

ದಾವಣಗೆರೆ: ಕೌನ್ಸಿಲ್ ನಿರ್ಣಯ ಹೊರತಾಗಿ ನಗರದ ಹಲವೆಡೆ ಜಲಸಿರಿ ಯೋಜನೆ ಬಿಲ್ ನೀಡಲಾಗಿದ್ದರೂ ಮೇಯರ್ ಹಾಗೂ ಪಾಲಿಕೆ ಕಾಂಗ್ರೆಸ್ ಸದಸ್ಯರು ಬಿಲ್ ನೀಡಿಲ್ಲ ಎಂದು ಹೇಳಿಕೆ ನೀಡಿರುವುದು ಹಾಸ್ಯಾಸ್ಪದ ಎಂದು ಪಾಲಿಕೆ ವಿಪಕ್ಷನಾಯಕ ಕೆ. ಪ್ರಸನ್ನಕುಮಾರ್ ದೂರಿದರು.
ಮೇ 20ರಂದು ಕೆಯುಐಡಿಎಫ್‌ಸಿಗೆ ಪರಿಮಾಣಾಧಾರಿತ ನೀರಿನ ಬಿಲ್ ನೀಡಲು ಹಾಗೂ ಶುಲ್ಕ ಸಂಗ್ರಹಿಸಲು ಆಯುಕ್ತರು ಆದೇಶಿಸಿದ್ದು, ಹಲವೆಡೆ ಸಾರ್ವಜನಿಕರಿಗೆ ಶುಲ್ಕಪಟ್ಟಿ ನೀಡಲಾಗಿದೆ. ಶುಲ್ಕ ಪಾವತಿಗೆ ಗಡುವನ್ನೂ ವಿಧಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಬಿಲ್ ಪ್ರದರ್ಶಿಸಿದರು.
ಜಲಸಿರಿ ಯೋಜನೆ ಕಾಮಗಾರಿ ಪೂರ್ಣಗೊಂಡ ನಂತರವೇ ಸಾರ್ವಜನಿಕರಿಂದ ಶುಲ್ಕ ಪಾವತಿಸಿಕೊಳ್ಳಬೇಕೆಂದು ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೂ ಬಿಲ್ ನೀಡಲಾಗಿದ್ದು, ಇದೀಗ ಸಚಿವರೊಂದಿಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಸಾಮಾನ್ಯ ಸಭೆಯ ನಿರ್ಣಯಕ್ಕೆ ಗೌರವ ನೀಡಿ ಬಿಲ್ ವಿತರಣೆ ಆದೇಶ ರದ್ದುಪಡಿಸುವ ಬದಲು ಸಚಿವರಿಗೆ ಕಾಯುತ್ತಿರುವ ಪರಿ ನೋಡಿದರೆ ಯಾರು ಅಂಗವಿಕಲರು, ಯಾರು ಆಡಳಿತ ನಡೆಸಲು ವಿಫಲವಾಗಿದ್ದಾರೆ ಎಂಬುದು ಸಾಬೀತಾಗುತ್ತದೆ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ಸರ್ಕಾರ 2023 ಅಕ್ಟೋಬರ್‌ನಲ್ಲಿ ಮಾರುಕಟ್ಟೆ ದರ ದುಪ್ಪಟ್ಟುಗೊಳಿಸಿರುವ ಕಾರಣ ಆಸ್ತಿ ತೆರಿಗೆ ಹೆಚ್ಚಳವಾಗಿದೆ. 2020-21ರ ಮಾರುಕಟ್ಟೆ ದರದಂತೆ ಆಸ್ತಿ ತೆರಿಗೆ ಪಾವತಿಸಿಕೊಳ್ಳಲು ಸರ್ಕಾರ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಪಾಲಿಕೆ ಉಪ ಮೇಯರ್ ಯಶೋದಾ ಯಗ್ಗಪ್ಪ ಮಾತನಾಡಿ, ಕಾಂಗ್ರೆಸ್‌ನವರಿಗೆ ಅಧಿಕಾರ ನಡೆಸಲು ಆಗದಿದ್ದರೆ ಕೂಡಲೇ ರಾಜೀನಾಮೆ ನೀಡಿ ಮಹಿಳೆಯರಿಗೆ ಮೇಯರ್ ಸ್ಥಾನ ನೀಡಲಿ. ಆಡಳಿತ ಮಾಡಿ ತೋರಿಸುತ್ತೇವೆ ಎಂದರು. ಪಾಲಿಕೆ ಸದಸ್ಯ ಕೆ.ಎಂ. ವೀರೇಶ್ ಇದ್ದರು.