ಮೀಸಲಾತಿ ಬಗ್ಗೆ ರಾಹುಲ್ ಗಾಂಧಿ ಹೇಳಿಕೆಗೆ ಖಂಡನೆ

dvg-bjp-protest.jpg
Published on

ದಾವಣಗೆರೆ :  ಮೀಸಲಾತಿ ಕುರಿತು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ನೀಡಿರುವ ಹೇಳಿಕೆ ಖಂಡಿಸಿ ಜಿಲ್ಲಾ ಬಿಜೆಪಿಯಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.  ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ಆರಂಭಿಸಿ, ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿದ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಮನವಿ ಪತ್ರ ಸಲ್ಲಿಸಿದರು.  ರಾಹುಲ್ ಗಾಂಧಿ ಅಮೆರಿಕ ಪ್ರವಾಸದ ವೇಳೆ, ಮೀಸಲಾತಿ ರದ್ದುಪಡಿಸುವುದಾಗಿ ಮನದಾಳದ ಮಾತನ್ನು ಹೇಳಿದ್ದಾರೆ. ಅವರ ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.  ಕಾಂಗ್ರೆಸ್ ಪಕ್ಷ ಸದಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಮೀಸಲಾತಿಯ ವಿರೋಧಿ ನಡೆಯನ್ನು ಅನುಸರಿಸಿಕೊಂಡು ಬಂದಿದೆ ಎಂದು ದೂರಿದರು.  ಮೀಸಲಾತಿಯು ದಲಿತರ ಜನ್ಮಸಿದ್ಧ ಹಕ್ಕು. ಅದನ್ನು ಕಸಿದುಕೊಳ್ಳಲು ಬಿಜೆಪಿ ಬಿಡುವುದಿಲ್ಲ. 70 ವರ್ಷಗಳಿಂದ ಕಾಂಗ್ರೆಸ್ ದಲಿತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತ ಬಂದಿದೆ. ದಲಿತರ ಶ್ರೇಯೋಭಿವೃದ್ಧಿಗಾಗಿ ಸಮಗ್ರ ನೀತಿಯನ್ನು ರೂಪಿಸುವಲ್ಲಿ ಆ ಪಕ್ಷ ವಿಫಲವಾಗಿದೆ, ಈ ಸಮುದಾಯವನ್ನು ಕೇವಲ ಮತ ಬ್ಯಾಂಕ್ ರೂಪದಲ್ಲಿ ಕಾಣುತ್ತಿದೆ ಎಂದು ಆರೋಪಿಸಿದರು.  ಮೀಸಲಾತಿಯಿಂದ ಅನರ್ಹ ಜನರು ಅಧಿಕಾರಿಗಳಾಗುತ್ತಾರೆ ಎಂದು ನೆಹರು ಹೇಳಿದ್ದರು. ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಎರಡು ಬಾರಿ ಚುನಾವಣೆಯಲ್ಲಿ ಸೋಲಿಸಿದ ಪಕ್ಷ ಕಾಂಗ್ರೆಸ್. ಸಂವಿಧಾನವನ್ನು ಬರೆದ ಅಂಬೇಡ್ಕರ್ ಅವರಿಗೆ ಆಗ ಅಪಮಾನ ಮಾಡಲಾಗಿತ್ತು. ಈಗ ಮೀಸಲಾತಿ ರದ್ದುಪಡಿಸುವುದಾಗಿ ಹೇಳಿರುವುದು ಖಂಡನೀಯ ಎಂದರು.  ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರೂ ಸಹ ಮೀಸಲಾತಿಯ ವಿರೋಧಿ ಹೇಳಿಕೆಗಳನ್ನು ನೀಡಿದ್ದರು. ಕಾಕಾ ಕಾಲೇಲ್ಕರ್ ಮತ್ತು ಡಿ.ಪಿ. ಮಂಡಲ್ ಸಮಿತಿಯ ವರದಿಗಳನ್ನು ಕಾಂಗ್ರೆಸ್ ಸರ್ಕಾರ ಕಸದ ಬುಟ್ಟಿಗೆ ಎಸೆದಿತ್ತು ಎಂದು ಆರೋಪಿಸಿದರು.  ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಸಂವಿಧಾನಕ್ಕೆ 106 ತಿದ್ದುಪಡಿಗಳನ್ನು ತಂದಿತ್ತು. ಆ ಪಕ್ಷದವರು ನಿರಂತರವಾಗಿ ಸಂವಿಧಾನಕ್ಕೆ ಅಗೌರವ ತೋರುತ್ತ ಬಂದಿದ್ದಾರೆ ಎಂದು ದೂರಿದರು.  ಕಳೆದ ಲೋಕಸಭಾ ಚುನಾವಣೆಯ ಬಿಜೆಪಿಯ ಪರಾಜಿತ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಮಾಜಿ ಶಾಸಕರಾದ ಎಚ್.ಪಿ. ರಾಜೇಶ್, ಎಸ್.ವಿ. ರಾಮಚಂದ್ರ, ಬಸವರಾಜ ನಾಯ್ಕ, ಪಕ್ಷದ ಎಸ್ಪಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ಪಕ್ಷದ ಮುಖಂಡರಾದ ಲೋಕಿಕೆರೆ ನಾಗರಾಜ, ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ಮಾಜಿ ಮೇಯರ್ ಎಸ್.ಟಿ. ವೀರೇಶ್, ಬಿ.ಎಂ. ಸತೀಶ್, ಬಿ.ಎಸ್. ಜಗದೀಶ್, ಅಣಬೇರು ಜೀವನಮೂರ್ತಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net