ ತನಿಖೆಗೆ ಆಗ್ರಹ

dvg-bjp.jpg
Published on

ದಾವಣಗೆರೆ : ದಾವಣಗೆರೆಯಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವಹಿಸಬೇಕು ಎಂದು ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಆಗ್ರಹಿಸಿದರು.  ಶನಿವಾರ ಇಲ್ಲಿನ ಬಸವನಗರ ಪೊಲೀಸ್ ಠಾಣೆಗೆ ಬಿಜೆಪಿಯ ಇತರ ನಾಯಕರೊಂದಿಗೆ ತೆರಳಿ ಎಸ್ಪಿ ಉಮಾ ಪ್ರಶಾಂತ್ ಅವರೊಂದಿಗೆ ಚರ್ಚಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.  ಕಾಂಗ್ರೆಸ್ ಸರ್ಕಾರ ಬಂದ ನಂತರ ವಿಧಾನಸೌಧದಲ್ಲೇ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆ. ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾಗುತ್ತಿವೆ. ನಗರದಲ್ಲಿ ನಡೆದ ಗಲಭೆಯಲ್ಲಿ ಕಲ್ಲು ತೂರಾಟದ ಜತೆಗೆ ಬಿಯರ್ ಬಾಟಲಿಗಳೂ ಸಿಕ್ಕಿವೆ. ಇದರಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬ ಸತ್ಯಾಂಶ ತಿಳಿಯಬೇಕಾದರೆ ಹೆಚ್ಚಿನ ತನಿಖೆಯ ಅಗತ್ಯವಿದೆ ಎಂದು ತಿಳಿಸಿದರು.  ಘಟನೆ ಸಂಬಂಧ ಅಮಾಯಕರನ್ನು ಬಂಧಿಸಬಾರದು. ತಪ್ಪಿತಸ್ಥರಿಗೆ ಶಿಕ್ಷೆಯಾದರೆ ನಮ್ಮ ವಿರೋಧವಿಲ್ಲ. ಆದರೆ ಯಾರೋ ಹೇಳಿದರೆಂದು ಮನೆಯಲ್ಲಿದ್ದವರನ್ನು ಬಂಧಿಸುವುದು ಸರಿಯಲ್ಲ. ಸತ್ಯಾಸತ್ಯತೆ ಪರಿಶೀಲಿಸಬೇಕು. ಏನೂ ತಪ್ಪು ಮಾಡದವರು ತೊಂದರೆಗೆ ಸಿಲುಕಬಾರದು ಎಂದು ಹೇಳಿದರು.  ಹರಿಹರ ಶಾಸಕ ಬಿ.ಪಿ. ಹರೀಶ್ ಮಾತನಾಡಿ, 15, 16 ವರ್ಷದ ಹುಡುಗರು ಕಲ್ಲು, ಬಿಯರ್ ಬಾಟಲಿಗಳಿಂದ ಮನೆಯ ಕಿಟಕಿ ಗಾಜುಗಳನ್ನು ಒಡೆದಿದ್ದು ಕಾರು, ಬೈಕುಗಳನ್ನು ಜಖಂ ಗೊಳಿಸಿದ್ದಾಗಿ ಸ್ಥಳೀಯ ಮಹಿಳೆಯರು ಮಾಹಿತಿ ನೀಡಿದರು ಎಂದು ತಿಳಿಸಿದರು.  ಮಾಜಿ ಶಾಸಕ ಎಸ್.ವಿ. ರಾಮಚಂದ್ರ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್. ರಾಜಶೇಖರ್, ಸಂಘ ಪರಿವಾರದ ಮುಖಂಡರಾದ ವಿನಾಯಕ ರಾನಡೆ, ಗು. ರುದ್ರಯ್ಯ, ಮಾಜಿ ಮೇಯರ್ ಎಸ್.ಟಿ. ವೀರೇಶ್, ಮುಖಂಡರಾದ ಯಶವಂತರಾವ್ ಜಾಧವ್, ಶ್ರೀನಿವಾಸ ದಾಸಕರಿಯಪ್ಪ, ವೀರೇಶ ಹನಗವಾಡಿ, ಬಿ.ಎಸ್. ಜಗದೀಶ, ರಾಜನಹಳ್ಳಿ ಶಿವಕುಮಾರ್, ಶಿವನಗೌಡ ಪಾಟೀಲ್ ಇದ್ದರು.  ನಂತರ ಬಿಜೆಪಿ ನಾಯಕರು ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿ, ಕಲ್ಲು ತೂರಾಟ, ಗಲಭೆ ಆರೋಪದಡಿ ಬಂಧಿತರಾದವರನ್ನು ಭೇಟಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net