ಜಿಲ್ಲಾ ಬಿಜೆಪಿಯಲ್ಲಿ ಮುಗಿಯದ ಭಿನ್ನಮತ

dvg-bjp-15-2.jpg
Published on

ದಾವಣಗೆರೆ : ಜಿಲ್ಲಾ ಬಿಜೆಪಿಯೊಳಗಿನ ಭಿನ್ನಾಭಿಪ್ರಾಯಗಳು ಸದ್ಯಕ್ಕೆ ಬಗೆಹರಿಯುವ ಲಕ್ಷಣಗಳಿಲ್ಲ. ಲೋಕಸಭಾ ಚುನಾವಣೆಗೆ ಮುಂಚೆ ಪಕ್ಷದಲ್ಲಿ ಒಂದು ಗುಂಪು ಅಪಸ್ವರ ಎತ್ತಿತ್ತು. ವರಿಷ್ಠರು ಮಾತುಕತೆ ನಡೆಸಿ ತೇಪೆ ಹಚ್ಚಿದ್ದರು. ಆದರೆ ಅಸಮಾಧಾನ ಮಾತ್ರ ಬೂದಿ ಮುಚ್ಚಿದ ಕೆಂಡದಂತಿತ್ತು. ದಾವಣಗೆರೆ ಕ್ಷೇತ್ರ ಕೈಬಿಟ್ಟು ಹೋದ ನಂತರ ಕಮಲ ಪಾಳಯದ ಮತ್ತೊಂದು ಗುಂಪು ಈಗ ತಿರುಗಿ ಬಿದ್ದಿದೆ.
 ಹರಿಹರ ಕ್ಷೇತ್ರದ ಶಾಸಕ ಬಿ.ಪಿ. ಹರೀಶ್ ಮತ್ತು ಜಿಲ್ಲೆಯ ಇತರ ಮುಖಂಡರ ನಿಯೋಗ ಶನಿವಾರ ಬೆಂಗಳೂರಿನಲ್ಲಿ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹಾಗೂ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಭೇಟಿ ಮಾಡಿ, ಜಿಲ್ಲೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಮನವಿ ಸಲ್ಲಿಸಿತು.
 ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಗಾಯತ್ರಿ ಸಿದ್ದೇಶ್ವರ ಅವರು ಸೋಲಲು ಕಾರಣವಾದ ಅಂಶಗಳ ಬಗ್ಗೆ ನಿಯೋಗ ವರಿಷ್ಠರಿಗೆ ಮನದಟ್ಟು ಮಾಡಿತು. ಮಾಜಿ ಸಚಿವರಾದ ಎಸ್.ಎ. ರವೀಂದ್ರನಾಥ್, ಎಂ.ಪಿ. ರೇಣುಕಾಚಾರ್ಯ ಸೇರಿ ಅಸಮಾಧಾನಿತರ ಬಣದಲ್ಲಿದ್ದ ನಾಯಕರು ನಡೆದುಕೊಂಡ ರೀತಿಯ ಬಗ್ಗೆ ದೂರು ಸಲ್ಲಿಸಿದರು.
 ಪಕ್ಷದ ಅಭ್ಯರ್ಥಿಯನ್ನು ಬದಲಾವಣೆ ಮಾಡಬೇಕು ಎಂದು ಆ ಬಣದವರು ಪಟ್ಟು ಹಿಡಿದು ಗೊಂದಲ ಸೃಷ್ಟಿಸಿದರು. ವರಿಷ್ಠರು ಸಂಧಾನ ಮಾಡಿದ ನಂತರವೂ ಚುನಾವಣೆಯಲ್ಲಿ ಪೂರ್ಣ ಮನಸ್ಸಿನಿಂದ ಕೆಲಸ ಮಾಡಲಿಲ್ಲ. ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಮೇಲ್ನೋಟಕ್ಕೆ ಪ್ರಚಾರದಲ್ಲಿ ಭಾಗಿಯಾದವರಂತೆ ಕಂಡರೂ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರಯತ್ನಿಸಲಿಲ್ಲ ಎಂದು ನಿಯೋಗದಲ್ಲಿದ್ದವರು ಆರೋಪಿಸಿದರು.
 ಕ್ಷೇತ್ರದಲ್ಲಿ ಪಕ್ಷದ ಪರವಾಗಿ ಕೆಲಸ ಮಾಡದವರು ಮೋದಿ ಪ್ರಮಾಣವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳಿದ್ದು ವಿಪರ್ಯಾಸ. ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನು ಪಕ್ಷದಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
 ಲೋಕಸಭಾ ಕ್ಷೇತ್ರದ ಸಂಚಾಲಕ ವೀರೇಶ್ ಹನಗವಾಡಿ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ಎಸ್‌ಟಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ತುಮ್‌ಕೋಸ್ ಮಾಜಿ ಅಧ್ಯಕ್ಷ ಶಿವಕುಮಾರ್, ಎ.ಬಿ. ಹನುಮಂತಪ್ಪ, ಕೆ.ವಿ. ಚನ್ನಪ್ಪ ಇದ್ದರು.
 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net