ಮಾಯಕೊಂಡ ಕ್ಷೇತ್ರದಲ್ಲಿ ಶಿಕ್ಷಣ, ಉದ್ಯೋಗ ಸೃಜನೆಗೆ ಪಣ

bjp_20240427010329030.jpg
Published on

ದಾವಣಗೆರೆ : ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರಿ ಡಿಪ್ಲೊಮಾ ಹಾಗೂ ವೃತ್ತಿಪರ ಕೋರ್ಸ್‌ಗಳ ಪ್ರಾರಂಭಕ್ಕೆ ಒತ್ತು ನೀಡಲಾಗುವುದು ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಹೇಳಿದರು.
 ಆನಗೋಡು, ಬಾಡಾ, ಮಾಯಕೊಂಡ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಶುಕ್ರವಾರ ಮತಬೇಟೆ ನಡೆಸಿ, ಮಾತನಾಡಿದರು.
 ವಿದ್ಯಾರ್ಥಿಗಳಿಗೆ ಗುಣಮಟ್ಟದ ಮತ್ತು ತಾಂತ್ರಿಕ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದ್ದು, ಕೇಂದ್ರ ಸರ್ಕಾರದ ಕೌಶಲ್ಯ ಅಭಿವೃದ್ಧಿ ಕೇಂದ್ರ ಪ್ರಾರಂಭಕ್ಕೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
 ಮಾಯಕೊಂಡ ವಿಧಾನಸಭಾ ಕ್ಷೇತ್ರ ಎಂದಿಗೂ ಬಿಜೆಪಿ ಪರ ಅಲೆ ಇರುವಂತಹ ಕ್ಷೇತ್ರ. ಕಾಂಗ್ರೆಸ್ ಶಾಸಕರು, ಸಚಿವರು ಅಧಿಕಾರಕ್ಕೆ ಬಂದು ವರ್ಷ ಕಳೆದರೂ ಒಂದೇ ಒಂದು ಅಭಿವೃದ್ಧಿ ಕಾರ್ಯ ಮಾಡಿಲ್ಲ. ಕಾಂಗ್ರೆಸ್ ಗ್ಯಾರಂಟಿ ಹೆಸರಿನಲ್ಲಿ ಅಭಿವೃದ್ಧಿ ಶೂನ್ಯ ರಾಜ್ಯ ಮಾಡಲು ಹೊರಟಿದೆ ಎಂದು ವಾಗ್ದಾಳಿ ನಡೆಸಿದರು.
 ಸಂಸದ ಜಿ.ಎಂ. ಸಿದ್ದೇಶ್ವರ ಅವರು ತ್ಯಾವಣಗಿಯಲ್ಲಿ ಬೀಜೋತ್ಪಾದನಾ ಕೇಂದ್ರದ ಬಲವರ್ಧನೆಗೆ 1.50 ಕೋಟಿ ರೂ., ಬಸವಾಪಟ್ಟಣ ಹಾಗೂ ತ್ಯಾವಣಗಿಯಲ್ಲಿ ರೈತ ಸಂಪರ್ಕ ಕೇಂದ್ರ ಕಟ್ಟಡಗಳ ನಿರ್ಮಾಣಕ್ಕೆ 1.20 ಕೋಟಿ ರೂ. ಅನುದಾನ ನೀಡಿದ್ದಾರೆ. ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಸಮುದಾಯ ಭವನ, ಸಹಕಾರ ಸಂಘದ ಕಟ್ಟಡ, ಸಿಸಿ ರಸ್ತೆ, ರಂಗಮಂದಿರ, ಶಾಲಾ ಕೊಠಡಿ, ಶುದ್ಧ ಕುಡಿಯುವ ನೀರಿನ ಘಟಕ, ಬಸ್ ತಂಗುದಾಣ ಸೇರಿ ವಿವಿಧ ಕಾಮಗಾರಿ ಮಾಡಿಸಿದ್ದಾರೆ ಎಂದರು.
 ಮಾಜಿ ಶಾಸಕ ಪ್ರೊ.ಎನ್. ಲಿಂಗಣ್ಣ ಮಾತನಾಡಿ, ಬಿಜೆಪಿ ಕಾರ್ಯಕರ್ತರು ಇನ್ನೂ 10 ದಿನ ಸೈನಿಕರಂತೆ ಪ್ರಧಾನಿ ಮೋದಿ ಹಾಗೂ ಗಾಯತ್ರಿ ಸಿದ್ದೇಶ್ವರ ಅವರ ಪರ ಕೆಲಸ ಮಾಡಬೇಕು ಎಂದರು.
 ಮಾಜಿ ಶಾಸಕ ಬಸವರಾಜ ನಾಯ್ಕ ಮಾತನಾಡಿ, ಪ್ರಧಾನಿ ಮೋದಿ ಅವರು 3ನೇ ಬಾರಿಗೆ ಪ್ರಧಾನಿ ಆಗಬೇಕು ಎಂದು ಇಡೀ ವಿಶ್ವವೇ ಎದುರು ನೋಡುತ್ತಿದೆ. ಅವರ ಕೈ ಬಲಪಡಿಸಲು ದಾವಣಗೆರೆಯಲ್ಲಿ ಗಾಯತ್ರಿ ಅವರನ್ನು ಬಹುಮತದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
 ಬಿಜೆಪಿ ಮುಖಂಡರಾದ ಅಣಬೇರು ಜೀವನಮೂರ್ತಿ, ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಜಿ.ಎಸ್. ಶ್ಯಾಮ್, ಮಂಡಲದ ಅಧ್ಯಕ್ಷ ದೇವೇಂದ್ರಪ್ಪ, ಹನುಮಂತನಾಯ್ಕ, ಮಂಜನಾಯ್ಕ, ಗಂಗಾನಾಯ್ಕ, ಗ್ಯಾರಳ್ಳಿ ಶಿವಕುಮಾರ್, ಹನುಮಂತಪ್ಪ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net