ಬಿತ್ತನೆ ಬೀಜ ದರ ಏರಿಕೆ ವಿರೋಧಿಸಿ ಬೀದಿಗಿಳಿದ ಬಿಜೆಪಿ

dvg-bjp-protest-29.jpg
Published on

ದಾವಣಗೆರೆ : ಬಿತ್ತನೆ ಬೀಜ ದರ ಏರಿಕೆ ವಿರೋಧಿಸಿ ಬಿಜೆಪಿ ಜಿಲ್ಲಾ ರೈತ ಮೋರ್ಚಾದ ಕಾರ್ಯಕರ್ತರು  ಕೃಷಿ ಇಲಾಖೆಯೆದುರು ಸೋಮವಾರ ಪ್ರತಿಭಟನೆ ನಡೆಸಿ ಕೃಷಿ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
 ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ್ ಮಾತನಾಡಿ, ಗ್ಯಾರಂಟಿ ಯೋಜನೆ ಸರಿದೂಗಿಸಲು, ರಾಜ್ಯ ಸರ್ಕಾರ ಬಡ ರೈತರ ಮೇಲೆ ಬೆಲೆ ಏರಿಕೆಯ ಬ್ರಹ್ಮಾಸ್ತ್ರ  ಪ್ರಯೋಗಿಸುತ್ತಿದೆ ಎಂದು  ಆಕ್ರೋಶ ವ್ಯಕ್ತಪಡಿಸಿದರು.
 ಕಳೆದೊಂದು ವರ್ಷದಿಂದ ರೈತರು ಬರಕ್ಕೆ ನಲುಗಿದ್ದಾರೆ. ಇಂಥ ಸಂದರ್ಭದಲ್ಲಿ  ಬಿತ್ತನೆ ಬೀಜಗಳ ದರ ಹೆಚ್ಚಿಸಿರುವುದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಈ ಸಂದರ್ಭದಲ್ಲಿ  ರೈತರ ನೆರವಿಗೆ ಬರಬೇಕಿದ್ದ ಸರ್ಕಾರ ಬಿತ್ತನೆ ಬೀಜದ ದರ ಏರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
  ಇತ್ತೀಚೆಗೆ ಸುರಿದ ಮಳೆಯಿಂದ ರೈತರು ಭೂಮಿ ಹದಗೊಳಿಸಿಕೊಂಡು ಕಾಯುತ್ತಿದ್ದಾರೆ. ಈ ಕೂಡಲೇ ಕಡಿಮೆ ದರದಡಿ ಬಿತ್ತನೆ ಬೀಜ ಪೂರೈಸುವ ಮೂಲಕ ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.
 ಕಾಳಸಂತೆಯಲ್ಲಿ ಕಳಪೆ ಬೀಜ ಮಾರುತ್ತಿದ್ದರೂ ಅಧಿಕಾರಿಗಳು ಜಾಣಮೌನಕ್ಕೆ ಶರಣಾಗಿದ್ದಾರೆ ಎಂದು ಆರೋಪಿಸಿದರು.
 ರೈತ ಮೋರ್ಚಾ ಮುಖಂಡ ಲೋಕಿಕೆರೆ ನಾಗರಾಜ ಮಾತನಾಡಿ,  ಮುಂದಿನ  ವಾರದೊಳಗೆ ಬಿತ್ತನೆ ಬೀಜದ ದರ ಕಡಿಮೆ ಮಾಡದಿದ್ದರೆ ಕೃಷಿ ಇಲಾಖೆ ಕಚೇರಿಗೆ ಬೀಗ ಜಡಿದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
 ಬಿಜೆಪಿ ವಕ್ತಾರ ಕೊಳೇನಹಳ್ಳಿ ಬಿ.ಎಂ. ಸತೀಶ್ ಮಾತನಾಡಿ, ಸರ್ಕಾರ ಒಂದು ಕೈಯಲ್ಲಿ ಗ್ಯಾರಂಟಿ ಕೊಟ್ಟು ಮತ್ತೊಂದು ಕೈಯಲ್ಲಿ ಸುಲಿಗೆ ಮಾಡುವ ತಂತ್ರ ಅನುಸರಿಸುತ್ತಿದೆ. ಬೆಲೆ ಏರಿಸಿ  ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುತ್ತಿದೆ ಎಂದು ದೂರಿದರು.
  ಬೆಲೆ ಏರಿಕೆ ನಿಯಂತ್ರಿಸಬೇಕು, ಗುಣಮಟ್ಟದ ಬಿತ್ತನೆ ಬೀಜ ದಾಸ್ತಾನು ಜತೆಗೆ  ಪೂರೈಕೆಗೆ  ಕ್ರಮ ಕೈಗೊಳ್ಳಬೇಕು, ನಕಲಿ ಬೀಜಗಳ ಹಾವಳಿ ನಿಯಂತ್ರಿಸುವಂತೆ ಮನವಿ ಮಾಡಿದರು.
  ಮಾಜಿ ಶಾಸಕ ಬಸವರಾಜನಾಯ್ಕ, ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್,  ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ನಾಯ್ಕ್, ರಮೇಶನಾಯ್ಕ, ಬೇತೂರು ಸಂಗನಗೌಡ್ರು, ಅಣಬೇರು ಶಿವಪ್ರಕಾಶ್, ರಘುನಂದನ ಅಂಬರಕರ್, ಆನೆಕೊಂಡದ ರೇವಣಸಿದ್ದಪ್ಪ,  ಅಂಬರಕರ್, ಪಿ.ಎಸ್. ಬಸವರಾಜು, ವೀರೇಶ ಪೈಲ್ವಾನ್, ಆರ್.ಎಲ್. ಶಿವಪ್ರಕಾಶ್, ಅಣಜಿ ಗುಡ್ಡೇಶ್, ಜಿ.ಎಸ್. ಶ್ಯಾಮ್, ಕೆ.ಜಿ. ಕಲ್ಲಪ್ಪ ಇತರರಿದ್ದರು.
 
 ಫೋಟೋ: ಬಿಜೆಪಿ ಪ್ರೊಟೆಸ್ಟ್
 ಬಿತ್ತನೆ ಬೀಜದ ದರ ಏರಿಕೆ ವಿರೋಧಿಸಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಕಾರ್ಯ ಕರ್ತರು ದಾವಣಗೆರೆ  ಕೃಷಿ ಇಲಾಖೆ ಎದುರು  ಪ್ರತಿಭಟನೆ ನಡೆಸಿದರು. ಪಕ್ಷದ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್, ಮಾಜಿ ಶಾಸಕ ಬಸವರಾಜನಾಯ್ಕ, ಬಿಜೆಪಿ ವಕ್ತಾರ ಕೊಳೇನಹಳ್ಳಿ ಬಿ.ಎಂ. ಸತೀಶ್, ಲೋಕಿಕೆರೆ ನಾಗರಾಜ ಇತರರಿದ್ದರು.
 .............
 ಸಬ್ಸಿಡಿ ಹೆಚ್ಚಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಿ
 ಮಲೇಬೆನ್ನೂರು: ಪ್ರಸಕ್ತ ಮುಂಗಾರು ಹಂಗಾಮಿಗೆ ರಾಜ್ಯ ಸರ್ಕಾರ ರೈತ ಸಂಪರ್ಕ ಕೇಂದ್ರಗಳ ಮೂಲಕ ನೀಡುವ ರಿಯಾಯಿತಿ ದರದ ಬಿತ್ತನೆ ಬೀಜಗಳ ದರ ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿ ಬರದಿಂದ ಕಂಗೆಟ್ಟಿರುವ ರೈತರ ಗಾಯದ ಮೇಲೆ ಬರೆ ಎಳೆದಿದೆ ಎಂದು ಶಾಸಕ ಬಿ.ಪಿ. ಹರೀಶ್ ದೂರಿದರು.
 ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದರು.
 ಕಾಂಗ್ರೆಸ್ ಸರ್ಕಾರ ಮುಂಗಾರು ಬಿತ್ತನೆ ಬೀಜಗಳ ದರವನ್ನು ಶೇ.30ರಿಂದ ಶೇ. 70ರಷ್ಟು ಏರಿಕೆ ಮಾಡಿದೆ. ಪ್ರಮುಖ ಬೆಳೆಗಳಾದ ತೊಗರಿ, ಹೆಸರು, ಮೆಕ್ಕೆಜೋಳ ಬಿತ್ತನೆ ಬೀಜಗಳ ದರ ಹೆಚ್ಚಳವಾಗಿದೆ. ಹೀಗಾಗಿ, ರೈತರು ಸಾಲ ಮಾಡುವ ಸ್ಥಿತಿ ಎದುರಾಗಿದೆ ಎಂದರು.
 ಸರ್ಕಾರ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹೆಚ್ಚಿನ ಪ್ರೋತ್ಸಾಹ ಧನ ನೀಡಿ ಬೀಜ ನೀಡಬೇಕಿತ್ತು. ಅದು ಬಿಟ್ಟು ಬೆಲೆ ಹೆಚ್ಚಿಸಿರುವುದು ಸರಿಯಲ್ಲ. ಕಳೆದ ವರ್ಷ ರೈತರು ಸಾಲ ಮಾಡಿ ಬಿತ್ತನೆ ಮಾಡಿದ್ದರು. ಆದರೆ, ಮಳೆ ಆಗದೆ ಬೆಳೆ ಬರಲಿಲ್ಲ. ಈಗ ಹೊಸದಾಗಿ ಬೀಜ ಮತ್ತು ಗೊಬ್ಬರಕ್ಕೆ ಮತ್ತೆ ಸಾಲ ಮಾಡಬೇಕು. ಬೆಲೆ ಹೆಚ್ಚಳ ಮಾಡಿರುವುದು ಮತ್ತೆ ಸಂಕಷ್ಟಕ್ಕೆ ನೂಕಿದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
  ಭೀಕರ ಬರದಿಂದ ರೈತರು ಸಂಕಷ್ಟದಲ್ಲಿ ಇದ್ದಾರೆ. ಸರ್ಕಾರ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಉಚಿತವಾಗಿ ಬೀಜ ನೀಡಬೇಕು. ಇಲ್ಲದಿದ್ದರೆ ಸಬ್ಸಿಡಿ ಹೆಚ್ಚಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಆಗ್ರಹಿಸಿದ್ದಾರೆ.
 ಜೆಡಿಎಸ್ ಜಿಲ್ಲಾಧ್ಯಕ್ಷ ಚಿದಾನಂದಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಐರಣಿ ಅಣ್ಣೇಶ್, ಗ್ರಾಮಾಂತರ ಅಧ್ಯಕ್ಷ ಹಿಂಡಸಗಟ್ಟ ಲಿಂಗರಾಜ್, ಪುರಸಭೆ ಸದಸ್ಯ ಬೆಣ್ಣೆಹಳ್ಳಿ ಸಿದ್ದೇಶ್, ಮುಖಂಡರಾದ ಹಾಲೇಶಣ್ಣ, ಭೋವಿ ಮಂಜಣ್ಣ, ಜಿಗಳಿ ಮಂಜುನಾಥ್ ಗೌಡ, ಯು. ಸಿದ್ದೇಶ್, ಹರಳಹಳ್ಳಿ ಶ್ರೀನಿವಾಸ್, ನಿರಂಜನ್ ಪಿಂಟು, ಕೊಮಾರನಹಳ್ಳಿ ಸುನೀಲ್, ಆನಂದ ಆಚಾರ್, ಒ.ಜಿ. ಮಂಜುನಾಥ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net