

ದಾವಣಗೆರೆ : ನಗರದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರು ಹರಿಹರ ಶಾಸಕ ಬಿ.ಪಿ. ಹರೀಶ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನಿಸಿರುವುದು ಅತ್ಯಂತ ಖಂಡನೀಯ. ಇದು ಕಾಂಗ್ರೆಸ್ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಗ್ಯಾರಂಟಿ ಯೋಜನೆಗಳಿಗೆ ಸ್ಪಂದಿಸುತ್ತಿಲ್ಲ ಎಂಬ ಮಾತಿಗೆ ಶಾಸಕ ಹರೀಶ್, ಮೋದಿ ಅವರನ್ನು ಕೇಳಿ ಗ್ಯಾರಂಟಿ ಯೋಜನೆ ಮಾಡಿದ್ದೀರಾ? ಅವೈಜ್ಞಾನಿಕವಾಗಿ ಘೋಷಣೆ ಮಾಡಿದ್ದೀರಿ ಎಂದಿದ್ದಕ್ಕ್ಕೆ ಕಾಂಗ್ರೆಸ್‌ನವರು ನಡೆದುಕೊಂಡ ರೀತಿ ಸರಿಯಿಲ್ಲ ಎಂದು ಆಕ್ಷೇಪಿಸಿದರು.
ಪ್ರಸಕ್ತ ದಿನಗಳಲ್ಲಿ ಇಡೀ ವಿಶ್ವದಲ್ಲಿಯೇ ಅಕ್ಕಿಗೆ ಹಾಹಾಕಾರ ಉಂಟಾಗಿದೆ. ದೇಶದಲ್ಲಿ ಪ್ರಕೃತಿ ವಿಕೋಪ ಸೇರಿ ಆಪತ್ಕಾಲದ ಸಂದರ್ಭದಲ್ಲಿ ನೀಡಲು ಅಕ್ಕಿ ಬಫರ್ ಸ್ಟಾಕ್ ಇರಿಸಿಕೊಳ್ಳಲಾಗಿದೆ. ಕಾಂಗ್ರೆಸ್‌ನವರು ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಎಂದರೆ ಹೇಗೆ? ಟೊಮ್ಯಾಟೋ ಪರಿಸ್ಥಿತಿ ಅಕ್ಕಿಗೆ ಬಂದರೆ ದೇಶದ 135 ಕೋಟಿ ಜನರು ಏನು ಮಾಡಬೇಕು? ಎಂದು ಪ್ರಶ್ನಿಸಿದರು.
ಒಳಮೀಸಲಾತಿ ಮೊದಲಾದವುಗಳನ್ನು ಜನರಿಗೆ ಅರ್ಥಮಾಡಿಸುವ ವಿಚಾರದಲ್ಲಿ ಹಾಗೂ ಕಾಂಗ್ರೆಸ್‌ನ ಸುಳ್ಳು ಗ್ಯಾರಂಟಿ ಯೋಜನೆಗಳಿಂದ ನಾವು ಅಧಿಕಾರದಿಂದ ದೂರ ಉಳಿಯಬೇಕಾಯಿತು. ಕಾಂಗ್ರೆಸ್‌ನವರು ಕರ್ನಾಟಕ ಗೆದ್ದ ಮಾತ್ರಕ್ಕೆ ಭಾರತ ಗೆದ್ದಂತಲ್ಲ ಎಂದು ಹೇಳಿದರು.
ದಾವಣಗೆರೆ ಸೇರಿ ರಾಜ್ಯದಲ್ಲಿ ವರ್ಗಾವಣೆ ದಂಧೆ ಹೋಟೆಲ್ ಬಿಲ್ ದರದಂತೆ ಏರುತ್ತಿದೆ. ಸಾವಿರಾರು ಕೋಟಿ ರೂ.ಗಳ ವರ್ಗಾವಣೆ ದಂಧೆ ಆರಂಭಗೊಂಡಿದೆ ಎಂದು ಆರೋಪಿಸಿದರು.
ಜಿಲ್ಲಾ ಸಚಿವರು ಕೇವಲ ಸಿದ್ದರಾಮೋತ್ಸವಕ್ಕೆ ಸೀಮಿತವಾಗದೆ ಒತ್ತುವರಿ ಜಾಗಗಳ ತನಿಖೆಯ ಪುಣ್ಯದ ಕಾರ್ಯಗಳನ್ನು ದಾವಣಗೆರೆಯಿಂದ ಪ್ರಾರಂಭಿಸಲಿ. ಒಳ್ಳೆಯ ಕೆಲಸಗಳಿಗೆ ಖಂಡಿತ ಬೆಂಬಲ ನೀಡುತ್ತೇವೆ ಎಂದರು
ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಮೊನ್ನೆಯ ಕಾರ್ಯಕ್ರಮದಲ್ಲಿ ಜಿಲ್ಲಾ ಸಚಿವರು 15 ಲಕ್ಷ ರೂ. ನೀಡುವುದಾಗಿ ಬಿಜೆಪಿಯವರು ಹೇಳಿದ್ದರು. ಎಲ್ಲಿ ಕೊಟ್ಟಿದ್ದಾರೆ ಎಂದು ಪ್ರಶ್ನೆ ಮಾಡಿದರು. 15 ಲಕ್ಷ ರೂ.ಹಣ ನೀಡುತ್ತೇವೆಂದು ಯಾವಾಗ ಹೇಳಿದ್ದೇವೆ ಎಂಬುದರ ಬಗ್ಗೆ ಸಚಿವರು ದಾಖಲೆ ನೀಡಲಿ ಎಂದರು.
ಕಾಂಗ್ರೆಸ್‌ನವರು ಇಂದಿರಾಗಾಂಧಿ ಕಾಲದಿಂದಲೂ ಗರೀಬಿ ಹಟಾವೋ ಮಾಡುತ್ತಿದ್ದೇವೆ ಎನ್ನುತ್ತಾರೆ. ಅಷ್ಟೊಂದು ಒಳ್ಳೆಯ ಕೆಲಸ ಮಾಡಿದ್ದರೆ ವಿಶ್ವಕ್ಕೆ ಅನ್ನ ನೀಡುವ ಶಕ್ತಿ ಬರಬೇಕಿತ್ತು. ದೇಶದಲ್ಲಿ ಬಡತನ ಹಾಗೂ ಬಡವರು ಇರಬೇಕೆಂಬುದೇ ಕಾಂಗ್ರೆಸ್ ನೀತಿ ಎಂದು ಟೀಕಿಸಿದರು.
ಗೃಹಜ್ಯೋತಿ ಯೋಜನೆ ಚಾಲನೆ ಕಾರ್ಯಕ್ರಮದಲ್ಲಿ ಮಹಾಂತೇಶ್ ಬೀಳಗಿ ಅವರು ಸಚಿವರು ಹೇಳಿದಂತೆ ಕೇಳುವುದಾಗಿ ಹೇಳಿ ಹುದ್ದೆಯ ಘನತೆಯನ್ನೇ ಮರೆತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾ ಸಚಿವರು ಒಂದೆರಡು ಸಂದರ್ಭದಲ್ಲಿ ಪ್ರಾಮಾಣಿಕರು ಇರಬೇಕು ಎಂದು ಹೇಳಿದ್ದರು. ಆದರೆ, ಎಸ್‌ಪಿ ವರ್ಗಾವಣೆ ಹೇಗೆ ಕೈಮೀರಿ ಹೋಯಿತೋ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ಉಪಾಧ್ಯಕ್ಷ ಮಂಜಾನಾಯ್ಕ, ಶ್ರೀನಿವಾಸ ದಾಸಕರಿಯಪ್ಪ, ಹರಿಹರ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಲಿಂಗರಾಜ್ ಸುದ್ದಿಗೋಷ್ಠಿಯಲ್ಲಿದ್ದರು.