

ದಾವಣಗೆರೆ : ಬಿಜೆಪಿ ಅಭ್ಯರ್ಥಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೆಸರು ಹೇಳಿ ಮತ ಕೇಳಲು ಯಾವುದೇ ಸಂಕೋಚವಿಲ್ಲ. ಆದರೆ, ಕಾಂಗ್ರೆಸ್ ಪಕ್ಷಕ್ಕೆ ತಾಕತ್ ಇದ್ದರೆ ರಾಹುಲ್ ಗಾಂಧಿ ಹೆಸರಲ್ಲಿ ಮತ ಕೇಳಲಿ ನೋಡೋಣ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಸವಾಲು ಹಾಕಿದರು.
ಇಲ್ಲಿನ ಎಸ್‌ಜೆಎಂ ನಗರ ವ್ಯಾಪ್ತಿಯಲ್ಲಿ ಮತಯಾಚನೆ ನಡೆಸಿ ಮಾತನಾಡಿ, ಮೋದಿಯವರು ನಮ್ಮ ಧೀಮಂತ ನಾಯಕ. ಅವರನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ. ಆದರೆ, ಕಾಂಗ್ರೆಸ್ಸಿಗರಿಗೆ ತಮ್ಮ ನಾಯಕರು ಹಾಗೂ ನಾಯಕತ್ವದ ಬಗ್ಗೆ ಹೇಳಿಕೊಳ್ಳಲು ಯಾವುದೇ ವ್ಯಕ್ತಿ ಇಲ್ಲ ಎಂದು ಎಂದು ಛೇಡಿಸಿದರು.
ಇಡೀ ವಿಶ್ವದ ನಾಯಕರು ನರೇಂದ್ರ ಮೋದಿ ಜೀ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ಎದುರು ನೋಡುತ್ತಿದ್ದಾರೆ. ಆದರೆ, ಯಾವೊಂದು ರಾಷ್ಟ್ರದ ನಾಯಕರೂ ರಾಹುಲ್ ಗಾಂಧಿ ಪ್ರಧಾನಿ ಆಗಬೇಕು ಎಂದು ಬಯಸುತ್ತಿಲ್ಲ. ಒಂದು ವೇಳೆ ಬಯಸಿದರೂ ಅದು ಪಾಕಿಸ್ತಾನದವರು ಹಾಗೂ ಜಿಹಾದಿ ಮನಸ್ಥಿತಿಯವರು ಮಾತ್ರ ಎಂದು ವ್ಯಂಗ್ಯವಾಡಿದರು.
ಮೋದಿ ಅವರು ಪ್ರಧಾನಮಂತ್ರಿಯಾಗಿ ದೇಶದ ಸಾರ್ವಭೌಮತ್ವ, ಸಂವಿಧಾನ, ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕೆಲಸ ಮಾಡಿದ್ದಾರೆ. ತ್ರಿವಳಿ ತಲಾಕ್ ರದ್ದತಿಯಿಂದಾಗಿ ಮುಸ್ಲಿಂ ಸಮುದಾಯದ ವಿದ್ಯಾವಂತ ಯುವತಿಯರು ಇಂದಿಗೂ ಮೋದಿ ಪರ ಇದ್ದಾರೆ ಎಂದು ತಿಳಿಸಿದರು.
ಕರ್ನಾಟಕ ಹೊರತುಪಡಿಸಿದರೆ ಬೇರೆ ರಾಜ್ಯದ ಮುಸ್ಲಿಮರು ಬಿಜೆಪಿ ಹಾಗೂ ಮೋದಿ ಅವರ ಪರ ಇದ್ದಾರೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಮುಸ್ಲಿಮರ ಓಲೈಕೆ ಮಾಡಿಕೊಂಡು ಹಿಂದುಗಳ ಮೇಲೆ ಎತ್ತಿ ಕಟ್ಟುವ ಕೆಲಸ ಮಾಡುತ್ತಿದೆ. ರಾಷ್ಟ್ರ ವಿರೋಧಿ, ಧರ್ಮ ವಿರೋಧಿ ಕಾಂಗ್ರೆಸ್ ಪಕ್ಷವನ್ನು ಪ್ರಜ್ಞಾವಂತರು ಶಾಶ್ವತವಾಗಿ ಮನೆಗೆ ಕಳುಹಿಸಬೇಕು ಎಂದರು.
ಪಾಲಿಕೆ ಮಾಜಿ ಮೇಯರ್ ಬಿ.ಜೆ. ಅಜಯ್ಕುಮಾರ್ ಮಾತನಾಡಿ, ಇಡೀ ದೇಶದಲ್ಲಿಂದು ಮೋದಿ ಪರ ಅಲೆಯಿದೆ. ಜಾತ್ಯತೀತ, ಧರ್ಮಾತೀತವಾಗಿ ಮೋದಿ ಅವರ ಅಭಿವೃದ್ಧಿ ಕಾರ್ಯ ಮೆಚ್ಚಿಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ರಾಜ್ಯವನ್ನು ದಿವಾಳಿ ಮಾಡಿದೆ. ಈಗ ದೇಶ ದಿವಾಳಿ ಮಾಡುವುದಕ್ಕೆ ಮುಂದಾಗಿದೆ ಎಂದು ದೂರಿದರು.
ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟರೆ ಭಯೋತ್ಪಾದಕರನ್ನು ಮನೆಗೆ ಕರೆತಂದು ಸಾಕಿದಂತೆ ಆಗುತ್ತದೆ. ಮತದಾರರು ಯೋಚಿಸಿ ದೇಶದ ಸಮಗ್ರ ಹಾಗೂ ಸಮಸ್ತ ಅಭಿವೃದ್ಧಿಗಾಗಿ ಕೇಂದ್ರದಲ್ಲಿ ಮೋದಿ ಅವರನ್ನು, ದಾವಣಗೆರೆಯಲ್ಲಿ ಗಾಯತ್ರಿ ಅವರನ್ನು ಗೆಲ್ಲಿಸಬೇಕು ಎಂದು ತಿಳಿಸಿದರು.
ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಒಬಿಸಿ ರಾಜ್ಯ ಉಪಾಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ವಿಜಯ್, ರಾಜು, ಶಾರದಮ್ಮ, ಗೀತಾ, ಭಾಗ್ಯಮ್ಮ, ಗ್ಯಾರಳ್ಳಿ ಶಿವಕುಮಾರ್, ಬಿ.ಎಸ್. ಜಗದೀಶ್, ಹನುಮಂತ, ಮಂಡಲದ ಸದಸ್ಯರು, ಬೂತ್ ಮಟ್ಟದ ಅಧ್ಯಕ್ಷರು, ಬಿಜೆಪಿ ಮುಖಂಡರು, ಕಾರ್ಯಕರ್ತರು ಇದ್ದರು.