ನಾಯಕರ ಅಸಹಕಾರದಿಂದ ದಾವಣಗೆರೆ ಕ್ಷೇತ್ರದಲ್ಲಿ ಸೋಲು

GM-SIDDESHWAR.jpg
Published on

ದಾವಣಗೆರೆ : ರಾಜ್ಯ ಮತ್ತು ಜಿಲ್ಲಾ ನಾಯಕರ ಅಸಹಕಾರದಿಂದ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಸೋಲಾಯಿತು ಎನ್ನುವ ಮೂಲಕ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಅಸಮಾಧಾನ ಹೊರ ಹಾಕಿದರು.  ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸೋಲಲು ಕಾರಣವೇನು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಮನದಾಳದ ಮಾತುಗಳನ್ನು ಹೊರ ಹಾಕಿದರು.  ನಮ್ಮ ಚುನಾವಣೆ ಸಂದರ್ಭದಲ್ಲಿ ರಾಜ್ಯ ಮತ್ತು ಜಿಲ್ಲಾ ನಾಯಕರು ಬಂದು ನಾಟಕ ಮಾಡಿ ಹೋದರು. ನನಗೆ ಮಾತನಾಡಲು ಬಿಡಲಿಲ್ಲ. ಅವಕಾಶ ನೀಡಿದ್ದರೆ ಸರಿಯಾಗಿ ಹೇಳುತ್ತಿದ್ದೆ. ಎಲ್ಲವನ್ನೂ ಸರಿಪಡಿಸಬೇಕಾಗಿದ್ದ ನಾಯಕರು ಒಂದೇ ಕಡೆಯ ಮಾತುಗಳನ್ನು ಕೇಳಿ ತಪ್ಪು ಅಭಿಪ್ರಾಯ ಮೂಡಿಸಿಕೊಂಡು ಹೋದರು. ಅದರಿಂದಾಗಿ ನಾವು ಸೋತೆವು. ಯಾರ‌್ಯಾರು ಏನೇನು ಮಾಡಿದರು ಎಂಬುದು ಎಲ್ಲರಿಗೂ ತಿಳಿದಿದೆ ಎಂದರು.  ಜಿಲ್ಲಾ ಬಿಜೆಪಿ ಒಡೆದ ಮನೆಯಾಗಿರುವುದು ನಿಜ. ರಾಜ್ಯದವರು ಬಂದು ಸರಿ ಮಾಡಬೇಕು. ನನ್ನ ಜನ್ಮದಿನ ಹಾಗೂ ಮತದಾರರಿಗೆ ಅಭಿನಂದನೆ ಸಲ್ಲಿಸುವಾಗ ಯಾರು ಬಂದಿದ್ದರು ಎಂದು ಪ್ರಶ್ನಿಸಿದರು.  ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷವನ್ನು ಗೆಲ್ಲಿಸುತ್ತೇವೆ. ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿಯುತ್ತೇವೆ. ಅದಕ್ಕೂ ಈ ವಿಚಾರಕ್ಕೂ ಸಂಬಂಧವಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net