

ದಾವಣಗೆರೆ : ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಒಂದು ದಿನವೂ ಬರ ಪರಿಹಾರ ಸಭೆ ನಡೆಸಲಿಲ್ಲ, ಗ್ರಾಮೀಣ ಭಾಗಕ್ಕೆ ಹೋಗಿ ಜನರ ಸಂಕಷ್ಟ ಆಲಿಸಲಿಲ್ಲ. ಈಗ ಪತ್ನಿ ಅಭ್ಯರ್ಥಿ ಎಂದು ಊರೂರು ಸುತ್ತುತ್ತಿದ್ದಾರೆ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಟೀಕಿಸಿದರು.
ಹೊನ್ನಾಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹನುಮಸಾಗರ, ಎಚ್.ಗೋಪಗೊಂಡನಹಳ್ಳಿ, ಹತ್ತೂರು ಗ್ರಾಮಗಳಲ್ಲಿ ಸೋಮವಾರ ಮತಯಾಚನೆ ಮಾಡಿ ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಬರ ತಾಂಡವವಾಡುತ್ತದೆ. ಬರ ಪರಿಹಾರ ನೆಪದಲ್ಲಿ ಆ ಪಕ್ಷದವರು ಕೋಟಿ ಕೋಟಿ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ನಮ್ಮ ಸರ್ಕಾರ ಇಲ್ಲದಿದ್ದರೂ ಬಿಜೆಪಿ ರಾಜ್ಯ ಘಟಕ ತಂಡ ಮಾಡಿಕೊಂಡು ಗ್ರಾಮೀಣ ಭಾಗದಲ್ಲಿ ಬರ ಅಧ್ಯಯನ ಮಾಡಿದೆ. ಸಂಸದ ಜಿ.ಎಂ.ಸಿದ್ದೇಶ್ವರ ಅವರೂ ತಂಡದ ಸದಸ್ಯರಾಗಿ ದಾವಣಗೆರೆ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಕೇಂದ್ರಕ್ಕೆ ವರದಿ ಸಲ್ಲಿಸಿದ್ದಾರೆ. ಜನ ಇದನ್ನು ಮರೆಯಬಾರದು ಎಂದರು.
ಬಿಜೆಪಿ ಸರ್ಕಾರದ 10 ವರ್ಷ, ಕಾಂಗ್ರೆಸ್ ಸರ್ಕಾರದ 60 ವಷರ್ಗಳ ಆಡಳಿತ ಹೋಲಿಕೆ ಮಾಡಿ ಜನ ಬಿಜೆಪಿಯನ್ನು ಒಪ್ಪಿಕೊಂಡಿದ್ದಾರೆ. ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಹೇಳಿದರು.
ಇಡೀ ದೇಶದಲ್ಲಿ ಎನ್‌ಡಿಎ, ಮೋದಿ ಹಾಗೂ ಅಭಿವೃದ್ಧಿ ಪರವಾದ ಅಲೆ ಇದೆ. ದಾವಣಗೆರೆಯಲ್ಲಿ ನಡೆದ ಮೋದಿ ಅವರ ಕಾರ್ಯಕ್ರಮಕ್ಕೆ ಬಂದಿದ್ದ ಜನಸ್ತೋಮ ನೋಡಿ ಕಾಂಗ್ರೆಸ್‌ಗೆ ನಡುಕ ಉಂಟಾಗಿದೆ. ಠೇವಣಿ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ ಎಂದರು.
ದಾವಣಗೆರೆಯಲ್ಲಿ ನಾವು ಅಭಿವೃದ್ಧಿ ಮುಂದಿಟ್ಟುಕೊಂಡು ಮತ ಕೇಳುತ್ತಿದ್ದೇವೆ. ದೇಶದ ರಕ್ಷಣೆ ದೃಷ್ಟಿಯಿಂದ ಮೋದಿ ಅವರೇ ಪ್ರಧಾನಿ ಆಗಬೇಕು ಎನ್ನುವುದು ಕೋಟ್ಯಂತರ ಭಾರತೀಯರ ಆಸೆ. ಇದರಿಂದ ಕಾಂಗ್ರೆಸ್‌ಗೆ ದಿಕ್ಕು ತೋಚದಂತಾಗಿ ಅಪಪ್ರಚಾರವೆಂಬ ಅಸ್ತ್ರ ಬಳಸುತ್ತಿದೆ. ನಮ್ಮ ಜನ ಅದ್ಯಾವುದಕ್ಕೂ ಸೊಪ್ಪು ಹಾಕುವುದಿಲ್ಲ ಎಂದು ತಿಳಿಸಿದರು.
ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಕೇಂದ್ರದಲ್ಲಿ ಮೋದಿ, ದಾವಣಗೆರೆಯಲ್ಲಿ ಗಾಯತ್ರಿ ಸಿದ್ದೇಶ್ವರ ಎಂದು ಲೋಕಸಭಾ ಕ್ಷೇತ್ರದ ಜನ ತೀರ್ಮಾನ ಮಾಡಿದ್ದಾರೆ ಎಂದರು.
ಮೋದಿ ಪ್ರಧಾನಿಯಾದ ಮೆಲೆ ಆಂತಕವಾದಿಗಳಿಗೆ ಎಲ್ಲಿಯೂ ಅವಕಾಶ ಇಲ್ಲದಂತಾಗಿದೆ. ಹೀಗಾಗಿ ನಿಷೇಧಿತ ಸಂಘಟನೆಗಳು ಕಾಂಗ್ರೆಸ್ ಜತೆ ಕೈ ಜೋಡಿಸಿವೆ. ಇದರಿಂದ ಭಯೋತ್ಪಾದಕರ, ಜಿಹಾದಿಗಳ ಅಟ್ಟಹಾಸ ಹೆಚ್ಚಾಗುತ್ತದೆ. ನಮ್ಮ ಮಕ್ಕಳಿಗೆ ಭವಿಷ್ಯ ಇಲ್ಲದಂತಾಗುತ್ತದೆ. ಇದನ್ನು ಪ್ರತಿಯೊಬ್ಬರೂ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.
ಮಂಡಲ ಅಧ್ಯಕ್ಷ ಸುರೇಶ್, ದಾಕ್ಷಾಯಿಣಿ ಸಂಗಮೇಶ್ ನಿರಾಣಿ, ಋತು, ಬಿಜೆಪಿ ಮುಖಂಡ ಮಹೇಶ್, ಶಾಂತರಾಜ್ ಪಾಟೀಲ್, ಕುಬೇರಪ್ಪ, ಸಂತೋಷ್ ಕುಮಾರ್, ಎಲ್.ಕೆ. ಮಂಜಪ್ಪ, ಹನುಮಂತಪ್ಪ, ಅರಕೆರೆ ನಾಗರಾಜ್, ರಂಗನಾಥ್, ಸುರೇಂದ್ರ, ಯೋಗೇಶ್, ಮಂಡಲದ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು, ಬೂತ್ ಮಟ್ಟದ ಅಧ್ಯಕ್ಷರು, ಗ್ರಾಮದ ಬಿಜೆಪಿ ಮುಖಂಡರು ಇದ್ದರು